ನರೇಗಾ ಅಕ್ರಮ: ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

| Published : Aug 21 2024, 12:38 AM IST

ಸಾರಾಂಶ

ಕನಕಪುರ: ಉಯ್ಯಂಬಳ್ಳಿ ಗ್ರಾಪಂನಲ್ಲಿ ನರೇಗಾ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಜೆಡಿಎಸ್ ಮುಖಂಡ ನಲ್ಲಹಳ್ಳಿ ಶಿವಕುಮಾರ್ ಆರೋಪಿಸಿದರು.

-ಉಯ್ಯಂಬಳ್ಳಿ ಗ್ರಾಪಂನಲ್ಲಿ ನರೇಗಾ ಯೋಜನೆಯ ಕಾಮಗಾರಿ ತನಿಖೆಗೆ ಆಗ್ರಹ

ಕನ್ನಡಪ್ರಭ ವಾರ್ತೆ ಕನಕಪುರ

ಉಯ್ಯಂಬಳ್ಳಿ ಗ್ರಾಪಂನಲ್ಲಿ ನರೇಗಾ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಜೆಡಿಎಸ್ ಮುಖಂಡ ನಲ್ಲಹಳ್ಳಿ ಶಿವಕುಮಾರ್ ಆರೋಪಿಸಿದರು.

ಉಯ್ಯಂಬಳ್ಳಿ ಗ್ರಾಪಂ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆ ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತಿದೆ. ಅರಣ್ಯ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳಬೇಕಾದರೆ ಇಲಾಖೆ ಲಾಗಿನ್ ನಲ್ಲಿ ಎನ್‌ಎಂಆರ್ ತೆಗೆದು ಕಾಮಗಾರಿ ಕೈಗೊಳ್ಳಬೇಕು. ಆದರೆ ಯಾರದ್ದೋ ಅನುಕೂಲಕ್ಕಾಗಿ ನಿಯಮ ಉಲ್ಲಂಘಿಸಿ ಗ್ರಾಪಂ ಲಾಗಿನ್ ನಲ್ಲಿ ಎನ್‌ಎಂಆರ್ ತೆಗೆದು 30 ಜಾಬ್ ಕಾರ್ಡ್‌ಗಳಿಗೆ ಕೂಲಿ ಹಣ ಪಾವತಿ ಹಾಗೂ ಮತ್ತೆ ಕೆಲವು ಕಾಮಗಾರಿಗಳಿಗೆ ಎರಡು, ಮೂರು ಬಾರಿ ಹಣ ಪಾವತಿಸಲಾಗಿದೆ. ಇಂಗು ಗುಂಡಿ ನಿರ್ಮಾಣ ಕಾಮಗಾರಿಯಲ್ಲಿ ಎರಡೇ ವರ್ಷದಲ್ಲಿ ಮೂರು ಬಾರಿ ಹಣ ಪಾವತಿ ಆಗಿದೆ. ಯಾರದ್ದೋ ಹೆಸರಿನ ಪಹಣಿಗೆ ಮತ್ಯಾರದೋ ಜಮೀನಿನಲ್ಲಿ ಬದು ನಿರ್ಮಾಣ ಮಾಡಿದ್ದಾರೆ. ಈ ಪಂಚಾಯತಿಯಲ್ಲಿ ನಿಯಮ ಉಲ್ಲಂಘಿಸಿ ಸಾಕಷ್ಟು ಕಾಮಗಾರಿಗಳನ್ನು ಮಾಡಿ ಹಣ ಬಿಡುಗಡೆ ಮಾಡಿದ್ದಾರೆ. ಇದು ಸಂಪೂರ್ಣ ತನಿಖೆ ಆಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶ್ರೀಧರ್, ಚಂದ್ರು, ಗಣೇಶ್, ಸುರೇಶ್, ಗಿರೀಶ್, ಶೇಖರ್, ರಮೇಶ್, ಕುಮಾರ್, ಸಂಪತ್, ಮಧು, ನಾಗರಾಜು, ಕಾಂತರಾಜು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 02:

ಉಯ್ಯಂಬಳ್ಳಿ ಗ್ರಾಪಂನಲ್ಲಿ ನರೇಗಾ ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸಿರುವುದನ್ನು ಖಂಡಿಸಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದರು.