ನರೇಗಾ ಗ್ರಾಮೀಣರ ಬದುಕಿಗೆ ಆಶಾಕಿರಣ

| Published : Mar 30 2024, 12:46 AM IST

ಸಾರಾಂಶ

ಗುಳೇದಗುಡ್ಡ: ಊರು ಬಿಟ್ಟು ಪಟ್ಟಣಗಳಿಗೆ ಹೋಗಿ ಕೂಲಿ ಮಾಡುವ ಬದಲು ಸ್ವಂತ ಗ್ರಾಮದಲ್ಲಿಯೇ ಇದ್ದುಕೊಂಡು ನರೇಗಾ ಯೋಜನೆಯ ಕೂಲಿ ಕೆಲಸ ಮಾಡಲು ಸರ್ಕಾರ ಸಾಕಷ್ಟು ಅನುಕೂಲ ಮಾಡಿದೆ. ಹೀಗಾಗಿ ನರೇಗಾ ಯೋಜನೆ ಗ್ರಾಮೀಣ ಜನರ ಬದುಕಿನ ಆಶಾಕಿರಣ ಆಗಿದೆ ಎಂದು ನರೇಗಾ ಯೋಜನೆಯ ತಾಲೂಕು ಸಹಾಯಕ ನಿರ್ದೇಶಕ ಆರ್.ಎಸ್.ಮೇತ್ರಿ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಊರು ಬಿಟ್ಟು ಪಟ್ಟಣಗಳಿಗೆ ಹೋಗಿ ಕೂಲಿ ಮಾಡುವ ಬದಲು ಸ್ವಂತ ಗ್ರಾಮದಲ್ಲಿಯೇ ಇದ್ದುಕೊಂಡು ನರೇಗಾ ಯೋಜನೆಯ ಕೂಲಿ ಕೆಲಸ ಮಾಡಲು ಸರ್ಕಾರ ಸಾಕಷ್ಟು ಅನುಕೂಲ ಮಾಡಿದೆ. ಹೀಗಾಗಿ ನರೇಗಾ ಯೋಜನೆ ಗ್ರಾಮೀಣ ಜನರ ಬದುಕಿನ ಆಶಾಕಿರಣ ಆಗಿದೆ ಎಂದು ನರೇಗಾ ಯೋಜನೆಯ ತಾಲೂಕು ಸಹಾಯಕ ನಿರ್ದೇಶಕ ಆರ್.ಎಸ್.ಮೇತ್ರಿ ಹೇಳಿದರು.

ತಾಲೂಕಿನ ಹಂಸನೂರ ಗ್ರಾಪಂ ವ್ಯಾಪ್ತಿಯ ರಾಘಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಖಾತ್ರಿ ಅಭಿಯಾನದಲ್ಲಿ ನರೇಗಾ ಯೋಜನೆಯ ವಿವಿಧ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿದ ಅವರು, ವಲಸೆ ತಪ್ಪಿಸಲು ಸರ್ಕಾರ ತಂದಿರುವ ನರೇಗಾ ಯೋಜನೆ ಬಹಳ ಅನುಕೂಲವಾಗಿದೆ. ಒಂದು ಕುಟುಂಬಕ್ಕೆ ಕೊಡುವ 100 ದಿನಗಳ ಕೂಲಿ ಕೆಲಸವನ್ನು ವರ್ಷವಿಡಿ ಮಾಡಿ ತಮ್ಮ ಗ್ರಾಮದಲ್ಲಿಯೇ ಇರಬಹುದು. ದೂರದ ಪಟ್ಟಣಕ್ಕೆ ಕೂಲಿಗಾಗಿ ಹೋಗುವುದನ್ನು ಬಿಟ್ಟುಬಿಡಿ ಎಂದು ಕೂಲಿ ಕಾರ್ಮಿಕರಿಗೆ ಕಿವಿಮಾತು ಹೇಳಿದರು.

ಗ್ರಾಪಂ ಪಿಡಿಒ ಮಂಜುನಾಥ ಅರಳಿಕಟ್ಟಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ಪಂಚಾಯತಿ ವ್ಯಾಪ್ತಿಯಲ್ಲಿ ರೈತರಿಗಾಗಿ ನರೇಗಾ ಯೋಜನೆ ಬಹಳ ಅನುಕೂಲವಾಗಿದೆ. ಅದರ ಸದುಪಯೋಗ ಮಾಡಿಕೊಳ್ಳಿ, ಜಾಬ್ ಕಾರ್ಡ್‌ಗಳ ಅಪ್ಡೇಟ್ ಮಾಡುವ ಹಾಗೂ ವಿಭಜನೆ ಮಾಡುವ ಕುರಿತು, ಜಾಬ್ ಕಾರ್ಡ್‌ ವಿಭಜನೆ, ನರೇಗಾ ಯೋಜನೆಯಲ್ಲಿ ಕೂಲಿ ಮೊತ್ತ ಪಡೆಯುವ ವಿಧಾನ, ಕೆಲಸದ ಸ್ಥಳಗಳಲ್ಲಿ ಸಿಗುವ ಸೌಲಭ್ಯಗಳ ಕುರಿತು ಮೇತ್ರಿ ಮಾಹಿತಿ ನೀಡಿದರು.ಅಲ್ಲದೇ, ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಕೂಸಿನ ಮನೆ ಪ್ರಾರಂಭಿಸಲಾಗಿದ್ದು, ಮಕ್ಕಳನ್ನು ಕೇಂದ್ರದಲ್ಲಿ ಬಿಟ್ಟು ಕೆಲಸಕ್ಕೆ ಹೋಗಬೇಕು ಎಂದು ಹೇಳಿದರು.

ಆರಂಭದಲ್ಲಿ ಎನ್ಎಂಎಂಎಸ್ ಆಪ್ ಕುರಿತು ಕಡ್ಡಾಯವಾಗಿ 2 ಸಾರಿ ಹಾಜರಾತಿ ಹಾಕುವ ಮಾಹಿತಿ ನೀಡಲಾಯಿತು. ಹಾಗೂ 150 ಕೂಲಿ ಕಾರ್ಮಿಕರಿಂದ ನಮೂನೆ-6 ರಲ್ಲಿ ಕೆಲಸಕ್ಕಾಗಿ ಬೇಡಿಕೆ ಪಡೆದು, ಎನ್‌ಪಿಸಿಐ ಬಾಕಿ ಉಳಿಸಿಕೊಂಡ ಕೂಲಿ ಕಾರ್ಮಿಕರಿಗೆ ಕೂಡಲೇ ಮಾಹಿತಿ ನೀಡುವಂತೆ ತಿಳಿಸಲಾಯಿತು. ಗ್ರಾಪಂ ಸದಸ್ಯ ಬಸವರಾಜ ಕುರುಬಣ್ಣವರ, ರೇಣವ್ವ ಮುತ್ತಲಗೇರಿ, ತಾಪಂ ಮಾಜಿ ಸದಸ್ಯ ಯಮನಪ್ಪ ಒಡ್ಡರ ಹಾಗೂ ಗ್ರಾಮಸ್ಥರು ಹಾಜರಿದ್ದರು. ಕಾರ್ಯಕ್ರಮದ ಬಳಿಕ ಗ್ರಾಮದ ಮನೆ-ಮನೆ ಭೇಟಿ ನೀಡಿ ಕೂಲಿಕಾರರಿಂದ ಕೂಲಿ ಬೇಡಿಕೆಯ ಮಾಹಿತಿ ಸಂಗ್ರಹಿಸಲಾಯಿತು.