ಬಂಟ್ವಾಳ: ನರೇಗಾದಲ್ಲಿರುವ ಕುಂದುಕೊರತೆ ನಿವಾರಿಸಿ ಯೋಜನೆ ಪರಿಷ್ಕರಿಸಿ, 100 ದಿನ ಇದ್ದ ಉದ್ಯೋಗ 125 ದಿನ ಆಗಿರುವುದು ಲಾಭವಾ ನಷ್ಟವಾ ಎಂದು ಜನರು ಅರ್ಥಮಾಡಿಕೊಳ್ಳಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕಲು ಹಾಗೂ ಕೇಂದ್ರ ಸರಕಾರದ ಹೊಸ ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲು ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಬಂಟ್ವಾಳ ಮಂಡಲದ ವತಿಯಿಂದ ಬುಧವಾರ ಬಿಸಿರೋಡಿನಲ್ಲಿ ಹಮ್ಮಿಕೊಂಡ ಜಿ ರಾಮ ಜಿ ಯೋಜನೆ ಪರ ಬೃಹತ್ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಜೊತೆಗೆ ಭ್ರಷ್ಟಾಚಾರವನ್ನು ಕಡಿಮೆ ಮಾಡುವುದೇ ಕೇಂದ್ರ ಸರ್ಕಾರದ ಗುರಿಯಾಗಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದಿಯೇ ಹೊರತು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ಜನಪರವಾದ ಯೋಜನೆಗಳಿಗೆ ಸಹಕಾರವನ್ನು ನೀಡುತ್ತಿಲ್ಲ ಎಂದವರು ಆರೋಪಿಸಿದರು.

ಬಂಟ್ವಾಳ ವಿಧಾನ ಸಭಾ ಕ್ಷೇತ್ರಲ್ಲಿನ ಬಹುತೇಕ ಗ್ರಾ.ಪಂ.ಗಳಲ್ಲಿ ಜಿ.ರಾಮ್ ಜಿ.ಕಾಯ್ದೆಯೇ ಬೇಕು ಎಂದು ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಿದ್ದಾರೆ ಇದು ಅತ್ಯಂತ ಸಂತಸದ ವಿಚಾರ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮ ಪಂಚಾಯತ್ ಗಳಿಗೆ ತೆರಳಿ ಹೊಸ ಕಾಯ್ದೆಯ ಮೂಲಕ ಗ್ರಾಮೀಣ ಬಡಜನರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯ ಆಗಬೇಕಾಗಿದೆ ಎಂದು ಶಾಸಕರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್‌ ಸಿಂಹ ನಾಯಕ್ ಮಾತನಾಡಿ, ಕಾಂಗ್ರೆಸ್ ಪಕ್ಷ ಹತಾಶೆ ಭಾವನೆಯಿಂದ ಜಿ‌.ರಾಮ್.ಜಿ.ಯನ್ನು ವಿರೋಧ ಮಾಡುತ್ತಿದೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆಯಾಗುತ್ತಿದ್ದು, ಕುರ್ಚಿಯನ್ನು ಉಳಿಸಿಕೊಳ್ಳಲು ಅಭಿಯಾನವೇ ನಡೆಯುತ್ತಿದೆ. ಗ್ಯಾರಂಟಿ ಯೋಜನೆ ನೆಪದಲ್ಲಿ ಜನರನ್ನು ಮೋಸಮಾಡಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದೆ ಎಂಬ ಆರೋಪಿಸಿದ ಅವರು, ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡುವ ಕಾಂಗ್ರೆಸ್ ಗಾಂಧಿಯವರ ಹೆಸರಿನಲ್ಲಿ ಭ್ರಷ್ಟಾಚಾರ ಮಾಡುತ್ತಿದೆ ಎಂದರು.


ಕೈಕಂಬ ಪೊಳಲಿ ದ್ವಾರದಿಂದ ಬಿಸಿರೋಡಿನವರೆಗೆ ಬೃಹತ್ ಪಾದಯಾತ್ರೆ ನಡೆಯಿತು. ಬಂಟ್ವಾಳ ಮಂಡಲದ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪಕ್ಷದ ಪ್ರಮುಖರಾದ ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ದಿನೇಶ್ ಅಮ್ಟೂರು, ಮಾದವ ಮಾವೆ, ಸುಲೋಚನ ಜಿ.ಕೆ.ಭಟ್, ಸಂದೇಶ್ ಶೆಟ್ಟಿ, ರವೀಂದ್ರ ಕಂಬಳಿ, ತುಂಗಪ್ಪ ಬಂಗೇರ, ಡೊಂಬಯ್ಯ ಅರಳ, ರಾಮ್ ದಾಸ ಬಂಟ್ವಾಳ, ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ, ಕಮಲಾಕ್ಷಿ ಪೂಜಾರಿ, ದಿನೇಶ್ ಶೆಟ್ಟಿ ದಂಬೆ, ದಿನೇಶ್ ಭಂಡಾರಿ, ಪುರಸಭಾ ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ವಿವಿಧ ಜವಬ್ದಾರಿಯ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.