ಸಾರಾಂಶ
ಕುಷ್ಟಗಿ: ತಾಲೂಕಿನ ಬಿಜಕಲ್ ಗ್ರಾಪಂ ವ್ಯಾಪ್ತಿಯ ಬೋದೂರು ತಾಂಡಾದಲ್ಲಿ ಕೇಕ್ ಕತ್ತರಿಸಿ ನರೇಗಾ ಯೋಜನೆ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ತಾಪಂ ಇಒ ನಿಂಗಪ್ಪ ಮಸಳಿ ಚಾಲನೆ ನೀಡಿ ಮಾತನಾಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ದಿನವನ್ನು ನರೇಗಾ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ತಾಲೂಕಿನ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.ನರೇಗಾ ಯೋಜನೆಯಲ್ಲಿ ಉದ್ಯೋಗ ಖಾತರಿ ಕಾರ್ಡುಗಳನ್ನು ಹೊಂದಿದ ಕುಟುಂಬಕ್ಕೆ 100 ದಿನಗಳ ಕಾಲ ಕೆಲಸ ನೀಡುವ ಮೂಲಕ ಅವರ ಕುಟುಂಬದ ನಿರ್ವಹಣೆಗೆ ಅನೂಕೂಲವಾಗುವಂತೆ ನೋಡಿಕೊಳ್ಳುತ್ತಿದೆ. ಗಿಡ ಸದೃಢವಾಗಿರಲು ಬೇರು ಗಟ್ಟಿಯಾಗಿರಬೇಕು. ಗ್ರಾಮೀಣ ಜನರು ಪ್ರಗತಿಯಾಗಲು ನರೇಗಾ ಯೋಜನೆಯ ಬಲವಿರಬೇಕು ಎಂದು ಹೇಳಿದರು.
ಸಹಾಯಕ ನಿರ್ದೇಶಕ ಲಿಂಗನಗೌಡ ಹಿರೇಹಾಳ ಮಾತನಾಡಿ, ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮೀಣ ಭಾಗದ ಸಮಗ್ರ ಶಾಲಾ ಅಭಿವೃದ್ಧಿಯಡಿ ಹೈಟೆಕ್ ಶೌಚಾಲಯ ನಿರ್ಮಾಣ, ತಡೆಗೋಡೆ ನಿರ್ಮಾಣ, ಮಳೆ ನೀರಿನ ಕೊಯ್ಲು, ಪೌಷ್ಟಿಕ ಕೈತೋಟ, ಶಾಲಾ ಅಡುಗೆ ಕೋಣೆ ಮತ್ತು ಭೋಜನಾಲಯ, ಆಟದ ಅಂಕಣಗಳ ನಿರ್ಮಾಣಗಳಿಂದ ಗ್ರಾಮೀಣ ವಿದ್ಯಾರ್ಥಿಗಳ ಬೌದ್ಧಿಕ, ಆರೋಗ್ಯ ಮತ್ತು ಶಿಕ್ಷಣಕ್ಕೆ ಮಹತ್ವವನ್ನು ನೀಡಿ ಪ್ರತಿಭೆಗಳು ಹೊರಬರಲು ಒತ್ತು ನೀಡಲಾಗಿದೆ ಎಂದರು.ಅಂತರ್ಜಲ ಮಟ್ಟ, ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಾದ ಅಮೃತ ಸರೋವರ ಕೆರೆಗಳ ನಿರ್ಮಾಣ, ಕಂದಕ ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಅಭಿವೃದ್ಧಿಯಿಂದ ತಾಲೂಕಿನ ರೈತರ ಹೊಲಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡಿದೆ. ಹೊಲದಲ್ಲಿ ತೇವಾಂಶ, ಫಲವತ್ತತೆ ಹೆಚ್ಚಿಸಲಾಗಿದೆ. ರೈತರು ಆರ್ಥಿಕ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಪ್ರೋತ್ಸಾಹಿಸಲಾಗಿದೆ ಎಂದರು.
ಐಇಸಿ ಚಟುವಟಿಕೆಗಳನ್ನು ಗ್ರಾಪಂಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಹಿಳಾ ಕಾಯಕೋತ್ಸವ ಅಭಿಯಾನದಡಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಬೇಕು. ಇದರಿಂದ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ದುಡಿಯೋಣ ಬಾ ಅಭಿಯಾನದ ಮುಖಾಂತರ ಹಿರಿಯ ನಾಗರೀಕರಿಗೆ, ವಿಕಲಚೇತನರಿಗೆ, ಲಿಂಗತ್ವ ಅಲ್ಪ ಸಂಖ್ಯಾತರಿಗೆ, ಸಣ್ಣ ಅತೀ ಸಣ್ಣ ರೈತರಿಗೆ, ಎಸ್ಸಿ, ಎಸ್ಟಿ ವರ್ಗದವರಿಗೆ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳಲ್ಲಿ ಕೆಲಸ ಮತ್ತು ಕಾಯಕ ಸಂಘಗಳನ್ನು ರಚಿಸಿ ಯೋಜನೆಯನ್ನು ಬಲಪಡಿಸಿ ನೈಜ್ಯ ಬೇಡಿಕೆಯನ್ನು ಆಧರಸಿ ಕೆಲಸ ಒದಗಿಸಿ ಗ್ರಾಮೀಣ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಲಾಗಿದೆ ಎಂದರು.ನರೇಗಾ ಯೋಜನೆಯಡಿ 100 ದಿನಗಳನ್ನು ಪೂರೈಸಿರುವ ಕುಟುಂಬ ವ್ಯಕ್ತಿಗಳಿಗೆ ಗೌರವ ಸಲ್ಲಿಸಲಾಯಿತು.
ಕಾಮಗಾರಿ ಸ್ಥಳಗಳಲ್ಲಿ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿತ್ತು, ಇ-ಶ್ರಮ್ ಕಾರ್ಡ ಹಾಗೂ ಎಬಿಆರ್‌ಕೆ ಕಾರ್ಡ ವಿತರಣೆ ಮಾಡಲಾಯಿತು. ಜಲ ಸಂಜೀವಿನಿಯ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಗೌಡಪ್ಪಗೌಡ ಕಂದಗಲ್, ಪಿಡಿಒ ಆನಂದರಾವ ಕುಲಕರ್ಣಿ, ಗ್ರಾಪಂ ಸದಸ್ಯರಾದ ಭೀಮೇಶ, ಯಮನಪ್ಪ, ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ, ಆರೋಗ್ಯ ಇಲಾಖೆ ಸಿಬ್ಬಂದಿ ನಾಗೇಶ ಭೋವಿ, ಚೆನ್ನಬಸಪ್ಪ ಹನುಮನಾಳ, ಎಸ್.ಎಸ್. ಪಾಟೀಲ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ನೀಲಕಂಠಪ್ಪ, ಬಾಲಾಜಿ, ಯಂಕಪ್ಪ, ಹನುಮಂತಪ್ಪ, ಸ್ವಾತಿ, ಕೂಲಿ ಕಾರ್ಮಿಕರು ಇದ್ದರು.