ಸಾರಾಂಶ
ಕನ್ನಡಪ್ರಭ ವಾರ್ತೆ ಕೂಡ್ಲಿಗಿ (ವಿಜಯನಗರ)
ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿಯ ಚುನಾವಣೆಯಲ್ಲಿ ಹತಾಶರಾಗಿದ್ದಾರೆ. ಗೆಲ್ಲುವ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿ, ಪದೇ ಪದೆ ಸುಳ್ಳು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಸೋಮವಾರ ಕಾಂಗ್ರೆಸ್ ಪರ ಪ್ರಚಾರ ಭಾಷಣ ಮಾಡಿದ ಸಿಎಂ, ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಓಡಾಡುವ ಮೂಲಕ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯನ್ನು ಮೋದಿಯವರು ಇಟ್ಟುಕೊಂಡಿದ್ದಾರೆ. ಆದರೆ, ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿಯವರು ಸ್ವತ: ಮಾಡಿಸಿದ ಸರ್ವೇ ಪ್ರಕಾರ ಬಿಜೆಪಿ 200 ರಿಂದ 220 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಖಾಸಗಿ ಕಂಪನಿ ನಡೆಸಿದ ಸಮೀಕ್ಷೆಯೊಂದರಲ್ಲಿ ಬಿಜೆಪಿ 260 ರಿಂದ 220 ಸ್ಥಾನಗಳನ್ನು ಪಡೆಯುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ಇದನ್ನು ಮೋದಿ ಡಿಲೀಟ್ ಮಾಡಿಸುವ ಮೂಲಕ ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದರು.ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು 28ರಲ್ಲಿ 25 ಸ್ಥಾನ ಗೆದ್ದರೂ ಅದು ಭಾವನಾತ್ಮಕ ವಿಚಾರ ಪ್ರಸ್ತಾಪ ಮಾಡಿ ಗೆದ್ದಿದ್ದಾರೆ. ಪುಲ್ವಾಮ ವಿಚಾರ ಪ್ರಸ್ತಾಪ ಮಾಡಿದ್ರು. ದೇಶದ ರಕ್ಷಣೆಗೆ ಮೋದಿ ಮಾತ್ರ ಎಂದುಕೊಂಡು ಜನ ಮತ ನೀಡಿದ್ರು. ಈಗ ಯಾವುದೇ ಭಾವನಾತ್ಮಕ ವಿಚಾರವಿಲ್ಲ. ಹೀಗಾಗಿ ಸುಳ್ಳು ಹೇಳ್ತಿದ್ದಾರೆ ಎಂದರು.
ಕೇಂದ್ರದಿಂದ ಬರ ಪರಿಹಾರ ನೀಡಿರಲಿಲ್ಲ. ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಮೇಲೆ ಶೇ.10ರಷ್ಟು ಮಾತ್ರ ಬರದ ಹಣ ನೀಡಿದ್ದಾರೆ. ದೇಶದ ಜನರಿಗೆ ಮೋದಿ ಖಾಲಿ ಚೊಂಬು ನೀಡಿದ್ದಾರೆ ಎಂದು ಟೀಕಿಸಿದರು.ಎಲ್ಲ ಕಾಲದಲ್ಲಿಯೂ ಆರ್‌ಎಸ್‌ಎಸ್ ಮೀಸಲಾತಿ ವಿರೋಧಿಸಿದೆ. ಬಿಜೆಪಿ ಮೀಸಲಾತಿ ಪರ ಇಲ್ಲ. ಸಂವಿಧಾನ ಬದಲಾವಣೆ ಮಾಡೋರಿದ್ದಾರೆ. ಮೋದಿ ಸಂವಿಧಾನದ ವಿರುದ್ಧ ಮಾತನಾಡ್ತಿದ್ದಾರೆ. ಆದರೆ, ಸಂವಿಧಾನಕ್ಕೆ ವಿರುದ್ಧವಾಗಿ ಯಾರೂ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ನಾವೆಂದೂ ಶಿವಾಜಿ ಮಹಾರಾಜರು ಹಾಗೂ ಕಿತ್ತೂರು ರಾಣಿ ಚೆನ್ನಮ್ಮಗೆ ಅವಮಾನ ಮಾಡಿಲ್ಲ. ಸರ್ಕಾರದಿಂದ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಆಚರಿಸಲು ನಾನೇ ಆದೇಶ ಮಾಡಿದ್ದೇನೆ. ವಾಸ್ತವವಾಗಿ ಬಿಜೆಪಿಯವರೇ ಶಿವಾಜಿ ಮಹಾರಾಜರು ಹಾಗೂ ಕಿತ್ತೂರು ರಾಣಿ ಚೆನ್ನಮ್ಮಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.ಸಿದ್ದು ‘ಚೊಂಬೋ ಚೊಂಬೋ...’ ಹಾಡು!ಶ್ರೀರಾಮಲು ಅವರನ್ನು ಸಂಸದರನ್ನಾಗಿ ಈ ಹಿಂದೆ ಆಯ್ಕೆ ಮಾಡಿದ್ದರೂ ಬಳ್ಳಾರಿ ಜಿಲ್ಲೆಯಲ್ಲಿ ಏನೂ ಅಭಿವೃದ್ಧಿ ಮಾಡಲಿಲ್ಲ. ಚೊಂಬು ನೀಡಿದ್ದಾರೆ ಎಂದು ಖಾಲಿ ಚೊಂಬನ್ನು ಜನತೆಗೆ ತೋರಿಸಿ ಸಿದ್ದರಾಮಯ್ಯನವರು ‘ಚೊಂಬೋ ಚೊಂಬೋ...’ ಎಂದು ಹಾಡು ಹಾಡಿದರು.ಬಳ್ಳಾರಿಯ ಸಭೆಯಲ್ಲಿ ನೆರೆದಿದ್ದ ಸಹಸ್ರಾರು ಕಾರ್ಯಕರ್ತರು ಸಿದ್ದರಾಮಯ್ಯ ಮಾತಿಗೆ ಧ್ವನಿಗೂಡಿಸಿ, ಹುಚ್ಚೆದ್ದು ಕುಣಿಯುತ್ತಾ ‘ಚೊಂಬೋ ಚೊಂಬೋ... ’ಎಂದು ಕೂಗಿದರು. ಸಿದ್ದರಾಮಯ್ಯನವರು ತಮ್ಮ ಭಾಷಣದಲ್ಲಿ ವೇದಿಕೆ ಮೇಲೆ ಹತ್ತಾರು ಬಾರಿ ಚೊಂಬು ತೋರಿಸಿ, ಬಿಜೆಪಿಯನ್ನು ಟೀಕಿಸಿದರು. ಮೋದಿ ಸಹ ಈ ದೇಶದ ಜನತೆಗೆ ಖಾಲಿ ಚೊಂಬು ನೀಡಿದ್ದಾರೆ. ಹೀಗಾಗಿ, ಈ ಬಾರಿ ಶ್ರೀರಾಮುಲುಗೆ ಖಾಲಿ ಚೊಂಬು ನೀಡಿ ಮನೆಗೆ ಕಳುಹಿಸಿ ಎಂದು ಜನರಿಗೆ ಕರೆ ನೀಡಿದರು.