ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಪ್ರಧಾನಿ ನರೇಂದ್ರ ಮೋದಿ ಕಲಿಯುಗದ ಶ್ರೀರಾಮನಾದರೆ ಯೋಗಿ ಆದಿತ್ಯನಾಥ ಹನುಮಂತನಂತಿರುವರು. ಈ ಇಬ್ಬರು ಇರುವುದರಿಂದಲೇ ನಾವೆಲ್ಲ ಶ್ರೀರಾಮ ಮಂದಿರ ಮೂರ್ತಿಯ ಪ್ರಾಣ ಪ್ರತಿಷ್ಟಾಪನೆ ದಿನ ನೋಡುತ್ತಿದ್ದೇವೆ ಎಂದು ಅಟಲ್ ಬಿಹಾರಿ ವಾಜಪೇಯಿ ಫೌಂಡೇಶನ್ ಅಧ್ಯಕ್ಷ ಗುರುನಾಥ ಕೊಳ್ಳುರ್ ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲೆಯ ಮಠಾಧೀಶರ ಒಕ್ಕೂಟ ಹಾಗೂ ರಾಮಲೀಲಾ ಉತ್ಸವ ಸಮಿತಿಯು ರಾಮೋತ್ಸವ ಕಾರ್ಯಕ್ರಮ ನಿಮಿತ್ತ ಆಯೋಜಿಸಿದ್ದ ‘ಮರಳಿ ಬಾ ರಾಮ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಯೋಧ್ಯೆಗೂ ಬೀದರ್‌ಗೂ ಅವಿನಾಭಾವ ಸಂಬಂಧವಿದ್ದು, ಇಲ್ಲಿ ಶ್ರೀರಾಮ ಬಂದು ಪಾಪನಾಶ ಲಿಂಗ ಸ್ಥಾಪಿಸಿ, ಇಲ್ಲಿಯ ಕೆರೆಯಲ್ಲಿ ಸ್ನಾನ ಮಾಡಿ ಪಾಪ ತೊಳೆದುಕೊಂಡಿರುವರೆಂಬ ಪ್ರತೀತಿ ಇದೆ ಎಂದರು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, 500 ವರ್ಷ ವನವಾಸ ಮುಗಿಸಿ ನಾವಿಂದು ಶ್ರೀರಾಮನನ್ನು ಅಯೋಧ್ಯೆಯಲ್ಲಿ ಕುಳ್ಳಿರಿಸಿದ್ದೇವೆ. ಲಕ್ಷಾವಧಿ ಕರ ಸೇವಕರ ತ್ಯಾಗದ ಫಲವಾಗಿ ಇಂದು ವಿಶ್ವ ನಮ್ಮ ಕಡೆ ನೋಡುವಂತಾಗಿದೆ ಎಂದು ಬಣ್ಣಿಸಿದರು.ಮಾಜಿ ವಿಧಾನ ಪರಿಷತ್ ಸಭಾಪತಿ ಹಾಗೂ ಹಾಲಿ ಎಂಎಲ್‌ಸಿ ರಘುನಾಥರಾವ್ ಮಲ್ಕಾಪುರೆ ಮಾತನಾಡಿ, ಮತ್ತೇ ನಮ್ಮ ದೇಶ ರಾಮ ರಾಜ್ಯವಾಗಬೇಕಿದೆ. ಅದಕ್ಕಾಗಿ ನಾವೆಲ್ಲ ಪಣ ತೊಡಬೇಕಾಗಿದೆ ಎಂದರು. ಗಡಿಗೌಡಗಾಂವ್‌ದ ಶಾಂತವೀರ ಶಿವಾಚಾರ್ಯರು ಮಾತನಾಡಿ, ಇಂದು ಭಾರತ ರಾಮ ಮಯವಾಗುವ ಮೂಲಕ ವಿಶ್ವದ ಗಮನ ಸೆಳೆಯಲು ಕಾರಣವಾಗಿದೆ. ನಮ್ಮ ದೇಶ ಮತ್ತೇ ವಿಶ್ವದ ಗುರುವಾಗುವ ಕಾಲ ಕೂಡಿ ಬಂದಿದೆ ಎಂದರು.
ಡೋಣಗಾಂವನ ಡಾ. ಶಂಭುಲಿಂಗ ಶಿವಾಚಾರ್ಯರು ಮಾತನಾಡಿ, 500 ವರ್ಷಗಳಿಂದ ತುದಿ ಗಾಲಲ್ಲಿ ಕಾಯುತ್ತಿದ್ದ ರಾಮ ಮಂದಿರ ಉದ್ಘಾಟನೆ ಇಂದು ನನಸಾಗಿದೆ. ಇದು ರಾಮ ದೀಪಾವಳಿ ಎಂತಲೂ ಕರೆಯಬಹುದಾಗಿದೆ ಎಂದರು.ರಾಮಲೀಲಾ ಉತ್ಸವ ಸಮಿತಿಯ ಗೌರವಾಧ್ಯಕ್ಷ ಈಶ್ವರಸಿಂಗ್ ಠಾಕೂರ್ ಮಾತನಾಡಿ, ರಾಮ ಮಂದಿರಕ್ಕಾಗಿ ನಡೆದ ಯುದ್ಧ ಸ್ವಾತಂತ್ರ್ಯ ಚಳುವಳಿಗಿಂತ ಕಡಿಮೆ ಏನಿಲ್ಲ. 1990, 19992, 2001ರಲ್ಲಿ ಆಗಿನ ಸರ್ಕಾರಗಳು ಕರಸೇವಕರ ಮೇಲೆ ಗುಂಡಿನ ಸುರಿಮಳೆ ಸುರಿಸಿರುವದು ದೊಡ್ಡ ದುರಂತ ಎಂದರು.
ಮಠಾಧೀಶರ ಒಕ್ಕೂಟದ ಅಧ್ಯಕ್ಷ ಜಯಶಾಂತಲಿಂಗ ಮಹಾಸ್ವಾಮಿಗಳು, ಕಾರ್ಯಕ್ರಮ ಆಯೋಜಕರ ಗಿರಿರಾಜ ಯಳಮೆಲಿ, ನಂದಕುಮಾರ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಹವಾ ಮಲ್ಲಿನಾಥ ಮಹಾರಾಜರು, ರಾಜೇಶ್ವರದ ಶಿವಾಚಾರ್ಯರು, ಸೇರಿದಂತೆ ಅನೇಕ ಮಠಾಧೀಶರು, ಬಿಜೆಪಿ ಯುವ ಮುಖಂಡ ಚನ್ನಬಸವ ಬಳತೆ, ನಾಗರಾಜ ಕರ್ಪೂರ್, ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ, ವೀರಶೆಟ್ಟಿ ಮಣಗೆ, ಡಾ. ರಜನೀಶ ವಾಲಿ, ಶಕುಂತಲಾ ಬೆಲ್ದಾಳೆ, ರಾಮಲೀಲಾ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಗಾದಾ, ಪ್ರಧಾನ ಕಾರ್ಯದರ್ಶಿ ಮಹೇಶ್ವರ ಸ್ವಾಮಿ, ಸದಸ್ಯರಾದ ರಾಜಕುಮಾರ ಜಮಾದಾರ, ಸುನೀಲ ಕಟಗಿ, ಸುನೀಲ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಲಾವಿದೆ ಶಾಂಭವಿ ಕಲ್ಮಠ, ರೇಷ್ಮಾ ಶರ್ಮಾ, ವಿನಯ ಜಿ.ಎಚ್, ವಂದೆ ಮಾತರಂ ಶಾಲೆ, ಗುಡವಿಲ್ ಶಾಲೆ, ದತ್ತಗಿರಿ ಮಹಾರಾಜ ಪ್ರೌಢಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ರಾಮ ಹಾಗೂ ಸೀತೆಯ ಅವತಾರವುಳ್ಳ 498 ಪುಟಾಣಿಗಳು ಜನಮನ ಸೆಳೆದರು. ನಂತರ ಕಾರ್ಯಕ್ರಮ ಉದ್ಘಾಟನೆಗೊಂಡಿತ್ತು.