ವಿಶ್ವದಲ್ಲೇ ಭಾರತದ ಗೌರವ ಹೆಚ್ಚಿಸಿದ ನಾಯಕ ಮೋದಿ: ಕೊಪ್ಪಳ ಸಂಸದ ಸಂಗಣ್ಣ ಕರಡಿ

| Published : Jan 18 2024, 02:01 AM IST

ವಿಶ್ವದಲ್ಲೇ ಭಾರತದ ಗೌರವ ಹೆಚ್ಚಿಸಿದ ನಾಯಕ ಮೋದಿ: ಕೊಪ್ಪಳ ಸಂಸದ ಸಂಗಣ್ಣ ಕರಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಬಿಜೆಪಿ ಸರ್ಕಾರ ಜನ ಕಲ್ಯಾಣಕ್ಕಾಗಿ ಉತ್ತಮ ಯೋಜನೆಗಳನ್ನು ನೀಡುತ್ತಿದೆ. ಪ್ರತಿಯೊಂದು ಕುಟುಂಬಕ್ಕೆ ಒಂದಿಲ್ಲೊಂದು ಯೋಜನೆ ತಲುಪಿವೆ. ಈ ಬಗ್ಗೆ ಜಾಗೃತಿ ಮೂಡಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು.

ಕೊಪ್ಪಳ: ದೇಶವನ್ನು ಕಂಡು ಹಾವಾಡಿಗರ ದೇಶ ಎಂದು ಜರಿದವರೇ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡುತ್ತಾರೆ. ಈ ಮೂಲಕ ವಿಶ್ವದಲ್ಲಿಯೇ ಭಾರತದ ಗೌರವ ಹೆಚ್ಚಾಗುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಅಭಿಪ್ರಾಯಪಟ್ಟರು.

ಸಮೀಪದ ಭಾಗ್ಯನಗರದಲ್ಲಿ ನಮ್ಮ ಸಂಕಲ್ಪ ವಿಕಸತ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಗತ್ತಿನಾದ್ಯಂತ ಭಾರತಕ್ಕೆ ಇಂದು ಭಾರಿ ಗೌರವ ದೊರೆಯುತ್ತಿದೆ. ಅಮೆರಿಕ ಸೇರಿದಂತೆ ಜಗತ್ತಿನ 14 ದೇಶಗಳು ಇಂದು ಭಾರತವನ್ನು ವಿಶ್ವದ ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡುತ್ತಿವೆ ಎನ್ನುವುದು ಸಾಮಾನ್ಯ ಸಾಧನೆಯೇನಲ್ಲ ಎಂದರು.

ಕೇಂದ್ರ ಬಿಜೆಪಿ ಸರ್ಕಾರ ಜನ ಕಲ್ಯಾಣಕ್ಕಾಗಿ ಉತ್ತಮ ಯೋಜನೆಗಳನ್ನು ನೀಡುತ್ತಿದೆ. ಪ್ರತಿಯೊಂದು ಕುಟುಂಬಕ್ಕೆ ಒಂದಿಲ್ಲೊಂದು ಯೋಜನೆ ತಲುಪಿವೆ. ಈ ಬಗ್ಗೆ ಜಾಗೃತಿ ಮೂಡಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದರು.ಪ್ರಧಾನ ನರೇಂದ್ರ ಮೋದಿ ಜಗತ್ತು ಮೆಚ್ಚಿದ ವಿಶ್ವದ ನಾಯಕ. ವಿಶ್ವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಕ್ತಿ ಹೆಚ್ಚಿದೆ. ಭಾರತ ನೋಡುವ ದೃಷ್ಟಿಕೋನ ಬದಲಾಗಿದೆ. ಅವುಗಳ ಬಗ್ಗೆ ಜನರ ಬಗ್ಗೆ ತಿಳಿ ಹೇಳಿ. ಜಿಲ್ಲೆಗೆ ಬಿಜೆಪಿ ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು ಎಂದರು.ಸರ್ಕಾರ ಯೋಜನೆಗಳ ಲಾಭ ಪಡೆದ ಫಲಾನುಭವಿಗಳನ್ನು ಗುರುತಿಸಿ ಮತವಾಗಿ ಪರಿವರ್ತಿಸಬೇಕು. ಕೇಂದ್ರ ಸರ್ಕಾರದ ಸಾಧನೆ ಮನೆ ಮನೆಗೆ ತಲುಪಿಸಬೇಕು. ಬಿಜೆಪಿ ಯಾವ ರೀತಿ ಅಭಿವೃದ್ಧಿ ಮಾಡಿದೆ ಎನ್ನುವುದರ ಕುರಿತು ಜಾಗೃತಿ ಮೂಡಿಸಬೇಕು. ಕೃಷಿ ಸಮ್ಮಾನ, ಉಜ್ವಲ ಯೋಜನೆ ಪ್ರತಿ ಕುಟುಂಬಕ್ಕೆ ತಲುಪಿದ್ದು, ಅವರನ್ನು ಸಂಪರ್ಕ ಮಾಡಿ. ಕೇವಲ ತೀರ್ಮಾನ, ಪ್ರಮಾಣದಿಂದ ಆಗಲ್ಲ. ನೇರ ಸಂಪರ್ಕದಿಂದ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವಿದೆ ಎಂದು ಹೇಳಿದರು.ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಸಾಧನೆಯನ್ನು ಮನೆ ಮನೆಗೂ ತಲುಪಿಸಿ ಎಂದು ಮನವಿ ಮಾಡಿದರು.ಹೆಸರು ಹೇಳುತ್ತಿಲ್ಲ: ಕೇಂದ್ರ ಸರ್ಕಾರದ ಯೋಜನೆಗಳಿಗೆ ಚಾಲನೆ ನೀಡುವ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ಕೇಂದ್ರ ಸರ್ಕಾರದ ಹೆಸರನ್ನೇ ಹೇಳುವುದಿಲ್ಲ. ಜಲಜೀವನ ಮಿಷನ್ 2 ಯೋಜನೆಗೆ ಚಾಲನೆ ನೀಡಿರುವ ಅವರು, ಇದು ಕೇಂದ್ರ ಸರ್ಕಾರದ ಯೋಜನೆ ಎನ್ನುತ್ತಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಕಿಡಿಕಾರಿದ್ದಾರೆ.

ಸಂಸದ ಸಂಗಣ್ಣ ಕರಡಿ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾಡಿರುವ ಅಭಿವೃದ್ಧಿಗಳ ಪಟ್ಟಿಕೊಡುತ್ತೇವೆ, ಸುತ್ತಾಡಿಕೊಂಡು ಬರಲಿ ಎಂದು ಸಂಸದ ಸಂಗಣ್ಣ ಕರಡಿ ಸವಾಲು ಹಾಕಿದ್ದಾರೆ.

ರೈಲ್ವೆ ಯೋಜನೆಗಳು ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಕಳೆದ 10 ವರ್ಷಗಳಲ್ಲಿ ದೊಡ್ಡ ಕ್ರಾಂತಿಯೇ ಮಾಡಲಾಗಿದೆ. ಆದರೂ ಪ್ರಶ್ನೆ ಮಾಡುವವರು ಅವುಗಳನ್ನೊಮ್ಮೆ ನೋಡಿಕೊಂಡು ಬರಲಿ ಎಂದರು.

ಶಾಸಕ ಬಸವರಾಜ ರಾಯರಡ್ಡಿ ಐದು ರುಪಾಯಿ ಖರ್ಚು ಮಾಡಿ ಮಾಡುವ ಕೆಲಸದ ಕುರಿತು 25 ಲಕ್ಷ ರುಪಾಯಿ ವೆಚ್ಚ ಮಾಡಿ ಪ್ರಚಾರ ಮಾಡುತ್ತಾರೆ. 16 ವರ್ಷವಾದರೂ ಮುನಿರಾಬಾದ್ ಮೆಹಬೂಬನಗರ ರೈಲ್ವೆ ಮಾಡಲಿಲ್ಲ. ಅದನ್ನು ಮಾಡಲು ನಾನು ಬರಬೇಕಾಯಿತು ಎಂದು ಸಂಸದ ಸಂಗಣ್ಣ ಕರಡಿ ತಿವಿದರು. ಪಟ್ಟಣ ಪಂಚಾಯತಿ ಸದಸ್ಯೆ ಲಲಿತಾ ಮಂಜುನಾಥ ಡಂಬಳ, ಮಂಜುಳಾ ಶ್ಯಾವಿ, ಮಂಜಮ್ಮ ಮ್ಯಾಗಳಮನಿ, ಜಯಮಾಲಾ, ರೋಷನ್ ಅಲಿ ಮಂಗಳೂರು, ಜಗದೀಶ ಮಾಲಗತ್ತಿ, ಗವಿಸಿದ್ದಯ್ಯಸ್ವಾಮಿ ಕಂಬಾಳಮಠ, ಪರಶುರಾಮ ನಾಯಕ, ಬಿಜೆಪಿ ಮುಖಂಡರಾದ ನೀಲಕಂಠಪ್ಪ ಮೈಲಿ, ವಿಜಯ ಪಾಟೀಲ್, ಗಿರೀಶ್ ಪಾನಗಂಟಿ, ಕೃಷ್ಣ ಮ್ಯಾಗಳಮನಿ, ಮಂಜುನಾಥ ಶ್ಯಾವಿ, ಸುರೇಶ, ಕೊಟ್ರೇಶ, ಮಲ್ಲೇಶ, ರಾಜೇಶ್, ಸೋಮಣ್ಣ ದೇವರಮನಿ ಇದ್ದರು.