ಬಿಜೆಪಿ ಪರ ಅಲೆ ಎಬ್ಬಿಸಲಿರುವ ನರೇಂದ್ರ ಮೋದಿ: ಪಿ.ರಾಜೀವ್

| Published : Apr 26 2024, 12:45 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ವಿಜಯನಗರಕ್ಕೆ ಬಳ್ಳಾರಿ, ಕೊಪ್ಪಳ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಆಗಮಿಸುತ್ತಿದ್ದಾರೆ.

ಹೊಸಪೇಟೆ: ಪ್ರಧಾನಿ ನರೇಂದ್ರ ಮೋದಿ ಹೊಸಪೇಟೆಯ ಪುನೀತ್‌ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಏ.28ರಂದು ಮಧ್ಯಾಹ್ನ 4 ಗಂಟೆಗೆ ಬಹಿರಂಗ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಈ ಭಾಗದಲ್ಲಿ ಬಿಜೆಪಿ ಪರ ಅಲೆ ಎಬ್ಬಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್‌ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿಜಯನಗರಕ್ಕೆ ಬಳ್ಳಾರಿ, ಕೊಪ್ಪಳ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಆಗಮಿಸುತ್ತಿದ್ದಾರೆ. ಆದರೆ, ಮೋದಿ ಅಲೆಯಿಂದ ರಾಯಚೂರು, ಹಾವೇರಿ, ದಾವಣಗೆರೆ ಲೋಕಸಭಾ ಕ್ಷೇತ್ರಗಳ ಮೇಲೂ ಪ್ರಭಾವ ಬೀರಲಿದೆ. ಈ ಸಮಾವೇಶಕ್ಕೆ 2 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದರು.

ಯಾದಗಿರಿಯ ಸುರಪುರದಲ್ಲಿ ಅಧಿಕಾರಿಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರೋಡ್‌ ಶೋ ನಡೆಸಲು ಅನುಮತಿ ನೀಡುತ್ತಿಲ್ಲ. ಕಾಂಗ್ರೆಸ್‌ಗೆ ನೀಡಿದ ಅನುಮತಿ, ಬಿಜೆಪಿಗೆ ಯಾಕೆ ಇಲ್ಲ? ಚುನಾವಣೆ ನೀತಿ ಸಂಹಿತೆ ಎಲ್ಲರಿಗೂ ಒಂದೇ ಆಗಿದೆ ಎಂದು ಯಾದಗಿರಿ ಎಸ್ಪಿಗೆ ತರಾಟೆ ತೆಗೆದುಕೊಂಡರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಮೊಬೈಲ್ ಮೂಲಕ ಯಾದಗಿರಿ ಎಸ್ಪಿಗೆ ಕರೆ ಮಾಡಿ ಮಾತನಾಡಿದರು.

ಕಾಂಗ್ರೆಸ್‌ಗೆ ಅನುಮತಿ ಕೊಡ್ತೀರಾ? ಬಿಜೆಪಿಗೆ ಅನುಮತಿ ಏಕೆ ಇಲ್ಲ ಅಂತಿದ್ದಾರೆ? ಪೊಲೀಸ್ ಇಲಾಖೆ ಅನುಮತಿ ಕೊಡಲ್ಲ ಅಂದರೆ ನಿಮಗೆ ಏನ್ ಹೇಳಬೇಕು? ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಬಾರದು ಎಂದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಚುನಾವಣೆ ಅಧಿಕಾರಿ, ಡಿಐಜಿಗೆ ಅನುಮತಿಗಾಗಿ ಮನವಿ ಮಾಡಿದ್ದೇನೆ. ಯಾದಗಿರಿ ಜಿಲ್ಲೆಯ ಎಸ್ಪಿ ದರ್ಜೆಯ ಅಧಿಕಾರಿಯೇ ಅನುಮತಿ ಕೊಡೋದಿಲ್ಲ ಎಂದರೆ ಏನರ್ಥ? ಇದನ್ನು ಗಮನ ಹರಿಸಿದರೆ ಕಾನೂನು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂಎಲ್‌ಸಿ ವೈ.ಎಂ. ಸತೀಶ್‌, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ಮತ್ತಿತರರಿದ್ದರು.