ಸಾರಾಂಶ
ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳು ಮುಂದಿವೆ. ಇದರ ಸದುಪಯೋಗ ಪಡೆಯಬೇಕು. ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಹೇಳಿದರು.
ನರಗುಂದ: ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳು ಮುಂದಿವೆ. ಇದರ ಸದುಪಯೋಗ ಪಡೆಯಬೇಕು. ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಹೇಳಿದರು.
ಅವರು ಶನಿವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ನಂ 2 ಶಾಲೆಯಲ್ಲಿ ಶಿಕ್ಷಣ ಇಲಾಖೆ, ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ ಆಶ್ರಯದಲ್ಲಿ ನಡೆದ ನಮ್ಮ ಶಾಲೆ, ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಬೇಕು. ಹಾಜರಾತಿ ಇರುವಂತೆ ನೋಡಿಕೊಳ್ಳಬೇಕು. ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಗಮನಹರಿಸಬೇಕು. ಇದರಲ್ಲಿ ಪಾಲಕರ, ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಮುಂದಿನ ಭವಿಷ್ಯಕ್ಕಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ಮುಖ್ಯ ಗುರಿಯಾಗಿದೆ. ಸಮುದಾಯ ಇದರಲ್ಲಿ ಪಾಲ್ಗೊಳ್ಳಬೇಕು. ಇದೇ ಶಾಲೆಯ ಕಂಟೆನ್ನವರ ಶಿಕ್ಷಕರು 1ನೇ ತರಗತಿಗೆ ದಾಖಲಾಗುವ ಎಲ್ಲ ಮಕ್ಕಳಿಗೆ ಮೂರು ವರ್ಷಗಳ ಕಾಲ ಬ್ಯಾಗ್ ಸಮೇತ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿರುವುದು ಇದು ನನ್ನ ಜವಾಬ್ದಾರಿ ಯನ್ನು ಎತ್ತಿ ತೋರಿಸಿದೆ. ಈ ಶಿಕ್ಷಕರ ಕೆಲಸ ಶ್ಲಾಘನೀಯವಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿ ಎಂ.ಬಿ. ಪಾಟೀಲ ಮಾತನಾಡಿ, ಸರ್ಕಾರ ಶಾಲೆಗಳಲ್ಲಿ ದಾಖಲಾತಿ ಪಡೆಯುವ ಎಲ್ಲ ಮಕ್ಕಳಿಗೂ ಪಠ್ಯಪುಸ್ತಕ, ಸಮವಸ್ತ್ರ, ಶೂ, ಹಾಲು, ಮೊಟ್ಟೆ ಸೇರಿದಂತೆ 30ಕ್ಕೂ ಹೆಚ್ಚು ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ. ಆದ್ದರಿಂದ ಎಲ್ಲರೂ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಾತಿ ಪಡೆಯಬೇಕು. ಯಾವುದೇ ಶುಲ್ಕ ವಿಲ್ಲದೇ ಇಲ್ಲಿ ಪ್ರವೇಶ ಪಡೆಯಬಹುದು. ಖಾಸಗಿ ಶಾಲೆಗಳಲ್ಲಿ ಶುಲ್ಕವಿಲ್ಲದೇ ಪ್ರವೇಶವಿಲ್ಲ. ಆದ್ದರಿಂದ ಪಾಲಕರು ತಮ್ಮ ಜವಾಬ್ದಾರಿ ಮೆರೆಯಲು ಸರ್ಕಾರಿ ಶಾಲೆಗಳ ಸದುಪಯೋಗ ಪಡೆಯಬೇಕು ಎಂದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಾರುತಿ ಅಸುಂಡಿ ಮಾತನಾಡಿ, ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸಲು ಬಿಸಿಯೂಟದ ಜೊತೆ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಇದರ ಉಪಯೋಗ ಪಡೆಯಲು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಬೇಕು ಎಂದರು. ಶಿಕ್ಷಕ ಸಿ.ಎಂ. ಕೊಳ್ಳಿಯವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ಆರ್. ನಿಡಗುಂದಿ, ಪವಾಡೆಪ್ಪ ವಡ್ಡಿಗೇರಿ, ಎಸ್‌ಡಿಎಂಸಿ ಅಧ್ಯಕ್ಷೆ ಕವಿತಾ ಸಂಬಳ, ಶರಣಪ್ಪ ಹಡಪದ, ಸಿದ್ದಪ್ಪ ಆಯಟ್ಟಿ,ಮಲಿಕಸಾಬ ನದಾಫ್, ಕಾನನ್ನವರ, ಭೂಸರಡ್ಡಿ, ಶರಣಪ್ಪ ಸುರಕೋಡ, ಮುಖ್ಯ ಶಿಕ್ಷಕ ಜಿ.ಎಫ್.ಬಳಿಗೇರ ಸ್ವಾಗತಿಸಿದರು. ಎಸ್.ಕೆ. ಕುರಿ ನಿರೂಪಿಸಿದರು. ಬಿ.ಆರ್. ಪಟ್ಟಣಶೆಟ್ಟಿ ವಂದಿಸಿದರು.