‘ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲೇ ಸಂಸತ್ತು ಹಾಗೂ ವಿಧಾನಸಭೆಗಳಲ್ಲೂ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಾರಿ ಶಕ್ತಿ ವಂದನ್ ಅಧಿನಿಯಮ-2023 ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ಹಾಗೂ ಕಾನೂನುಬದ್ಧ ಕ್ರಮ ಅನುಸರಿಸಬೇಕು’ ಎಂಬ ಒಕ್ಕೊರಲ ಅಭಿಪ್ರಾಯ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದಲ್ಲಿ ಕೇಳಿ ಬಂದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು:
‘ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲೇ ಸಂಸತ್ತು ಹಾಗೂ ವಿಧಾನಸಭೆಗಳಲ್ಲೂ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಾರಿ ಶಕ್ತಿ ವಂದನ್ ಅಧಿನಿಯಮ-2023 ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ಹಾಗೂ ಕಾನೂನುಬದ್ಧ ಕ್ರಮ ಅನುಸರಿಸಬೇಕು’ ಎಂಬ ಒಕ್ಕೊರಲ ಅಭಿಪ್ರಾಯ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದಲ್ಲಿ ಕೇಳಿ ಬಂದಿದೆ.ಇದೇ ವೇಳೆ ಮಹಿಳೆಯರು ಮೀಸಲಾತಿ ಮೂಲಕ ಪ್ರಜಾಪ್ರಭುತ್ವದಲ್ಲಿ ಪ್ರಾತಿನಿಧ್ಯ ಪಡೆಯುವುದು ಮಾತ್ರವಲ್ಲ. ಸ್ವಂತ ಬುದ್ಧಿಯಿಂದ ನೀತಿ ರೂಪಣೆ, ನಿರ್ಧಾರ ಕೈಗೊಳ್ಳುವ ಮೂಲಕ ಪರಿಣಾಮಕಾರಿ ನಾಯಕತ್ವ ಬೆಳೆಸಿಕೊಳ್ಳಬೇಕು ಎಂಬ ಸಲಹೆ ವ್ಯಕ್ತವಾಯಿತು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿರುವ ಎರಡು ದಿನಗಳ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನಕ್ಕೆ ಮಂಗಳವಾರ ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ, ಸಿಎಂ ಡಿ.ಕೆ. ಶಿವಕುಮಾರ್, ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ ಘಟಕದ ಅಧ್ಯಕ್ಷರಾದ ಡಾ.ಡಿ. ಪುರಂದೇಶ್ವರಿ ಅವರು ಜಂಟಿಯಾಗಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಓಂ ಬಿರ್ಲಾ, ಡಿ.ಕೆ.ಶಿವಕುಮಾರ್, ಡಿಸಿಎಂ ಡಾ.ಜಿ.ಪರಮೇಶ್ವರ್, ಪುರಂದೇಶ್ವರಿ ಸೇರಿ ಬಹುತೇಕರು ಮಹಿಳಾ ಪ್ರಾತಿನಿಧ್ಯ ಖಚಿತಪಡಿಸುವ ನಾರಿ ಶಕ್ತಿ ವಂದನ್ ಅಧಿನಿಯಮ ಜಾರಿಗೆ ಪೂರಕ ಅಭಿಪ್ರಾಯ ವ್ಯಕ್ತಪಡಿಸಿದರು.
ಪಂಚಾಯ್ತಿಯಿಂದ ಸಂಸತ್ವರೆಗೆ ಮೀಸಲಾತಿ-ಬಿರ್ಲಾ:ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ಮಾತನಾಡಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಪ್ರಾತಿನಿಧ್ಯ ನೀಡುವ ಅಧಿನಿಯಮವು ಅನುಷ್ಠಾನದತ್ತ ಸಾಗಲಿದೆ. ಪಂಚಾಯತ್ಗಳಿಂದ ಸಂಸತ್ತಿನವರೆಗೂ ಮಹಿಳಾ ನಾಯಕತ್ವ ವಿಸ್ತರಿಸಲು ಅನುವು ಮಾಡಿಕೊಡುತ್ತದೆ ಎಂದು ಭರವಸೆ ನೀಡಿದರು.
ಕಾಲಮಿತಿಯ ಕಾರ್ಯಯೋಜನೆ ಅಗತ್ಯ-ಪರಂ: ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಾರಿ ಶಕ್ತಿ ವಂದನ್ ಅಧಿನಿಯಮದ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ, ಕಾನೂನುಬದ್ಧ ಹಾಗೂ ಕಾಲಮಿತಿಯ ಕಾರ್ಯಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.ಮಹಿಳಾ ಸ್ನೇಹಿ ಶಾಸನಸಭೆಗಳ ನಿರ್ಮಾಣಕ್ಕೆ ಬದ್ಧ: ಪಾಟೀಲ - ವಿಧಾನಸಭೆಯ ಸಭಾಧ್ಯಕ್ಷ ಜಿ.ಎಸ್.ಪಾಟೀಲ ಮಾತನಾಡಿ, ಮಹಿಳಾ ಜನಪ್ರತಿನಿಧಿಗಳಿಗೆ ಸುರಕ್ಷಿತ, ಸಮಾನ ಅವಕಾಶಗಳಿರುವ ಹಾಗೂ ಕುಟುಂಬಸ್ನೇಹಿ ಶಾಸಕಾಂಗ ವ್ಯವಸ್ಥೆ ನಿರ್ಮಾಣವಾಗಬೇಕು. ಈ ಸಮ್ಮೇಳನದಿಂದ ಹೊರಹೊಮ್ಮುವ ಸಲಹೆ ಮತ್ತು ಶಿಫಾರಸುಗಳನ್ನು ಕರ್ನಾಟಕ ವಿಧಾನಮಂಡಲದಲ್ಲಿ ಅಳವಡಿಸಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯಸಭೆಯ ಉಪಸಭಾಪತಿ ಹರಿವಂಶ್, ವಿಧಾನಸಭೆ ಉಪಸಭಾಧ್ಯಕ್ಷ ಮಾಂಕಾಳ್ ವೈದ್ಯ, ವಿಧಾನ ಪರಿಷತ್ತಿನ ಉಪಸಭಾಪತಿ ಡಾ. ಉಮಾಶ್ರೀ, ವಿವಿಧ ರಾಜ್ಯಗಳ ಮಹಿಳಾ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಹಿರಿಯ ಅಧಿಕಾರಿಗಳು ಹಾಜರಿದ್ದರು.‘ಸ್ತ್ರೀ ಇಲ್ಲದ ಪ್ರಜಾಪ್ರಭುತ್ವ ರೆಕ್ಕೆಯಿಲ್ಲದ ಹಕ್ಕಿ’:ಮಹಿಳೆಯರ ಸಾಮಾಜಿಕ, ಅರ್ಥಿಕ ಪರಿಸ್ಥಿತಿ ಸುಧಾರಿಸುವ ಜತೆಗೆ ರಾಜಕೀಯ ಸಬಲೀಕರಣವೂ ಆಗಬೇಕು. ಮಹಿಳೆಯರಿಲ್ಲದ ಪ್ರಜಾಪ್ರಭುತ್ವ ರೆಕ್ಕೆಯಿಲ್ಲದ ಹಕ್ಕಿಯಂತೆ, ನಿರೀಕ್ಷಿತ ಎತ್ತರಕ್ಕೇರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿರುವ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರ ಸುದೀರ್ಘ ಹೋರಾಟದ ಫಲವಾಗಿದೆ. ನಮ್ಮ ನಾಯಕಿ ಸೋನಿಯಾ ಗಾಂಧಿಯವರು ಮಹಿಳಾ ಮೀಸಲಾತಿ ಜಾರಿಗೊಳಿಸುವ ಪ್ರಯತ್ನ ಮಾಡಿದ್ದರು. ಆದರೆ ಲೋಕಸಭೆಯಲ್ಲಿ ನಮಗೆ ಬೆಂಬಲ ದೊರೆಯಲಿಲ್ಲ. ಬರುವ ಡಿಸೆಂಬರ್ನಲ್ಲಿ ಜಾರಿ ಆಗುವ ವಿಶ್ವಾಸವಿದೆ ಎಂದರು.ಮಹಿಳೆಯರು ರಾಜಕಾರಣ ಪ್ರವೇಶಿಸಲು ಸಾಮಾಜಿಕವಾಗಿ, ಕೌಟುಂಬಿಕವಾಗಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ದೇಶಾದ್ಯಂತ 15 ಲಕ್ಷಕ್ಕೂ ಹೆಚ್ಚು ಮಹಿಳೆಯರು ಪಂಚಾಯಿತಿ ಮಟ್ಟದಲ್ಲಿ ಅಧಿಕಾರದಲ್ಲಿದ್ದಾರೆ. ಅವರು ಸುಶಿಕ್ಷಿತರಾಗಿದ್ದು, ವ್ಯವಸ್ಥೆಯ ಬಗ್ಗೆ ಅರಿವು ಹೊಂದಿದ್ದಾರೆ. ರಸ್ತೆ, ಸೇತುವೆ, ಬಾವಿ, ಶಾಲೆ ಅಭಿವೃದ್ಧಿ, ಮತ್ತಿತರ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸಿದ್ದಾರೆ ಎಂದು ಶ್ಲಾಘಿಸಿದರು.ಮಹಿಳಾ ಮೀಸಲಾತಿಯಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಮಹಿಳೆಯರನ್ನು ಗೌರವಿಸುವುದು ನಮ್ಮ ಕರ್ತವ್ಯ. ಮಹಿಳೆಯರ ಬೆಂಬಲವಿಲ್ಲದೆ ಪುರುಷರು ಯಶಸ್ವಿಯಾಗಲು ಸಾಧ್ಯವಿಲ್ಲ. ಇದು ನಮ್ಮ ಪ್ರಗತಿ ಪರ ಸಮಾಜದ ತಳಪಾಯವೂ ಹೌದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು..
ಐದರಲ್ಲಿ ನಾಲ್ಕು ಗ್ಯಾರಂಟಿ ಮಹಿಳೆಯರಿಗೆ:ನಮ್ಮ ರಾಜ್ಯದಲ್ಲಿ ಶೇ.42ರಷ್ಟು ವೈದ್ಯರು ಮಹಿಳೆಯರು, ಶೇ.80ರಷ್ಟು ಅರೆ ವೈದ್ಯಕೀಯ ಸಿಬ್ಬಂದಿ ಮಹಿಳೆಯರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಶೇ.40ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಪಕ್ಷ ಗ್ಯಾರಂಟಿ ಯೋಜನೆ ಜಾರಿ ತಂದಿದ್ದು, ಐದರಲ್ಲಿ ನಾಲ್ಕು ಗ್ಯಾರಂಟಿಗಳು ಮಹಿಳೆಯರನ್ನು ಸಶಕ್ತಗೊಳಿಸುವ ಯೋಜನೆಗಳಾಗಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಮೈಸೂರು ಸಿಲ್ಕ್ ಖರೀದಿಸಿ:ಮಹಿಳಾ ಪ್ರತಿನಿಧಿಗಳು ಮೈಸೂರು, ಹಂಪಿಗೆ ಭೇಟಿ ನೀಡಿ. ಕೆಎಸ್ಐಸಿ ಮೈಸೂರು ಸಿಲ್ಕ್ ವಿಶ್ವ ಪ್ರಸಿದ್ಧಿ. ಅಲ್ಲಿನ ಕೈಗಾರಿಕೆಗೆ ಭೇಟಿ ನೀಡಿ ಸೀರೆ ಖರೀದಿಸಿ. ವಿಧಾನಸೌಧದ ಪ್ರವೇಶದ್ವಾರದಲ್ಲಿ ಮಹಿಳೆಯರಿಗೆ ನಮ್ಮ ರಾಜ್ಯ ನೀಡಿರುವ ಪ್ರಾಮುಖ್ಯತೆಯನ್ನು ತೋರಿಸುವ ಅನುಭವ ಮಂಟಪ ಚಿತ್ರವಿದೆ. ಇದನ್ನು ನೀವು ತಪ್ಪದೇ ವೀಕ್ಷಿಸಿ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.ಬೆಂಗಳೂರು ಟೆಕ್ ಸಮ್ಮಿಟ್ಗೆ ಆಹ್ವಾನ:ಬೆಂಗಳೂರು ಪ್ರತಿಭೆಗಳ ನಗರವೂ ಹೌದು. ಬಿಐಇಸಿಯಲ್ಲಿ ಟೆಕ್ ಸಮ್ಮಿಟ್ ನಡೆಯುತ್ತಿದ್ದು, ಕಾಮನ್ವೆಲ್ತ್ ಸಮ್ಮೇಳನ ಮುಗಿದ ಬಳಿಕ ಮೈಸೂರು ಪ್ರವಾಸ ಹೊರಟಿದ್ದೀರಿ. ಹೋಗುತ್ತಾ ಟೆಕ್ ಸಮ್ಮಿಟ್ಗೆ ಭೇಟಿ ನೀಡಿ. ಸಿಲಿಕಾನ್ ಸಿಟಿಯಲ್ಲಿರುವ ವಿಫುಲ ಅವಕಾಶಗಳನ್ನು ಕಣ್ತುಂಬಿಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.
‘ಸ್ತ್ರೀಯರು ಪ್ರಜಾಪ್ರಭುತ್ವದ ಭವಿಷ್ಯ ರೂಪಿಸ್ಲಿ’:ನಮ್ಮ ಉದ್ದೇಶವು ಕೇವಲ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವುದಷ್ಟೇ ಆಗಿರಬಾರದು, ಬದಲಾಗಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಮತ್ತು ಆಡಳಿತದಲ್ಲಿ ಅವರ ಪ್ರಭಾವವನ್ನು ಬಲಪಡಿಸುವುದೂ ಆಗಿರಬೇಕು. ಮಹಿಳೆಯರು ಪ್ರಜಾಪ್ರಭುತ್ವದ ಭವಿಷ್ಯ ರೂಪಿಸುವ ಶಕ್ತಿಯಾಗಿ ಬೆಳೆಯಬೇಕು ಎಂದು ವಿಧಾನಪರಿಷತ್ ಸಭಾಪತಿ ಸಲೀಂ ಅಹ್ಮದ್ ಹೇಳಿದ್ದಾರೆ.ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿರುವ ಎರಡು ದಿನಗಳ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮ್ಮೇಳನದ ಮೂಲಕ ಬೆಂಗಳೂರಿನಿಂದ ಇಡೀ ದೇಶಕ್ಕೆ ಒಂದು ಪ್ರಬಲ ಸಂದೇಶ ರವಾನೆ ಆಗಬೇಕು. ಮಹಿಳೆಯರು ಪ್ರಜಾಪ್ರಭುತ್ವದಲ್ಲಿ ಕೇವಲ ಭಾಗವಹಿಸುವುದು ಮಾತ್ರವಲ್ಲ. ಪ್ರಜಾಪ್ರಭುತ್ವದ ಭವಿಷ್ಯವನ್ನು ರೂಪಿಸುವ ಶಕ್ತಿ ಆಗಬೇಕು ಎಂದು ಕರೆ ನೀಡಿದರು.ಮಹಿಳೆಯರ ಪ್ರಾತಿನಿಧ್ಯವನ್ನು ಸಂಖ್ಯಾತ್ಮಕವಾಗಿ ಹೆಚ್ಚಿಸುವುದಷ್ಟೇ ಗುರಿ ಆಗಬಾರದು. ಆಡಳಿತ ಮತ್ತು ನೀತಿ ನಿರೂಪಣೆಯಲ್ಲಿ ಮಹಿಳೆಯರ ನೈಜ ಪ್ರಭಾವ ಹಾಗೂ ನಾಯಕತ್ವವನ್ನು ಬಲಪಡಿಸುವುದು ಉದ್ದೇಶವಾಗಬೇಕು ಎಂದರು.ರಾಜ್ಯದಲ್ಲಿ 900 ವರ್ಷಗಳ ಹಿಂದೆಯೇ ಸಂಸತ್ ಹಾಗೂ ಮಹಿಳಾ ಪ್ರಾತಿನಿಧ್ಯತೆ ಪರಿಕಲ್ಪನೆ ಮೂಡಿತ್ತು. 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪವು ಜಾತಿ ಮತ್ತು ಲಿಂಗಭೇದಗಳನ್ನು ಮೀರಿ ಮಹಿಳೆಯರಿಗೂ ಮುಕ್ತವಾಗಿ ವಿಚಾರ ವಿನಿಮಯ ನಡೆಸುವ ಅವಕಾಶ ಕಲ್ಪಿಸಿತ್ತು. ಅಕ್ಕಮಹಾದೇವಿ ಅಂತಹ ಮಹಾನ್ ಮಹಿಳಾ ಚಿಂತಕಿಯರು ಈ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಸ್ಮರಿಸಿದರು.ಅಂದು ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ, ಇಂದು ಡಿಜಿಟಲ್ ಜಗತ್ತಿನಲ್ಲಿಯೂ ಮುಂದುವರಿಯಬೇಕಾಗಿದೆ. ಮಹಿಳಾ ಜನಪ್ರತಿನಿಧಿಗಳು ಸೈಬರ್ ಕಿರುಕುಳ, ಬೆದರಿಕೆ ಮತ್ತು ಡಿಜಿಟಲ್ ಹಿಂಸೆಯ ಭಯವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತಾಗಬೇಕು. ಜತೆಗೆ ಸಮ್ಮೇಳನದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆಯೂ ಉಪಯುಕ್ತ ಚರ್ಚೆ ನಡೆಯಲಿದೆ ಎಂದರು.ಮಹಿಳಾ ನಾಯಕತ್ವಕ್ಕೆ ಕ್ರಿಯಾ ಯೋಜನೆ ರೂಪಿಸಿ:
ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಮಾತನಾಡಿ, ಮಹಿಳಾ ಸಬಲೀಕರಣದ ಸಮ್ಮೇಳನಗಳು ಕೇವಲ ಚರ್ಚೆ ಮತ್ತು ನಿರ್ಣಯಗಳಿಗೆ ಸೀಮಿತವಾಗಬಾರದು. ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮಗಳು ಹಾಗೂ ಮಹಿಳಾ ಆರೋಗ್ಯಕ್ಕೆ ಸ್ಪಂದಿಸುವ ನೀತಿಗಳನ್ನು ರೂಪಿಸುವ ಮೂಲಕ ಸ್ಪಷ್ಟ ಫಲಿತಾಂಶಗಳನ್ನು ಸಾಧಿಸಬೇಕು ಎಂದು ಕರೆ ನೀಡಿದರು.ಸೈಬರ್ ಸುರಕ್ಷತೆಗೆ ಆದ್ಯತೆ:
ಸಿಡಬ್ಲ್ಯೂಪಿ ಭಾರತ ಘಟಕದ ಅಧ್ಯಕ್ಷರಾದ ಡಾ। ಡಿ.ಪುರಂದೇಶ್ವರಿ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಹಿಳಾ ಜನಪ್ರತಿನಿಧಿಗಳು ಸೈಬರ್ ಕಿರುಕುಳ, ಸುಳ್ಳುಸುದ್ದಿ ಹಾಗೂ ಉದ್ದೇಶಪೂರ್ವಕ ವರ್ಚಸ್ಸು ಹಾಳುಮಾಡುವ ಪ್ರಯತ್ನಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸವಾಲುಗಳಿಂದ ಮಹಿಳೆಯರು ಸಾರ್ವಜನಿಕ ಜೀವನ ಪ್ರವೇಶಿಸಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣ ಆಗಬಾರದು. ಹೊಸದಾಗಿ ಶಾಸನಸಭೆಗಳಿಗೆ ಪ್ರವೇಶಿಸುವ ಮಹಿಳಾ ಜನಪ್ರತಿನಿಧಿಗಳಿಗೆ ತರಬೇತಿ, ಅನುಭವಿ ನಾಯಕರ ಮಾರ್ಗದರ್ಶನ ಮತ್ತು ಸಾಂಸ್ಥಿಕ ಬೆಂಬಲ ಒದಗಿಸುವುದು. ಈ ಸಮ್ಮೇಳನದಲ್ಲಿ ಮಹಿಳೆಯರ ಋತುಬಂಧದ ಸಮಸ್ಯೆಗಳ ಕುರಿತು ಚರ್ಚೆ ಆಗಲಿದೆ ಎಂದು ತಿಳಿಸಿದರು.