ಕನ್ನಡಪ್ರಭ ವಾರ್ತೆ ರಾಮನಗರ

ಹಾಲು ಶೇಖರಣಾ ವ್ಯವಸ್ಥೆಯಲ್ಲಿ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಅಳವಡಿಸಿಕೊಂಡು ಗಮನ ಸೆಳೆದಿರುವ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಇದೀಗ ರಾಸುಗಳು ವಿಮೆ ಮಾಡಿಸುವಾಗ ರಾಸುಗಳ ಮೂಗಿನ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ.

ರಾಸುಗಳ ವಿಮೆ ಪರಿಹಾರ ಹಣ ತಡವಾಗಿ ಪಾವತಿಯಾಗುತ್ತಿದೆ ಎಂಬ ದೂರುಗಳು ಒಂದೆಡೆಯಾದರೆ, ಮತ್ತೊಂದೆಡೆ ವಿಮೆ ಪಾವತಿಯಲ್ಲಿ ಅಕ್ರಮಗಳೇ ಹೆಚ್ಚಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕುವ ಉದ್ದೇಶದಿಂದ ವಿಮೆ ಮಾಡಿಸಿದ ರಾಸುಗಳ ಮೂಗಿನ ಮೇಲಿರುವ ಗೆರೆಗಳ ಸಂಗ್ರಹಣೆಯ ವಿನೂತನ ಕಾರ್ಯಕ್ಕೆ ಬಮೂಲ್ ಚಾಲನೆ ನೀಡುತ್ತಿದೆ.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಎಐ ತಂತ್ರಜ್ಞಾನ ಒಳಗೊಂಡ ಆಟೋಮ್ಯಾಟಿಕ್ ಮಿಲ್ಕ್ ಕಲೆಕ್ಷನ್ ಸಿಸ್ಟಮ್ (ಎಎಂಸಿಎಸ್) ಅಳವಡಿಸಿಕೊಂಡ ಮೊದಲ ಒಕ್ಕೂಟ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರು ಹಾಲು ಒಕ್ಕೂಟ, ಈಗ ರಾಸುಗಳ ಮೂಗಿನ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿಕೊಂಡು ಹೈನುಗಾರಿಕೆ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮನ್ನುಡಿ ಬರೆಯಲಿದೆ.

ಮೂಗಿನ ಗೆರೆ ಸಂಗ್ರಹ:


ಮೊದಲು ಹಸುವಿನ ಮೂಗನ್ನು ಸ್ವಚ್ಛಗೊಳಿಸಿ ಒಣಗಿಸಲಾಗುತ್ತದೆ. ಸ್ಮಾರ್ಟ್ ಫೋನ್ ಬಳಸಿ ಕ್ಲೋಸ್‌ಆಪ್ ಫೋಟೋ ತೆಗೆಯುತ್ತಾರೆ. ಅದರಲ್ಲಿರುವ ವಿಶೇಷ ಸಾಫ್ಟ್‌ವೇರ್ ಮೂಗಿನ ಮೇಲಿನ ಗೆರೆಗಳನ್ನು ಸಂಗ್ರಹಿಸಿ ಡಿಜಿಟಲ್ ಕೋಡ್ ಆಗಿ ಪರಿವರ್ತಿಸುತ್ತದೆ. ಈ ಕೋಡನ್ನು ಡೇಟಾ ಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ.

ಬಯೋಮೆಟ್ರಿಕ್ ಪ್ರಯೋಜನ :

1.ವಿಮೆ ಮಾಡಿಸಿದ ರಾಸು ಮರಣ ಹೊಂದಿದಾಗ ಮಾಲೀಕರಿಗೆ ತ್ವರಿತಗತಿ ಪರಿಹಾರಕ್ಕೆ ಅನುಕೂಲ

2.ಕಳ್ಳತನವಾದ ರಾಸುಗಳನ್ನು ತಕ್ಷಣವೇ ಗುರುತಿಸಬಹುದು.

3.ವೈದ್ಯರು ಸರಳ ಸ್ಕ್ಯಾನ್ ಮೂಲಕ ರಾಸುವಿನ ಸಂಪೂರ್ಣ ವೈದ್ಯಕೀಯ ಇತಿಹಾಸ ತಿಳಿಯಬಹುದು.

4.ಸರ್ಕಾರದ ಸಬ್ಸಿಡಿಗಳು, ವಿಮೆ ಮತ್ತು ಇತರ ಪ್ರಯೋಜನಗಳು ಹೈನುಗಾರರಿಗೆ ತಲುಪುತ್ತವೆ.

5.ನಿಖರ ಡೇಟಾ ಆಧಾರದ ಮೇಲೆ ರೈತರು ಹಾಲಿನ ಉತ್ಪಾದನೆ ನೋಡಿ ಉತ್ತಮ ತಳಿ ನಿರ್ಧರಿಸಬಹುದು.