ನಾಟಕ ಅಕಾಡೆಮಿ ಪ್ರಶಸ್ತಿ: ಮತ್ತೆ ಬಳ್ಳಾರಿ ಜಿಲ್ಲೆ ಕಡೆಗಣನೆ

| Published : Jul 25 2025, 12:31 AM IST

ನಾಟಕ ಅಕಾಡೆಮಿ ಪ್ರಶಸ್ತಿ: ಮತ್ತೆ ಬಳ್ಳಾರಿ ಜಿಲ್ಲೆ ಕಡೆಗಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ನಾಟಕ ಅಕಾಡೆಮಿಯು ಪ್ರಸಕ್ತ ಸಾಲಿನ ವಿವಿಧ ಪ್ರಶಸ್ತಿ ಘೋಷಣೆ ಮಾಡಿದ್ದು, ಈ ಬಾರಿಯೂ ಬಳ್ಳಾರಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಅಕಾಡೆಮಿಯ ಈ ನಡೆ ಕಲಾವಿದರಲ್ಲಿ ಬೇಸರ ಮೂಡಿಸಿದೆ.

ರಾಜ್ಯದ ಉಳಿದ ಜಿಲ್ಲೆಗಳಿಗೆ ಸಿಗುವ ಮಾನ್ಯತೆ ಬಳ್ಳಾರಿಗೆ ಸಿಗುತ್ತಿಲ್ಲ

ಮಂಜುನಾಥ ಕೆ.ಎಂ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಕರ್ನಾಟಕ ನಾಟಕ ಅಕಾಡೆಮಿಯು ಪ್ರಸಕ್ತ ಸಾಲಿನ ವಿವಿಧ ಪ್ರಶಸ್ತಿ ಘೋಷಣೆ ಮಾಡಿದ್ದು, ಈ ಬಾರಿಯೂ ಬಳ್ಳಾರಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಅಕಾಡೆಮಿಯ ಈ ನಡೆ ಕಲಾವಿದರಲ್ಲಿ ಬೇಸರ ಮೂಡಿಸಿದೆ.

ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆಯನ್ನು ಕಡೆಗಣಿಸಿದ ಬೆನ್ನಲ್ಲೇ ನಾಟಕ ಅಕಾಡೆಮಿಯು ಸಹ ಬಳ್ಳಾರಿಯನ್ನು ನಿರ್ಲಕ್ಷ್ಯಿಸಿದೆ.

ನಾಟಕ ಅಕಾಡೆಮಿ 2025-26ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ಸೇರಿದಂತೆ ಒಟ್ಟು 33 ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಘೋಷಣೆ ಮಾಡಿದೆ. ಆದರೆ, ಈ ಬಾರಿಯ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆಯ ಯಾವೊಬ್ಬ ಕಲಾವಿದರನ್ನು ಪರಿಗಣಿಸಲಾಗಿಲ್ಲ.

ಪ್ರಾತಿನಿಧ್ಯ ಇಲ್ಲ:

13 ಅಕಾಡೆಮಿಗಳ ಪೈಕಿ ಬಹುತೇಕ ಅಕಾಡೆಮಿಗಳಲ್ಲಿ ಬಳ್ಳಾರಿ ಜಿಲ್ಲೆಯ ಪ್ರಾತಿನಿಧ್ಯ ಇಲ್ಲ. ರಾಜ್ಯದ ಉಳಿದ ಜಿಲ್ಲೆಗಳಿಗೆ ಸಿಗುವ ಮಾನ್ಯತೆ ಬಳ್ಳಾರಿ ಜಿಲ್ಲೆಗೆ ಸಿಗುತ್ತಿಲ್ಲ. ಗಣಿನಾಡು ಬಳ್ಳಾರಿ ಕಲಾವಿದರ ತವರು. ಕಲಾ ಶ್ರೀಮಂತಿಕೆಯ ತವರು ಎಂಬ ಮಾತು ಬರೀ ಭಾಷಣಕ್ಕೆ ಸೀಮಿತವಾದಂತಾಗಿದೆ.

ಇಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಹುತೇಕ ಗಣ್ಯರು, ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರು ಬಳ್ಳಾರಿ ಜಿಲ್ಲೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯಕ್ಕೆ ನೀಡಿರುವ ಅಪಾರ ಕೊಡುಗೆ ಹಾಡಿ ಹೊಗಳಿ ಹೋಗುತ್ತಾರೆ. ಆದರೆ, ಪ್ರಶಸ್ತಿ ವಿಚಾರ ಬಂದಾಗ ಬಳ್ಳಾರಿಯನ್ನು ಕಡೆಗಣಿಸುತ್ತಿರುವುದು ಎದ್ದು ಕಾಣುತ್ತಿದೆ.

ಬೆಂಗಳೂರಿಗೆ ಸಿಂಹಪಾಲು:

ಅಕಾಡೆಮಿಯ ವಿವಿಧ ಪ್ರಶಸ್ತಿಗಳಲ್ಲಿ ಬೆಂಗಳೂರಿಗೆ ಸಿಂಹಪಾಲು ನೀಡಲಾಗಿದೆ. ಬೆಂಗಳೂರು 10, ಬೆಂಗಳೂರು ಗ್ರಾಮಾಂತರ 2 ಹಾಗೂ ಬೆಂಗಳೂರು ದಕ್ಷಿಣಕ್ಕೆ 1 ಪ್ರಶಸ್ತಿ ದೊರೆತಿದ್ದು, ಒಟ್ಟು 13 ಅಕಾಡೆಮಿ ಪ್ರಶಸ್ತಿಗಳು ಬೆಂಗಳೂರಿಗೆ ದಕ್ಕಿವೆ. ಬೆಂಗಳೂರಿಗೆ 10 ನೀಡುವ ಬದಲು ಉಳಿದ ಜಿಲ್ಲೆಗಳು ಪ್ರಶಸ್ತಿಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕಾದ ಅಕಾಡೆಮಿಯು ಸಾಮಾಜಿಕ ನ್ಯಾಯ ನೀಡುವಲ್ಲಿ ಎಡವಿದ್ದು ಅಕಾಡೆಮಿಯ ನಿರ್ಲಕ್ಷ್ಯ ಇಡೀ ಜಿಲ್ಲೆಗಾದ ಅಪಮಾನ ಎಂದು ಕಲಾವಿದರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

90ರಲ್ಲಿ 1 ಬಳ್ಳಾರಿಗೆ:

ಕಳೆದ ವರ್ಷ ಕರ್ನಾಟಕ ನಾಟಕ ಅಕಾಡೆಮಿಯಿಂದ ಮೂರು ವರ್ಷಗಳ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. ಒಟ್ಟು 90 ಪ್ರಶಸ್ತಿ ವಿತರಣೆಯಾದರೂ ಅದರಲ್ಲಿ ಬಳ್ಳಾರಿಗೆ ದಕ್ಕಿದ್ದು 1 ಮಾತ್ರ.