ಸಾರಾಂಶ
ಇಂದು ಸಾಹಿತ್ಯ ಕ್ಷೇತ್ರವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸುಳ್ಳುಗಾರರು, ಅವಕಾಶವಾದಿಗಳು, ಭಂಡಗಾರರು ತುಂಬಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಬುದ್ಧ ಮತ್ತು ಗಾಂಧಿಯವರ ಜೀವನ ಪ್ರೀತಿಯನ್ನು ನಾವು ಅಳವಡಿಸಿಕೊಳ್ಳಬೇಕಿದೆ ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ್ ಗೌಡ ಕರೆ ನೀಡಿದರು.ಶ್ರೀ ನಟರಾಜ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಕಲಾಕೂಟ ಹಾಗೂ ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ವತಿಯಿಂದ ನಟರಾಜ ಸಭಾಭವನದಲ್ಲಿ ನಡೆದ ವಿಚಾರ ಸಂಕಿರಣ ಮತ್ತು ಸಂವಾದ ಸಮಾರಂಭದ ಸಮಾರೋಪದಲ್ಲಿ ಸಾಹಿತಿ ಸಾತನೂರು ದೇವರಾಜ್ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಇಂದು ಸಾಹಿತ್ಯ ಕ್ಷೇತ್ರವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸುಳ್ಳುಗಾರರು, ಅವಕಾಶವಾದಿಗಳು, ಭಂಡಗಾರರು ತುಂಬಿದ್ದಾರೆ. ಆದ್ದರಿಂದ, ರಾಜಕೀಯವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಯೋಗ್ಯರನ್ನೂ ಆರಿಸಬೇಕು, ಬೆಂಬಲಿಸಬೇಕು. ಈ ಪ್ರಜ್ಞೆ ಜನರಲ್ಲಿ ಸದಾ ಇರಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ, ಸತ್ಯ, ನ್ಯಾಯ, ಸಮತೆ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.ಅಭಿನಂದನೆ ಸ್ವೀಕರಿಸಿದ ಲೇಖಕ ಸಾತನೂರು ದೇವರಾಜ್ ಮಾತನಾಡಿ, ಸಾಹಿತ್ಯ ರಚನೆಗೆ ಹೊರಗಿನ ಒತ್ತಡಗಳು ಮತ್ತು ಒಳಗಿನ ಪ್ರೇರಣೆ ಎರಡೂ ಬೇಕು. ಹಾಗೆಯೇ ನನ್ನ ಬದುಕಿನಲ್ಲೂ ಒತ್ತಡ ಮತ್ತು ಪ್ರೇರಣೆ - ಈ ಎರಡೂ ಸಿಕ್ಕ ಕಾರಣ ನಾನು ಲೇಖಕನಾಗಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ಅಧ್ಯಕ್ಷತೆಯನ್ನು ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್. ಶಿವರಾಜಪ್ಪ ವಹಿಸಿದ್ದರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಸಮಾರೋಪ ನುಡಿಗಳನ್ನಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಪ್ರೊ.ಕೆ.ಟಿ. ವೀರಪ್ಪ ಅಭಿನಂದನ ಭಾಷಣ ಮಾಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ಡಿ.ಕೆ. ಉಷಾ, ವಾತ್ಸಲ್ಯ ಬಿ.ಇಡಿ. ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ದಳಪತಿ ಇದ್ದರು.