ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರತಿಯೊಬ್ಬರ ಜೀವನದಲ್ಲಿ ವಿದ್ಯೆ ಮುಖ್ಯವಾಗಿದ್ದು, ವಿದ್ಯೆಗೆ ಮಹತ್ವದ ಸ್ಥಾನವಿದೆ. ಹೀಗಾಗಿ, ವಿದ್ಯೆ ಕಲಿತವರಿಗೆ ಅಹಂ ಇರಬಾರದು ಎಂದು ಮಹಾರಾಜ ಸಂಸ್ಕೃತ ಪಾಠಶಾಲೆಯ ನಿವೃತ್ತ ಪ್ರಾಧ್ಯಾಪಕ ವಿದ್ವಾನ್ ಲೋಕೇಶ್ ಆರಾಧ್ಯ ತಿಳಿಸಿದರು.ನಗರದ ನಟರಾಜ ಕಲ್ಯಾಣ ಮಂಟಪದಲ್ಲಿ ಶ್ರೀ ವೇದಮಾತಾ ಗುರುಕುಲ ಧಾರ್ಮಿಕ ದತ್ತಿ, ಪೌರೋಹಿತ್ಯ ತರಬೇತಿ ಸಂಸ್ಥೆಯು ಭಾನುವಾರ ಆಯೋಜಿಸಿದ್ದ 19ನೇ ವಾರ್ಷಿಕೋತ್ಸವ, ಶ್ರೀ ವೇದವಾಗ್ದೇವಿ ಸರ್ವಮಂತ್ರ ಸಂಗ್ರಹ ಕೃತಿ ಮತ್ತು ದಿನದರ್ಶಿಕೆ ಬಿಡುಗಡೆ, ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಹಾಗೂ ಧಾರ್ಮಿಕ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ನಾವು ಬದುಕಿರುವವರಿಗೂ ಉಳಿಯುವ ಅಸ್ತಿ ವಿದ್ಯೆ. ಅದನ್ನು ಯಾರು ಕದಿಯಲಾರರು. ಕಲಿತಷ್ಟು ಜ್ಞಾನ ಸಂಪಾದನೆ ಹೆಚ್ಚುತ್ತದೆ. ಸಾವಿರಾರು ವರ್ಷದ ಹಿಂದೆಯೇ ವೇದ, ಪುರಾಣಗಳಲ್ಲಿ ಭಾರತ ಸನಾತನ ಸಂಸ್ಕೃತಿಯ ಉಲ್ಲೇಖವಿದೆ. ವೇದ, ಆಗಮ, ಪುರಾಣ, ಜ್ಯೋತಿಷ್ಯ ಅಧ್ಯಯನಕ್ಕೆ ಮಹತ್ವವಿದೆ ಎಂದು ಅವರು ಹೇಳಿದರು.ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎನ್. ಶಶಿಶೇಖರ ದೀಕ್ಷಿತ್ ಮಾತನಾಡಿ, ಪೋಷಕರು ಮಕ್ಕಳನ್ನು ಹಾಳು ಮಾಡುತ್ತಿದ್ದಾರೆ. ಅವರಿಗೆ ಎಲ್ಲಾ ಅವಕಾಶ, ಸವಲತ್ತು ಕಲ್ಪಿಸುತ್ತಿದ್ದಾರೆ. ಆದರೆ, ಸಂಸ್ಕಾರ ಕಲಿಸುತ್ತಿಲ್ಲ. ಸಂಸ್ಕಾರ ಇಲ್ಲದವರು ಬದುಕು ಕಷ್ಟವಾಗಲಿದೆ ಎಂದರು.
ಮರೆಯಾಗುತ್ತಿರುವ ಇಂದಿನ ದಿನಮಾನದಲ್ಲಿ ಗುರುಕುಲ ನಡೆಸಿಕೊಂಡು ಮಕ್ಕಳಿಗೆ ವೇದ ಕಲಿಸುತ್ತಿರುವುದು ಶ್ಲಾಘನಿಯ. ಮೊಬೈಲ್ ಮಾಧ್ಯಮ ಎಷ್ಟು ಅನುಕೂಲ ಕಲ್ಪಿಸಿದಿಯೋ, ಅಷ್ಟೇ ವಿನಾಶಕ್ಕೂ ಕಾರಣವಾಗುತ್ತಿದೆ. ಮಕ್ಕಳ ಕೈಗೆ ಮೊಬೈಲ್ ನೀಡುವ ಬದಲು, ಪುಸ್ತಕ ಕೊಡಬೇಕು ಎಂದು ಅವರು ಸಲಹೆ ನೀಡಿದರು.ಕೊಳ್ಳೇಗಾಲ ಸುಬ್ರಹ್ಮಣೇಶ್ವರ ದೇವಸ್ಥಾನದ ಆಗಮಿಕ ಬಾಲಸುಬ್ರಹ್ಮಣ್ಯಶಾಸ್ತ್ರಿ ಮಾತನಾಡಿ, ವೇದವಾಗ್ದೇವಿ ಸರ್ವಮಂತ್ರ ಸಂಗ್ರಹ ಅಪರೂಪದ ಕೃತಿ. ಪೌರೋಹಿತ್ಯ ಮಾಡುವವರಿಗೆ, ಪೌರೋಹಿತ್ಯ ಕಲಿಯುವ, ವೇದ ಅಧ್ಯಯನ ಮಾಡುವ ಪುರೋಹಿತ ವರ್ಗದವರಿಗೆ, ದೇವಾಲಯ ಪೂಜೆ ಮಾಡುವ ಅರ್ಚಕರಿಗೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಎಲ್ಲರಿಗೂ ಅಮೂಲ್ಯ ಗ್ರಂಥವಾಗಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಸರಸ್ವತಿ ಪೂಜೆ, ಜ್ಞಾನಸಾಧನ ಶಾಂತಿ ಹೋಮ ನಡೆಸಲಾಯಿತು. ನಂತರ ಸಾಧಕರಿಗೆ, ಗುರುಕುಲ ಸೇವಾಕರ್ತರಿಗೆ, ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.ಶ್ರೀ ವೇದಮಾತಾ ಗುರುಕುಲ ಸಂಸ್ಥಾಪಕ ಮಂಜುನಾಥ ಆರಾಧ್ಯ, ಜ್ಯೋತಿಷಿ ಎಂ. ರಾಜುಸ್ವಾಮಿ ಆರಾಧ್ಯ, ಮಾಯಕಾರ ಗುರುಕುಲ ಸಂಸ್ಥಾಪಕ ಮೂಗೂರು ಮಧುದೀಕ್ಷಿತ್, ರೋಟರಿ ಹೆರಿಟೇಜ್ ಕ್ಲಬ್ ಅಧ್ಯಕ್ಷ ಆರ್. ರಾಜೇಶ್, ದೇವಿ ಗುರುಕುಲ ಸಂಸ್ಥಾಪಕ ದಯಾನಂದ ಶಾಸ್ತ್ರಿ, ನಟ ಶಿವಕುಮಾರ ಆರಾಧ್ಯ ಮೊದಲಾದವರು ಇದ್ದರು.
-----------------eom/mys/shekar/