- ನರಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸೇವೆ, ಗ್ರಾಮಗಳ ಅಭಿವೃದ್ಧಿ, ಸಾಮೂಹಿಕ ಚಿಂತನೆ, ವ್ಯಕ್ತಿ ನಿರ್ಮಾಣ ಇದರ ಉದ್ದೇಶವಾಗಿತ್ತು. ವ್ಯಕ್ತಿಗತ ಚಾರಿತ್ರ‍್ಯ ರಾಷ್ಟ್ರೀಯ ಚಾರಿತ್ರ‍್ಯದ ಜತೆ ಸೇರಿದಾಗ, ವ್ಯಕ್ತಿಗತವಾಗಿ ಬೆಳೆಯಲು ಮತ್ತು ದೇಶ ಪ್ರಭಾವ ಶಾಲಿಯಾಗಲು ಸಾಧ್ಯ. ವ್ಯಕ್ತಿ ನಿರ್ಮಾಣವಿಲ್ಲದೆ, ಸಮಾಜ ಮತ್ತು ದೇಶದ ನಿರ್ಮಾಣ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು.

ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜು, ನರಗನಹಳ್ಳಿ ಸರ್ಕಾರಿಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ದೇಶಿಸಿ ಮಾತನಾಡಿ ಗಾಂಧೀಜಿ ಎಂದರೆ ಅಹಿಂಸೆ, ಸ್ವದೇಶಿ, ರಾಷ್ಟ್ರಭಕ್ತಿ, ಸರಳತೆ, ಸೇವಾ ಮನೋಭಾವನೆ, ಸಾಮರಸ್ಯ, ಇವೆಲ್ಲವನ್ನೂ ಒಳಗೊಂಡ ವ್ಯಕ್ತಿ. ಅವರ ಜನ್ಮ ಶತ ಮಾನೋತ್ಸವ ಹಿನ್ನಲೆ ಎನ್ಎಸ್ಎಸ್ ಶಿಬಿರ ಆರಂಭಗೊಂಡಿದೆ. ಮನೆಗಳಲ್ಲಿ ಕೆಲಸ ಮಾಡದ ವಿದ್ಯಾರ್ಥಿಗಳೂ ಶಿಬಿರದಲ್ಲಿ ವಿವಿಧ ಕೆಲಸಗಳಲ್ಲಿ ತೊಡಗಿಸಿ ಸಾಮರಸ್ಯ ಮೂಡಿಸಿ, ಅಹಂ ಭಾವ ದೂರವಾಗುತ್ತದೆ ಎಂದರು.

ಜೀವನದಲ್ಲಿ ಕೆಲವರಿಗೆ ಯಶಸ್ಸು ಸಿಗದಿರಬಹುದು. ಆದರೆ, ಸಾರ್ಥಕತೆ ಸಿಕ್ಕಿರುತ್ತದೆ. ಅಂಬೇಡ್ಕರ್‌ ಆ ಕಾಲದಲ್ಲೇ ಓದಿದ ಪದವಿ ಗಳಿಗೆ ಅಮೆರಿಕಾ, ಇಂಗ್ಲೆಂಡ್‌ಗಳಲ್ಲಿ ಸುಲಭವಾಗಿ ದೊಡ್ಡ ಹುದ್ದೆ ಸಂಪಾದಿಸ ಬಹುದಿತ್ತು. ಒಂದು ವೇಳೆ ಅವರು ಭಾರತಕ್ಕೆ ಬರದೆ, ನ್ಯಾಯ ಒದಗಿಸುವ ಹೋರಾಟ ಮಾಡದಿದ್ದರೆ, ಆಗ ಅಂಬೇಡ್ಕರ್‌ ಅವರ ಮೊಮ್ಮಕ್ಕಳು, ಮರಿಮಕ್ಕಳೇ ಅವರನ್ನು ಮರೆತು ಬಿಡುತ್ತಿದ್ದರು. ಆದರೆ, ಅಂಬೇಡ್ಕರ್ ಸಮಾಜಕ್ಕಾಗಿ ಅರ್ಪಿಸಿಕೊಂಡದ್ದರಿಂದ ಸಮಾಜ ಸದಾ ಸ್ಮರಿಸುತ್ತದೆ ಎಂದು ತಿಳಿಸಿದರು.


ಮನುಷ್ಯರಲ್ಲಿ ಇರಬೇಕಾಗಿದ್ದ ಸಂವೇದನೆ ದೊಡ್ಡ ನಗರಗಳಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ, ಇಂತಹ ಶಿಬಿರಗಳು ನಮಗೆ ಗ್ರಾಮೀಣ ಸಂವೇದನೆ ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.

ಐಡಿಎಸ್‌ಜಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ರಾಧಾ ಸುಂದ್ರೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಣ್ಣಪುಟ್ಟ ಸಮಸ್ಯೆ ತಲೆನೋವಂತೆ ಭಾವಿಸುತ್ತಿದ್ದಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಹಾಗೂ ತಿದ್ದಿ ಹೇಳುವ ಮಾತುಗಳಿಗೆ ಆತ್ಮಹತ್ಯೆಗಳಂಥ ದುಡುಕು ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಸಮಸ್ಯೆಗೆ ತಲೆಕೆಡಿಸಿ ಕೊಳ್ಳದೇ ನಿಗಧಿತ ಗುರಿಯತ್ತ ಸಾಗಬೇಕು ಎಂದರು. ವಿದ್ಯಾರ್ಥಿದಿಸೆಯಲ್ಲಿ ಆತ್ಮಸೈರ್ಯವೊಂದೇ ಆತ್ಮೀಯ ಗೆಳೆಯ. ಶಿಕ್ಷಕರು ಹಾಗೂ ಪಾಲಕರ ಮಾರ್ಗ ದರ್ಶನದಲ್ಲಿ ಸಾಗುವ ರೂಢಿ ಬೆಳೆಸಿಕೊಳ್ಳಬೇಕು. ದುಶ್ಚಟಗಳಂಥ ತಪ್ಪು ದಾರಿಯಲ್ಲಿ ತೆರಳ ಬಾರದು ಅಥವಾ ಸ್ನೇಹಿತರು ಆ ರೀತಿ ಅಡ್ಡ ದಾರಿಯಲ್ಲಿ ಸಾಗುವುದು ಕಂಡುಬಂದಲ್ಲಿ ಸರಿದಾರಿಗೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಹೊರಬೇಕು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ತಸ್ನಿಮ್ ಕೌಸರ್ ಮನಿ ಯಾರ್, ಸರ್ಕಾರಿ ಮಹಿಳಾ ಪ್ರ.ದ. ಕಾಲೇಜು ಪ್ರಾಧ್ಯಾಪಕ ಎ.ಆರ್. ಶಿವರಾಜ್, ಎನ್‌ಎಸ್ ಎಸ್ ಕಾರ್ಯಕ್ರಮಾಧಿಕಾರಿ ಡಾ. ಅಹಮ್ಮದ್ ಷರೀಫ್, ಐಡಿಎಸ್‌ಜಿ ಸಹಾಯಕ ಪ್ರಾಧ್ಯಾಪಕ ಎಂ.ಜೆ. ಮೋಹನ್‌ಕುಮಾರ್, ಜೆ.ಪಿ.ಶಶಿಕಿರಣ್ ಉಪಸ್ಥಿತರಿದ್ದರು.