ಧರ್ಮಕ್ಕಿಂತ ದೇಶ ಕಟ್ಟುವ ಮನಸ್ಸುಗಳು ಬೇಕಾಗಿವೆ

| Published : Apr 30 2025, 12:33 AM IST

ಧರ್ಮಕ್ಕಿಂತ ದೇಶ ಕಟ್ಟುವ ಮನಸ್ಸುಗಳು ಬೇಕಾಗಿವೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಕೆಎನ್‌ಎಸ್‌ಎಸ್‌ ಜಿಲ್ಲಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಉದ್ಗಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಮ್ಮು-ಕಾಶ್ಮೀರದ ಪಹಲ್ಗಾಮ್‍ನಲ್ಲಿ ಉಗ್ರವಾದಿಗಳು ಗುಂಡಿನ ದಾಳಿ ನಡೆಸಿ 26ಮಂದಿ ಅಮಾಯಕರನ್ನು ಬಲಿ ತೆಗೆದುಕೊಂಡಿರುವುದು ಅತ್ಯಂತ ಅಮಾನವೀಯ ಘಟನೆ. ದೇಶದ ಪ್ರತಿಯೊಬ್ಬರು ಇದನ್ನು ಖಂಡಿಸಬೇಕೆಂದು ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಹೇಳಿದರು.

ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿಯಿಂದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಭಾರತೀಯರಿಗೆ ಪ್ರವಾಸಿ ತಾಣವಾಗಿರುವ ಜಮ್ಮು-ಕಾಶ್ಮೀರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿರುವ ಈಗಿನ ಪರಿಸ್ಥಿತಿಯಲ್ಲಿ ಧರ್ಮಕ್ಕಿಂತ ದೇಶ ಕಟ್ಟುವ ಮನಸ್ಸುಗಳು ಬೇಕಾಗಿದೆ. ಸಂವಿಧಾನದ ಪ್ರಕಾರ ಎಲ್ಲರೂ ಐಕ್ಯತೆ ಸಹಬಾಳ್ವೆಯಿಂದ ಬದುಕುತ್ತಿರುವ ಭಾರತ ದೇಶದಲ್ಲಿ ಶಾಂತಿಯನ್ನು ಕದಡಲು ಅವಕಾಶ ನೀಡಬಾರದು. ದೇಶಕ್ಕೆ ಭದ್ರವಾದ ಸಂವಿಧಾನ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ರವರಲ್ಲಿ ದಲಿತನಾಗಿ ಹುಟ್ಟಿರುವುದೇ ತಪ್ಪಾ ಎನ್ನುವ ಕೊರಗಿತ್ತು. ಬಹಳಷ್ಟು ಕಡೆ ದೇವಸ್ಥಾನಗಳಲ್ಲಿ ಈಗಲೂ ದಲಿತರಿಗೆ ಪ್ರವೇಶವಿಲ್ಲ. ಹಾಗಾಗಿ ದಲಿತರ ಕಷ್ಟ ಏನೆನ್ನುವುದು ಅಂಬೇಡ್ಕರ್‌ರವರಿಗೆ ಚೆನ್ನಾಗಿ ಗೊತ್ತಿತ್ತು. ಎಲ್ಲಾ ಜಾತಿ ಧರ್ಮದವರಿಗೂ ಸಂವಿಧಾನದಲ್ಲಿ ಸಮಾನತೆಯಿದೆ. ಕೊಳಗೇರಿ ನಿವಾಸಿಗಳು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿದರೆ ಸಂವಿಧಾನವನ್ನು ತಿಳಿದುಕೊಳ್ಳಲು ಸುಲಭವಾಗುತ್ತದೆ ಎಂದರು.

ಲೋಕಾಯುಕ್ತ ಸರ್ಕಾರಿ ಅಭಿಯೋಜಕರಾದ ಮಲ್ಲೇಶಪ್ಪ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಮೂಲ ಧ್ಯೇಯವಾಗಿತ್ತು. ಕೇವಲ ದಲಿತರಿಗಷ್ಟೆ ಅಲ್ಲ. ಎಲ್ಲಾ ಜಾತಿ ಧರ್ಮದವರಿಗೂ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಸಮಾನತೆಯನ್ನು ನೀಡಿದ್ದಾರೆ. ಮಹಾನ್ ಮಾನವತಾವಾದಿಯಾಗಿದ್ದ ಅಂಬೇಡ್ಕರ್‌ರವರ ಆಚಾರ ವಿಚಾರಗಳನ್ನು ಎಲ್ಲರೂ ಪಾಲಿಸಿದಾಗ ಮಾತ್ರ ಸಂವಿಧಾನದ ಆಶಯ ಈಡೇರಲಿದೆ ಎಂದು ತಿಳಿಸಿದರು.

ಯುವ ನ್ಯಾಯವಾದಿ ಓ.ಪ್ರತಾಪ್‍ಜೋಗಿ ಮಾತನಾಡುತ್ತ ದೇಶ-ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡದ ಡಾ.ಬಿ.ಆರ್.ಅಂಬೇಡ್ಕರ್ 32 ಪದವಿಗಳನ್ನು ಪಡೆದುಕೊಂಡಿದ್ದರು.

ಮೂಢನಂಬಿಕೆಗಳನ್ನು ಹೋಗಲಾಡಿಸಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟ ದೇಶದ ಮೊದಲ ಕಾನೂನು ಮಂತ್ರಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮಹಿಳೆಯರ ಸಮಾನತೆಗೆ ಆದ್ಯತೆ ಕೊಟ್ಟಿದ್ದರು. ಕೇವಲ ಭಾರತವಷ್ಟೆ ಅಲ್ಲ. ವಿಶ್ವವೇ ನಮ್ಮ ದೇಶದ ಸಂವಿಧಾನವನ್ನು ಒಪ್ಪಿಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಎಂದು ಕೊಳಗೇರಿಗಳಿಗೆ ಕರೆ ನೀಡಿದರು.

ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ರಂಗಸ್ವಾಮಿ ವೇದಿಕೆಯಲ್ಲಿದ್ದರು.