ಮೈಸೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎನ್.ಅಮೃತೇಶ್ ಅವರಿಗೆ ಭಾರತದ ಪ್ರತಿಷ್ಠಿತ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಕೊಡಮಾಡುವ (ಎಫ್‌ಎನ್‌ಎಎಸ್‌ಸಿ) ಗೌರವಕ್ಕೆ ಭಾಜನರಾಗಿದ್ದಾರೆ.
ಮಂಡ್ಯ:
ಮೈಸೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎನ್.ಅಮೃತೇಶ್ ಅವರಿಗೆ ಭಾರತದ ಪ್ರತಿಷ್ಠಿತ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಕೊಡಮಾಡುವ (ಎಫ್‌ಎನ್‌ಎಎಸ್‌ಸಿ) ಗೌರವಕ್ಕೆ ಭಾಜನರಾಗಿದ್ದಾರೆ.ಭಾರತೀಯ ತಂತ್ರಜ್ಞಾನ ಸಂಸ್ಥೆ ಅಸ್ಸಾಂನ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಇಂಡಿಯಾ ಅಧ್ಯಕ್ಷ ಪ್ರೊ.ವಿನೋದ್ ಕೆ.ಸಿಂಗ್ ಅವರು ಡಾ.ಕೆ.ಎನ್.ಅಮೃತೇಶ್ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿಯು ಪ್ರಮಾಣಪತ್ರ, ಭಿನ್ನವತ್ತಳೆ, ಪದಕ ಮತ್ತು ಫೆಲೋಶಿಪ್ ಪಿನ್‌ಗಳನ್ನು ಒಳಗೊಂಡಿದೆ. ಈ ಗೌರವವು ಕೃಷಿ ಮತ್ತು ಸಸ್ಯ ವಿಜ್ಞಾನಕ್ಕೆ ಅಮೃತೇಶ್ ನೀಡಿರುವ ಮಹತ್ವದ ಕೊಡುಗೆಗೆ ಸಂದಿದೆ.
ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಫೆಲೋಶಿಪ್ ಪಡೆದ ಡಾ.ಕೆ.ಎನ್.ಅಮೃತೇಶ್ ಮೈಸೂರು ವಿವಿ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಡಾ.ಎಚ್.ಶೇಖರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದುಕೊಂಡರು. ಅಮೆರಿಕದ ನಾರ್ತ್ ಟೆಕ್ಸಾಸ್ ವಿಶ್ವವಿದ್ಯಾನಿಲಯದಿಂದ ಪೋಸ್ಟ್ ಡಾಕ್ಟರಲ್ ಪದವಿ ಪಡೆದಿದ್ದಾರೆ. ತಮ್ಮ ಉಪಕಾರಿ ಸಂಶೋಧನೆಯಿಂದ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.ಆಹಾರ ಬೆಳೆಗಳಿಗೆ ಜೈವಿಕ ತಂತ್ರಜ್ಞಾನ ಅಳವಡಿಕೆ, ಸಸ್ಯ-ರೋಗಾಣುಗಳ ನಡುವಿನ ಸಂಬಂಧ, ರೋಗಾಣುಗಳ ಹತೋಟಿ ಕ್ರಮದ ಬಗ್ಗೆ ವಿಸ್ತಾರವಾದ ಸಂಶೋಧನೆ ಕೈಗೊಂಡು ೧೫ ಓಗಾಣುಗಳ ಹೊಸ ಪ್ರಬೇಧವನ್ನು ಹಾಗೂ ಎರಡು ದ್ವಿದಳ ಧಾನ್ಯಗಳ ಪರಾವಲಂಬಿ ಸಸ್ಯಗಳನ್ನು ವಿಜ್ಞಾನ ಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. ಇದರಲ್ಲಿ ಸಜ್ಜೆ ಬೆಳೆಗೆ ತಗಲುವ ಎಲೆತುಪ್ಪಳ ರೋಗಾಣುವಿನ ಹೊಸ ಪ್ರಬೇಧವೂ ಸೇರಿದೆ. ಇವರ ಸಂಶೋಧನೆಯಿಂದ ರಾಜ್ಯ ಮತ್ತು ರಾಷ್ಟ್ರದ ಅನೇಕ ಬಡ ರೈತರನ್ನು ಆರ್ಥಿಕ ನಷ್ಟದಿಂದ ಪಾರು ಮಾಡಿದೆ.ಎನ್.ಆರ್.ರೋಹಿತ್‌ಗೆ ಪಿಎಚ್.ಡಿ ಪದವಿ
ನಾಗಮಂಗಲ:ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್‌ಐಟಿಯ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಎನ್.ಆರ್.ರೋಹಿತ್ ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮ್ಯಾನೆಜ್ ಮೆಂಟ್ ವಿಷಯದ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಡಾ.ಹೇಮಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಎನ್.ಆರ್.ರೋಹಿತ್ ಅವರು ಇನ್ವೆಸ್ಟ್‌ರ್ ಪರ್ಸೆಪ್ಷನ್ ಟು ವರ್ಡ್ಸ್ ಗ್ರೀನ್ ಫಿನಾನ್ಸ್ ಪ್ರಾಡಕ್ಟ್ಸ್ ಎಂಬ ವಿಷಯ ಕುರಿತು ಸಿದ್ದಪಡಿಸಿ ಮಂಡಿಸಿದ್ದ ಸಂಶೋಧನಾ ಪ್ರಬಂಧವನ್ನು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಶೈಕ್ಷಣಿಕ ಸಭೆ ಹಾಗೂ ಕಾರ್ಯಕಾರಿ ಮಂಡಳಿ ಅನುಮೋದನೆಯೊಂದಿಗೆ ಕುಲಪತಿಗಳು ಪರೀಕ್ಷಕರ ಶಿಫಾರಸ್ಸನ್ನು ಅಂಗೀಕರಿಸಿ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ) ಪದವಿಯನ್ನು ನೀಡಲಾಗಿದೆ.ಪರಿಸರ ಸ್ನೇಹಿ ಹಸಿರು ಉತ್ಪನ್ನಗಳ ಕುರಿತು ಹೂಡಿಕೆದಾರರ ದೃಷ್ಟಿಕೋನವನ್ನು ವಿಶ್ಲೇಷಿಸುವ ಈ ಸಂಶೋಧನೆ, ಸ್ಥಿರ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಿದೆ ಎಂದು ಅಕಾಡೆಮಿಕ್ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಈ ಸಾಧನೆ ಮಾಡಿರುವ ಎನ್.ಆರ್.ರೋಹಿತ್ ಅವರಿಗೆ ವಿಟಿಯು ಆಡಳಿತ ಮಂಡಳಿ ಸಂಶೋಧನಾ ವಿಭಾಗ ಹಾಗೂ ಮಾರ್ಗದರ್ಶಕರು ಅಭಿನಂದನೆ ಸಲ್ಲಿಸಿದ್ದಾರೆ.