ಶರಣಬಸವೇಶ್ವರ ಅಂತರವಾಣಿಗೆ ರಾಷ್ಟ್ರೀಯ ಪುರಸ್ಕಾರ

| Published : Aug 02 2024, 12:59 AM IST

ಸಾರಾಂಶ

ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಸ್ವೀಕರಿಸಿದ ಪ್ರಕಟಣೆಯ ಪ್ರಕಾರ, ‘ಸುಸ್ಥಿರತೆಯ ಮಾದರಿ ಪ್ರಶಸ್ತಿಗಳು’ ವಿಭಾಗದಲ್ಲಿ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರವು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದು ಇದು ೫೦,೦೦೦ ರೂಪಾಯಿ ನಗದು ಬಹುಮಾನ, ಪ್ರಶಂಸಾ ಪತ್ರ ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರವು, ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆಯೋಜಿಸಿದ್ದ ೫೦೦ಕ್ಕೂ ಅಧಿಕ ಸಮುದಾಯ ರೇಡಿಯೋ ಕೇಂದ್ರಗಳು ಭಾಗವಹಿಸದ್ದ ೨೦೨೪ರ ರಾಷ್ಟ್ರೀಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಸ್ವೀಕರಿಸಿದ ಪ್ರಕಟಣೆಯ ಪ್ರಕಾರ, ‘ಸುಸ್ಥಿರತೆಯ ಮಾದರಿ ಪ್ರಶಸ್ತಿಗಳು’ ವಿಭಾಗದಲ್ಲಿ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರವು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದು ಇದು ೫೦,೦೦೦ ರೂಪಾಯಿ ನಗದು ಬಹುಮಾನ, ಪ್ರಶಂಸಾ ಪತ್ರ ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿದೆ.

೫೦೦ಕ್ಕೂ ಅಧಿಕ ಸಿಆರ್‌ಎಸ್‌ ನಡುವಿನ ಕಠಿಣ ಸ್ಪರ್ಧೆಯನ್ನು ಮೆಟ್ಟಿನಿಂತು ಅಂತರವಾಣಿ ರೇಡಿಯೋ ಕೇಂದ್ರವು ಪ್ರಶಸ್ತಿ ಗಳಿಸಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಡಿ.ಲಿಟ್ ಪ್ರಶಸ್ತಿ ಪುರಸ್ಕೃತ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರದ ದೃಷ್ಟಿ ವಿಕಲಚೇತನ ನಿರ್ದೇಶಕ ಡಾ. ಶಿವರಾಜ ಶಾಸ್ತ್ರಿ ಹೇರೂರು ಹೇಳಿದ್ದಾರೆ.

ಪ್ರಾಸಂಗಿಕವಾಗಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಈ ಮನ್ನಣೆಯನ್ನು ಪಡೆದ ಇಡೀ ಕರ್ನಾಟಕದಲ್ಲಿ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರವು ಏಕೈಕ ರೇಡಿಯೋ ಕೇಂದ್ರವಾಗಿದೆ ಎಂದರು.

ರಾಷ್ಟ್ರೀಯ ಮನ್ನಣೆಯನ್ನು ಗೆಲ್ಲಲು ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರಕ್ಕೆ ಇಡುಮಾಡಿದ ಪ್ರಮುಖ ಮಾನದಂಡವೆಂದರೆ ವಿಷಯ ರಚನೆ, ಬ್ಯಾಂಕಿಂಗ್ ಕಾರ್ಯಕ್ರಮ, ಅಂತರವಾಣಿ ರೇಡಿಯೋ ನಿರ್ಮಿಸಿದ ಮತ್ತು ಪ್ರಸಾರ ಮಾಡಿದ ಕಾರ್ಯಕ್ರಮಗಳಲ್ಲಿ ಸಮುದಾಯ ಭಾಗವಹಿಸುವಿಕೆ, ಸೌಂಡ್ ಫೈನಾನ್ಷಿಯಲ್ ಸಸ್ಟೈನಬಿಲಿಟಿ ಮತ್ತು ತಾಂತ್ರಿಕ ಬೆಂಬಲವನ್ನು ಅನುಭವಿಸಿದೆ ಎಂದು ಡಾ. ಶಿವರಾಜ ಶಾಸ್ತ್ರಿ ತಿಳಿಸಿದ್ದಾರೆ.

ಅಂತರವಾಣಿಯ ಸಿಸ್ಟಂ ಸ್ಟೋರೇಜ್‌ನಲ್ಲಿ ಇದುವರೆಗೆ ದಾಖಲೆಯ ೩೬ ಸಾವಿರ ಗಂಟೆಗಳ ಕಾರ್ಯಕ್ರಮದೊಂದಿಗೆ, ಪ್ರತಿದಿನ ೧೦ ಗಂಟೆಗಳ ಕಾಲ ಅಂತರವಾಣಿ ರೇಡಿಯೋ ಕೇಳುಗರಿಗೆ ಪ್ರಸಾರ ಮಾಡುತ್ತಲಿದೆ.

ಅಂತರವಾಣಿಯು ತನ್ನ ೩೦ ಕಿಮೀ ತಂರಂಗಾಂತರ ವ್ಯಾಪ್ತಿಯನ್ನು ಒಳಗೊಂಡಿದೆ. ಈ ಭಾಗದ ಸುಮಾರು ೧೦೦ಕ್ಕೂ ಹೆಚ್ಚು ಹಳ್ಳಿಗಳ ಕೇಳುಗರಿಗೆ ಸಮುದಾಯ ಕೇಂದ್ರದಿಂದ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಅಂತರವಾಣಿ ಪ್ರಸಾರ ಮಾಡುವ ಕಾರ್ಯಕ್ರಮಗಳಾದ ಸಂಸ್ಕೃತಿ, ಜಾನಪದ, ಪರಿಸರ ಸಮಸ್ಯೆಗಳು, ಸಾಹಿತ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಸುತ್ತ ಕೇಂದ್ರೀಕೃತವಾಗಿವೆ. ಅಂತರವಾಣಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಆರೋಗ್ಯ ವಾಣಿ, ಲೈವ್ ಇನ್ ಕಾರ್ಯಕ್ರಮಗಳು ಮತ್ತು ಶರಣಬಸವೇಶ್ವರ ಸುಪ್ರಭಾತ ಸೇರಿವೆ. ಇದರ ಹೊರತಾಗಿ ರೇಡಿಯೋ ಅಂತರವಾಣಿ ಅಪ್ಲಿಕೇಶನ್ ಪ್ಲೇ ಸ್ಟೋರ್‌ನಲ್ಲಿ ಪ್ರಪಂಚದಾದ್ಯಂತ ಕೇಳುಗರಿಗೆ ನಿರಂತರ ಆಧಾರದ ಮೇಲೆ ಲಭ್ಯವಿದೆ.

ಸ್ಪರ್ಧೆಯಲ್ಲಿ ಅಂತರವಾಣಿ ಗಳಿಸಿದ ಮತ್ತೊಂದು ಅನುಕೂಲಕರ ಅಂಶವೆಂದರೆ ಸರ್ಕಾರದ ನಿರಂತರ ಬೆಂಬಲವಿಲ್ಲದೆ ಅಂತರವಾಣಿ ರೇಡಿಯೋ ಕೇಂದ್ರವನ್ನು ನಿರ್ವಹಿಸಲು ಹಣಕಾಸಿನಲ್ಲಿ ಸ್ವಯಂ ಸುಸ್ಥಿರತೆ ಇದ್ದು, ಸಂಘವು ಅಂತರವಾಣಿ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸ್ಥಿರ ಠೇವಣಿಯಾಗಿ ೫೦ ಲಕ್ಷ ರು. ಗಳನ್ನು ಡೆಪಾಸಿಟ್ ಮಾಡಿದ್ದು, ಅದರಲ್ಲಿ ಬರುವ ಬಡ್ಡಿಯನ್ನು ಅಂತರವಾಣಿ ಕೇಂದ್ರದಲ್ಲಿ ಕೆಲಸ ಮಾಡುವ ಇಬ್ಬರು ಉದ್ಯೋಗಿಗಳ ವೇತನ ವೆಚ್ಚ, ಇಂಟರ್ನೆಟ್ ಬಾಡಿಗೆ ಸೇರಿದಂತೆ ಇತರ ವೆಚ್ಚಗಳನ್ನು ಪೂರೈಸಲು ಬಳಸಲಾಗುತ್ತದೆ.

ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಈ ಸಾಧನೆಗಾಗಿ ನಿರ್ದೇಶಕ ಡಾ. ಶಿವರಾಜ ಶಾಸ್ತ್ರಿ ಅವರನ್ನು ಅಭಿನಂದಿಸಿದ್ದಾರೆ.