‘ಕನ್ನಡಪ್ರಭ’ದ ಪ್ರತಿಷ್ಠಿತ ರೈತ ರತ್ನ ಪ್ರಶಸ್ತಿ ಪುರಸ್ಕೃತೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಅಸ್ಮಾ ಭಾನು ಸೇರಿದಂತೆ ಮೂವರಿಗೆ ಕೇಂದ್ರ ಸರ್ಕಾರ ಪ್ರತಿಷ್ಠಿತ ಪ್ಲಾಂಟ್ ಜಿನೋಮ್ ಸೇವಿಯರ್ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಕನ್ನಡಪ್ರಭ ವಾರ್ತೆ ನವದೆಹಲಿ:
‘ಕನ್ನಡಪ್ರಭ’ದ ಪ್ರತಿಷ್ಠಿತ ರೈತ ರತ್ನ ಪ್ರಶಸ್ತಿ ಪುರಸ್ಕೃತೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಅಸ್ಮಾ ಭಾನು ಸೇರಿದಂತೆ ಮೂವರಿಗೆ ಕೇಂದ್ರ ಸರ್ಕಾರ ಪ್ರತಿಷ್ಠಿತ ಪ್ಲಾಂಟ್ ಜಿನೋಮ್ ಸೇವಿಯರ್ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.ಗುರುವಾರ ನವದೆಹಲಿಯಲ್ಲಿ ನಡೆದ ‘ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ’ದ (PPVFRA) 22ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು ಸಮಾರಂಭದಲ್ಲಿ ಮಾತನಾಡಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.ಮೂವರು ಸಾಂಪ್ರದಾಯಿಕ ಬೆಳೆ ತಳಿಗಳು ಮತ್ತು ಸ್ಥಳೀಯ ಬೀಜಗಳ ಸಂರಕ್ಷಣೆಯಲ್ಲಿ ಸಲ್ಲಿಸಿರುವ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಕೇಂದ್ರ ಕೃಷಿ ಇಲಾಖೆಯು ಈ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಅಸ್ಮಾ ಭಾನು ಅವರೊಂದಿಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ಈಶ್ವರ ಗೌಡ ಪಾಟೀಲ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸಾನೂರು ಗುಲೂರ್ದೊಡ್ಡಿ ಗ್ರಾಮದ ಸಿ.ಪಿ. ಕೃಷ್ಣ ಅವರಿಗೂ ‘ಪ್ಲಾಂಟ್ ಜಿನೋಮ್ ಸೇವಿಯರ್ ಫಾರ್ಮರ್’ ಪ್ರಶಸ್ತಿ ಲಭಿಸಿದೆ. ಪ್ರತಿಯೊಬ್ಬರಿಗೆ ₹1 ಲಕ್ಷ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗಿದೆ.ಜೊತೆಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ಬೀಬಿ ಫಾತಿಮ ಸ್ವಸಹಾಯ ಸಂಘ ಹಾಗೂ ದೇಸಿ ಸೀಡ್ ಪ್ರೊಡ್ಯೂಸರ್ಸ್ ಕಂಪನಿ ಲಿಮಿಟೆಡ್ (ಸಹಜ ಸೀಡ್ಸ್) ಸಂಸ್ಥೆಗಳು ಪ್ರತಿಷ್ಠಿತ ‘ಪ್ಲಾಂಟ್ ಜಿನೋಮ್ ಸೇವಿಯರ್ ಸಮುದಾಯ ಪ್ರಶಸ್ತಿ’ ಪಡೆದಿವೆ. ಈ ಪ್ರತಿಯೊಂದು ಸಮುದಾಯ ಪ್ರಶಸ್ತಿಯು ₹10 ಲಕ್ಷ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.