ನಾಲ್ಕು ದಶಕಗಳಿಂದ ಕದ್ರಿ ಶ್ರೀ ಮಂಜುನಾಥ ದೇವಳದ ಸಹಯೋಗದೊಂದಿಗೆ ಕಲ್ಕೂರ ಪ್ರತಿಷ್ಠಾನ ನಡೆಸಿಕೊಂಡು ಬಂದಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆ ಯನ್ನು ಸೆ. 4ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಪ್ರಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್‌ ಕಲ್ಕೂರ ತಿಳಿಸಿದರು.

ಮಂಗಳೂರು: ನಾಲ್ಕು ದಶಕಗಳಿಂದ ಕದ್ರಿ ಶ್ರೀ ಮಂಜುನಾಥ ದೇವಳದ ಸಹಯೋಗದೊಂದಿಗೆ ಕಲ್ಕೂರ ಪ್ರತಿಷ್ಠಾನ ನಡೆಸಿಕೊಂಡು ಬಂದಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ- ‘ಶ್ರೀಕೃಷ್ಣ ವೇಷ ಸ್ಪರ್ಧೆ’ಯನ್ನು ಸೆ.4ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಪ್ರಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್‌ ಕಲ್ಕೂರ ತಿಳಿಸಿದರು.ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೃಷ್ಣಾಷ್ಠಮಿಯಂದು ಬೆಳಗ್ಗೆ 9ರಿಂದ ಶ್ರೀಕೃಷ್ಣ ವರ್ಣ ವೈಭವ, ಬೆಳಗ್ಗೆ 10.30ಕ್ಕೆ ಮಹಿಳೆಯರು ಸಾಮೂಹಿಕವಾಗಿ ಸಾಂಪ್ರದಾಯಿಕವಾಗಿ ಹಾಡನ್ನು ಹಾಡುತ್ತಾ ಕಡಗೋಲಿನಿಂದ ಮೊಸರು (ಮಜ್ಜಿಗೆ) ಕಡೆದು ಬೆಣ್ಣೆ ತೆಗೆಯುವುದು. ಮಧ್ಯಾಹ್ನ 12ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಶ್ರೀಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆಯಲ್ಲಿ ಗಣ್ಯರು ಮತ್ತು ಪುಟಾಣಿ ಕೃಷ್ಣರು ಮತ್ತು ಮಾತೆಯರ ಸಮ್ಮುಖದಲ್ಲಿ ದೀಪ ಪ್ರಜ್ವಲನ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ರಾತ್ರಿ 12 ಗಂಟೆಗೆ ಅರ್ಘ್ಯ ಪ್ರದಾನ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದರು.

ದಯಾನಂದ ಕಟೀಲ್‌ ಮಾತನಾಡಿ, ರಾಷ್ಟ್ರೀಯ ಮಕ್ಕಳ ಉತ್ಸವದ ಶ್ರೀಕೃಷ್ಣ ವೇಷ ಸ್ಪರ್ಧೆಗಳು ಒಟ್ಟು 44 ವಿಭಾಗಗಳಲ್ಲಿ ಕದ್ರಿ ದೇವಳದ ಒಟ್ಟು ಆವರಣದಲ್ಲಿ, ಶ್ರೀ ಮಹಾಗಣಪತಿ ದೇವಸ್ಥಾನ, ಅಭಿಷೇಕ ಮಂದಿರ, ಕದ್ರಿಕೆರೆ ಅಶ್ವತಕಟ್ಟೆ ಬಳಿ, ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ ನಂದಗೋಕುಲ ವೇದಿಕೆ, ಅಭಿಷೇಕ ಮಂದಿರ 1ನೇ ಮಹಡಿ, ಕಲ್ಯಾಣ ಮಂಟಪ, ಮಂಜುಶ್ರೀ, ಅಭಿಷೇಕ ಮಂದಿರ ಮಾತಾಕೃಪಾ ಸಹಿತ ಏಕಕಾಲದಲ್ಲಿ ನಡೆಯಲಿದೆ ಎಂದರು.

44 ವಿಭಾಗಗಳಲ್ಲಿ ಸ್ಪರ್ಧೆ: 6 ತಿಂಗಳ ಕೆಳಗಿನ ಶಿಶುಗಳಿಗೆ ಪ್ರಧಾನ ವೇದಿಕೆಯಲ್ಲಿ ತೊಟ್ಟಿಲ ಕೃಷ್ಣ, 6 ತಿಂಗಳಿಂದ 12 ತಿಂಗಳ ಒಳಗಿನ ಕಂದಮ್ಮಗಳಿಗೆ ಕಂದ ಕೃಷ್ಣ, 1 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 2 ವರ್ಷಕ್ಕಿಂತ ಕೆಳಗಿನ ಕಂದಮ್ಮಗಳಿಗೆ ಮುದ್ದು ಕೃಷ್ಣ, 2 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 3 ವರ್ಷಕ್ಕಿಂತ ಕೆಳಗಿನ ಕಂದಮ್ಮಗಳಿಗೆ ತುಂಟ ಕೃಷ್ಣ, ಅಂಗನವಾಡಿ, ಎಲ್‌ಕೆಜಿ, ಪುಟಾಣಿಗಳಿಗೆ ಬಾಲಕೃಷ್ಣ, ಯುಕೆಜಿ ಮತ್ತು 1ನೇ ತರಗತಿ ಪುಟಾಣಿಗಳಿಗೆ ಕಿಶೋರ ಕೃಷ್ಣ, 2, 3, 4ನೇ ತರಗತಿ ವಿದ್ಯಾರ್ಥಿಗಳಿಗಾಗಿ ಶ್ರೀ ಕೃಷ್ಣ, 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ಗೀತಾ ಕೃಷ್ಣ, 7ನೇ ತರಗತಿ ವರೆಗಿನ ಮಕ್ಕಳಿಗಾಗಿ ಶಂಖನಾದ, 7ನೇ ತರಗತಿ ಮೇಲ್ಪಟ್ಟು ಹಾಗೂ ಮುಕ್ತ ವಿಭಾಗದ ಶಂಖ ಉದ್ಘೋಷ, 7ನೇ ತರಗತಿ ವರೆಗಿನ ಮಕ್ಕಳಿಗೆ ರಾಧಾಕೃಷ್ಣ, 7ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ ರಾಧಾ ಮಾಧವ, ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಯಶೋಧ ಕೃಷ್ಣ, ದೇವಕಿಕೃಷ್ಣ, ಮುಕ್ತ ವಿಭಾಗದಲ್ಲಿ ವಸುದೇವ ಕೃಷ್ಣ, ಯಕ್ಷ ಕೃಷ್ಣ, ಕೃಷ್ಣ-ಕುಚೇಲ, ಸಮೂಹ ವಿಭಾಗದಲ್ಲಿ ನಂದ ಗೋಕುಲ, ಛಾಯಾ ಕೃಷ್ಣ, ಕೃಷ್ಣ ವರ್ಣ ವೈಭವ ಚಿತ್ರಕಲಾ ಸ್ಪರ್ಧೆ ಬಣ್ಣಗಾರಿಕೆ ಮತ್ತು ಚಿತ್ರಕಲಾ ಸ್ಪರ್ಧೆ, 7ನೇ ತರಗತಿವರೆಗಿನವರಿಗೆ ಅಚ್ಚುತ್ತ ರಸಪ್ರಶ್ನೆ-ಲಿಖಿತ, ಮುಕ್ತ ವಿಭಾಗದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೇಶವ ರಸಪ್ರಶ್ನೆ-ಲಿಖಿತ, ಪ್ರಾಥಮಿಕ ಶಾಲಾ ವಿಭಾಗ ಮತ್ತು ಪ್ರೌಢಶಾಲಾ ವಿಭಾಗಕ್ಕೆ ಪಂಡರಾ ಪುರ ವಿಠಲ-ನೃತ್ಯ ಭಜನಾ ಸ್ಪರ್ಧೆ ಎಂದು ಸ್ಪರ್ಧೆಗಳ ಬಗ್ಗೆ ವಿವರ ನೀಡಿದರು.30ರಂದು ಪೂರ್ವಭಾವಿ ಸ್ಪರ್ಧೆ: ಮಕ್ಕಳಿಗಾಗಿ ಶ್ರೀಕೃಷ್ಣನಿಗೆ ಸಂಬಂಧಪಟ್ಟ ಸಂಗೀತ ಸ್ಪರ್ಧೆ ಸಂಗೀತ ಸ್ಪರ್ಧೆ ಶಿಶು, ಬಾಲ, ಕಿಶೋರ, ತರುಣ ವಿಭಾಗದಲ್ಲಿ ಶ್ರೀಕೃಷ್ಣ ಗಾನ ವೈಭವ, ರಂಗೋಲಿಯಲ್ಲಿ ಶ್ರೀಕೃಷ್ಣ ಸ್ಪರ್ಧೆ (ಚುಕ್ಕಿ ರಂಗೋಲಿಯಲ್ಲೇ ರಚಿಸಬೇಕು), ಕೃಷ್ಣ ಕಥಾ ಸ್ಪರ್ಧೆ ಶ್ರೀಕೃಷ್ಣನ ಕುರಿತ ಕಥೆ ಹೇಳುವುದು, ಆನ್‌ಲೈನ್‌ ವಿಭಾಗದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧಾಳುಗಳಿಗೆ ಶ್ರೀಕೃಷ್ಣ ವೇಷಧಾರಿ ಮನೆಮಂದಿಯೊಂದಿಗೆ ಗಿಡ ನೆಡುವ/ವೃಕ್ಷಪ್ರೇಮ ತೋರುವ ವೃಕ್ಷ ಕೃಷ್ಣ, ಶ್ರೀಕೃಷ್ಣ ವೇಷಧಾರಿ ದನಕರುವಿನೊಂದಿಗೆ ಗೋಪ್ರೇಮ ತೋರುವ ಸನ್ನಿವೇಶದ ಗೋಪಾಲಕೃಷ್ಣ, ಕೃಷ್ಣವೇಷ ಸ್ಪರ್ಧೆ ನಡೆಯುವ ದಿನ ಕದ್ರಿಯ ದೇವಸ್ಥಾನದ ಪರಿಸರದಲ್ಲಿ ಚಿತ್ರಿಕರಿಸಿದ ರೀಲ್ಸ್‌ ಕೃಷ್ಣ ರೀಲ್ಸ್‌ ಸ್ಪರ್ಧೆ ನಡೆಯಲಿದೆ ಎಂದರು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಿಗಳಿಗೆ ಬಹುಮಾನ ಹಾಗೂ ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೆ ಉಡುಪಿ ಕಡಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಶ್ರೀಕೃಷ್ಣ ಚರಿತ್ರೆ ಪುಸ್ತಕ, ಕದ್ರಿ ಶ್ರೀಮಂಜುನಾಥದೇವರ ಭಾವಚಿತ್ರ, ಕೊಳಲು, ಪ್ರೋತ್ಸಾಹಕರಿಂದ ನೀಡಲ್ಪಟ್ಟ ಇತರ ಉಡುಗೊರೆಗಳು ಹಾಗೂ ಪ್ರಶಂಸನಾ ಪತ್ರ ಮತ್ತು ಶ್ರೀಮದ್‌ ಭಗವದ್ಗೀತೆಯ ಪ್ರತಿಯನ್ನು ನೀಡಲಾಗುವುದು. ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಸ್ಫರ್ಧಾ ಸ್ಥಳದಲ್ಲೇ ಹೆಸರು ನೋಂದಾಯಿಸಲು ಅವಕಾಶವಿರಲಿದೆ ಎಂದರು.

ಪ್ರಮುಖರಾದ ಕದ್ರಿ ನವನೀತ ಶೆಟ್ಟಿ, ಸುಧಾಕರ ರಾವ್‌ ಪೇಜಾವರ, ವಿಜಯಲಕ್ಷ್ಮೀ ಬಿ.ಶೆಟ್ಟಿ, ಪೂರ್ಣಿಮಾ ರಾವ್‌ ಪೇಜಾವರ, ಜಾನ್‌ ಚಂದ್ರನ್‌, ಶಿವಪ್ರಸಾದ್‌ ಪ್ರಭು, ಪ್ರಭಾಕರ ರಾವ್‌ ಪೇಜಾವರ, ಜಿ.ಕೆ.ಭಟ್‌ ಸೇರಾಜೆ, ಡಾ.ಎಂ.ಪ್ರಭಾಕರ ಜೋಶಿ, ಸಮೀರ್‌ ಪುರಾಣಿಕ್‌, ಶಶಿಪ್ರಭಾ ಐತಾಳ್‌, ತಾರಾನಾಥ ಶೆಟ್ಟಿ ಬೋಳಾರ ಮತ್ತಿತರರು ಇದ್ದರು.