ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ ವತಿಯಿಂದ ಬೆಂಗಳೂರಿನ ಡಾ. ಬಿ. ಆರ್‌. ಅಂಬೇಡ್ಕರ್‌ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾಂಸ್ಕೃತಿಕ ನೃತ್ಯ ಪ್ರದರ್ಶನವು ‘ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ ಜಾಗತಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಅಕಾಡೆಮಿಯ ವತಿಯಿಂದ ದೇಶದಲ್ಲೇ ಮೊದಲ ಬಾರಿಗೆ ೩೦೦ಕ್ಕೂ ಹೆಚ್ಚು ನೃತ್ಯ ಕಲಾವಿದರನ್ನು ಒಂದೆಡೆ ಸೇರಿಸಿ, ದೇಶಭಕ್ತಿ ಗೀತೆಗಳಿಗೆ ಭರತನಾಟ್ಯದ ವಿಶಿಷ್ಟ ಭಂಗಿಗಳಲ್ಲಿ ಏಕಕಾಲಕ್ಕೆ ಹೆಜ್ಜೆ ಹಾಕಿಸುವ ಮೂಲಕ "ಲಾರ್ಜೆಸ್ಟ್ ನಂಬರ್‌ ಆಫ್ ಪಾರ್ಟಿಸಿಪೆಂಟ್ಸ್ ಪರ್ಫಾಮಿಂಗ್ ಪೇಟ್ರಿಯಾಟಿಕ್ ಸಾಂಗ್ಸ್ ಇನ್ ಕ್ಲಾಸಿಕಲ್ ಡ್ಯಾನ್ಸ್ ಫಾರ್ಮ್‌ " ಎಂಬ ಜಾಗತಿಕ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.ಕಲಾವಿದರನ್ನು ಪ್ರೋತ್ಸಾಹಿಸಿದ ನ್ಯಾಯಮೂರ್ತಿ:ಮಂತ್ರಾಲಯದ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಆಶೀರ್ವಾದಗಳೊಂದಿಗೆ ನೆರವೇರಿದ ಈ ಬೃಹತ್ ಕಾರ್ಯಕ್ರಮವನ್ನು ಬೆಂಗಳೂರಿನ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಉದ್ಘಾಟಿಸಿದರು. ವೇದಿಕೆಯಿಂದ ನೇರವಾಗಿ ನೃತ್ಯ ಮೈದಾನದ ಸ್ಥಳಕ್ಕೆ ಧಾವಿಸಿದ ನ್ಯಾಯಮೂರ್ತಿಗಳು, ಅಲ್ಲಿ ಸಾಲಾಗಿ ಕುಳಿತಿದ್ದ ಪುಟ್ಪುಪುಟ್ಟ ಬಾಲಕಲಾವಿದರ ಬಳಿಗೆ ತೆರಳಿ ಅತ್ಯಂತ ಪ್ರೀತಿಯಿಂದ ಮಾತನಾಡಿಸಿ ಪ್ರೋತ್ಸಾಹಿಸಿದರು. ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಇಷ್ಟೊಂದು ಬೃಹತ್ ಸಂಖ್ಯೆಯ ಕಲಾವಿದರನ್ನು ಒಂದೆಡೆ ಸೇರಿಸಿ, ಯಾವುದೇ ಲೋಪವಿಲ್ಲದಂತೆ ಇಂತಹ ಮಹತ್ತರ ಕಾರ್ಯಕ್ರಮವನ್ನು ರೂಪಿಸುವುದು ಸಾಮಾನ್ಯದ ಕೆಲಸವಲ್ಲ. ಕೇವಲ ದಾಖಲೆಗಾಗಿ ಮಾತ್ರವಲ್ಲದೆ, ನಮ್ಮ ದೇಶದ ಭವ್ಯ ದೇಶಭಕ್ತಿಯನ್ನು ಶಾಸ್ತ್ರೀಯ ನೃತ್ಯ ಪ್ರಕಾರಕ್ಕೆ ಅತ್ಯದ್ಭುತವಾಗಿ ಅಳವಡಿಸಿಕೊಂಡು ಪ್ರಸ್ತುತಪಡಿಸಿರುವ ಅಕಾಡೆಮಿಯ ಆಯೋಜಕರ ಕಲ್ಪನೆ ಶ್ಲಾಘನೀಯ ಎಂದು ಮುಕ್ತ ಕಂಠದಿಂದ ಕೊಂಡಾಡಿದರು.

ಮನಸೂರೆಗೊಂಡ ಹಿನ್ನೆಲೆ ಗಾಯನ ಹಾಗೂ ಪಕ್ಕಾ ವಾದ್ಯದ ಜುಗಲ್ಬಂದಿ:

ಈ ಐತಿಹಾಸಿಕ ನೃತ್ಯ ಪ್ರದರ್ಶನಕ್ಕೆ ಪಕ್ಕವಾದ್ಯ ಹಾಗೂ ಹಿನ್ನೆಲೆ ಗಾಯನವು ಜೀವ ತುಂಬಿದಂತಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ನುರಿತ ಕಲಾತಂಡದೊಂದಿಗೆ ತಬಲಾ ವಾದಕರ ಲಯಬದ್ಧ ಜೀಟಿಗೆ, ಕೀಬೋರ್ಡ್‌ನ ನಾದಲಹರಿ ಹಾಗೂ ಗಾಯಕರ ಸುಮಧುರ ದೇಶಭಕ್ತಿ ಗೀತೆಗಳ ಗಾಯನವು ಮೈದಾನದಲ್ಲಿದ್ದ ನೃತ್ಯ ಕಲಾವಿದರಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಗಾಯನದ ಪ್ರತಿಯೊಂದು ಶೃತಿ ಹಾಗೂ ತಬಲಾದ ಪ್ರತಿಯೊಂದು ತತ್ಕಾರಕ್ಕೆ ತಕ್ಕಂತೆ ೩೦೦ಕ್ಕೂ ಹೆಚ್ಚು ಕಲಾವಿದರು ಏಕಕಾಲದಲ್ಲಿ ಹೆಜ್ಜೆ ಹಾಕಿದ ದೃಶ್ಯವು ನೆರೆದಿದ್ದ ಸಹಸ್ರಾರು ಕಲಾಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು. ನೃತ್ಯದಷ್ಟೇ ಸಮರ್ಥವಾಗಿ ಮೂಡಿಬಂದ ಈ ಪಕ್ಕಾ ವಾದ್ಯದ ಜುಗಲ್ಬಂದಿಯು ಇಡೀ ವಿಶ್ವ ದಾಖಲೆಯ ಕಾರ್ಯಕ್ರಮದ ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿತು.ದಾಖಲೆ ಪ್ರಮಾಣಪತ್ರ ಹಸ್ತಾಂತರ:

ಅಮೃತಸರದಿಂದ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥಾಪಕರಾದ ಪ್ರೀತಿ ಸಿಂಗ್ ಅವರು ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ದೇಶಭಕ್ತಿಯನ್ನು ಬಿಂಬಿಸುವ ಈ ಅಪೂರ್ವ ನೃತ್ಯ ಪ್ರದರ್ಶನವು ತಮ್ಮ ಜಾಗತಿಕ ದಾಖಲೆಗಳ ಪುಸ್ತಕದಲ್ಲಿ ಪ್ರಥಮವಾಗಿ ಸೇರ್ಪಡೆಯಾಗಿರುವುದನ್ನು ಹೆಮ್ಮೆಯಿಂದ ಬಹಿರಂಗವಾಗಿ ಘೋಷಿಸಿದರು. ತದನಂತರ ಜಾಗತಿಕ ವಿಶ್ವ ದಾಖಲೆಯ ಅಧಿಕೃತ ಪ್ರಮಾಣ ಪತ್ರವನ್ನು ನ್ಯಾಯಾಧೀಶರ ಹಸ್ತದ ಮುಖಾಂತರ ಅಕಾಡೆಮಿಯ ಆಯೋಜನ ಕಾರ್ಯದರ್ಶಿಯಾದ ವಿದುಷಿ ಡಾ. ಸ್ವಾತಿ ಪಿ. ಭಾರದ್ವಾಜ್ ಅವರಿಗೆ ಹಸ್ತಾಂತರಿಸಲಾಯಿತು. ಸ್ಟೇಡಿಯಂನ ಗ್ಯಾಲರಿಯಲ್ಲಿ ತುಂಬಿ ತುಳುಕುತ್ತಿದ್ದ ಸಾವಿರಾರು ಕಲಾ ಪ್ರೋತ್ಸಾಹಕರು, ಪೋಷಕರು ಮತ್ತು ಸಾರ್ವಜನಿಕರು ಈ ಐತಿಹಾಸಿಕ ಸಾಧನೆಗೆ ಸಾಕ್ಷಿಯಾದರು.


ಕನ್ನಡ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಈ ಭವ್ಯ ಸಮಾರಂಭದಲ್ಲಿ ಅಕಾಡೆಮಿ ಅಧ್ಯಕ್ಷೆ ಕೆ. ಆರ್‌. ಅನಿತಾ ಪ್ರಕಾಶ್, ಅಕಾಡೆಮಿ ಸಂಚಾಲಕರಾದ ಪ್ರಕಾಶ್, ಗಣ್ಯರು ಹಾಗೂ ಸಹಸ್ರಾರು ಕಲಾಭಿಮಾನಿಗಳು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.