ಇಂದಿನಿಂದ ಸಾಣೆಯಲ್ಲಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ

| Published : Nov 04 2024, 12:19 AM IST / Updated: Nov 04 2024, 12:20 AM IST

ಇಂದಿನಿಂದ ಸಾಣೆಯಲ್ಲಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನಿಂದ ಪ್ರಾರಂಭಗೊಳ್ಳಲಿರುವ ರಾಷ್ಟ್ರೀಯ ನಾಟಕೋತ್ಸವಕ್ಕೆ ಸಾಣೇಹಳ್ಳಿ ನವ ವಧುವಿನಂತೆ ಶೃಂಗಾರಗೊಂಡಿದೆ. ಶ್ರೀ ಮಠದ ಮುಖ್ಯ ರಸ್ತೆಯ ಉದ್ದಕ್ಕೂ ಬಣ್ಣ ಬಣ್ಣದ ವಿದ್ಯುತ್‌ ದೀಪಾಲಂಕಾರ ಹಾಗೂ ಹಸಿರು ತೋರಣಗಳಿಂದ ಶೃಂಗರಿಸಲಾಗಿದೆ. ಶಿವಕುಮಾರ ಬಯಲು ರಂಗಮಂದಿರ , ಎಸ್‌ಎಸ್‌ ಒಳಾಂಗಣ ರಂಗಮಂದಿರ ಹಾಗೂ ಅದರ ಸುತ್ತಾ ಇರುವ ಉದ್ಯಾನವನ ಬಣ್ಣ ಬಣ್ಣ ಕಣ್‌ಮನತಣಿಸುವ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಇಂದಿನಿಂದ ಪ್ರಾರಂಭಗೊಳ್ಳಲಿರುವ ರಾಷ್ಟ್ರೀಯ ನಾಟಕೋತ್ಸವಕ್ಕೆ ಸಾಣೇಹಳ್ಳಿ ನವ ವಧುವಿನಂತೆ ಶೃಂಗಾರಗೊಂಡಿದೆ. ಶ್ರೀ ಮಠದ ಮುಖ್ಯ ರಸ್ತೆಯ ಉದ್ದಕ್ಕೂ ಬಣ್ಣ ಬಣ್ಣದ ವಿದ್ಯುತ್‌ ದೀಪಾಲಂಕಾರ ಹಾಗೂ ಹಸಿರು ತೋರಣಗಳಿಂದ ಶೃಂಗರಿಸಲಾಗಿದೆ. ಶಿವಕುಮಾರ ಬಯಲು ರಂಗಮಂದಿರ , ಎಸ್‌ಎಸ್‌ ಒಳಾಂಗಣ ರಂಗಮಂದಿರ ಹಾಗೂ ಅದರ ಸುತ್ತಾ ಇರುವ ಉದ್ಯಾನವನ ಬಣ್ಣ ಬಣ್ಣ ಕಣ್‌ಮನತಣಿಸುವ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.ಶ್ರಿ ಮಠದಿಂದ ಬಯಲು ರಂಗಮಂದಿರದವರೆಗೂ ವಚನಗಳ ಭಿತ್ತಿ ಫಲಕಗಳು, ಪುಸ್ತಕ ಬಂಡಾರ, ಆರೋಗ್ಯ ಮಾರ್ಗದರ್ಶಿ ಸೇರಿದಂತೆ ವಿವಿಧ ವಸ್ತುಗಳ ಮಾರಾಟದ ಮಳಿಗೆಗಳು ತೆರೆದುಕೊಂಡಿವೆ.ಪ್ರತಿ ವರ್ಷದಂತೆ ಈ ಬಾರಿ ನಮ್ಮ ನಡೆ ಸರ್ವೋದಯದೆಡೆಗೆ ಎಂಬ ಆಶಯದೊಂದಿಗೆ ಜನರ ಮನಸ್ಸನ್ನು ಚಿಂತನೆಗೆ ಒಳಪಡಿಸುವ, ಸೃಜನಾಶೀಲತೆಯನ್ನು ಹುಟ್ಟು ಹಾಕುವ, ಬಂಡಾಯದ ಗುಣ ಬೆಳಸುವ, ಸ್ವ ವಿಮರ್ಶೆ ಮಾಡಿಕೊಳ್ಳುವ ಹಲವು ಬಗೆಯಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವಂತಹ ನಾಟಕ ಹಾಗೂ ವಿಚಾರ ಸಂಕಿರಣಗಳು ನಡೆಯಲಿವೆ.ಶಿವಕುಮಾರ ಬಯಲು ರಂಗಮಂದಿರದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ಮತ್ತು ನಾಟಕಗಳ ಪ್ರದರ್ಶನ ನಡೆಯಲಿದ್ದು, ಎಸ್‌ ಎಸ್‌ ಒಳಾಂಗಣ ರಂಗಮಂದಿರದಲ್ಲಿ ಮಧ್ಯಾಹ್ನದ ನಾಟಕ ಪ್ರದರ್ಶನಗಳು ಮತ್ತು ಮುಖ್ಯ ವಿಚಾರ ಸಂಕಿರಣ, ಶಿವಕುಮಾರ ರಂಗಮಂದಿರದಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನಾ ಕಾರ್ಯಕ್ರಮಗಳು ಜರುಗಲಿವೆ. ನಾಟಕೋತ್ಸವ ಪ್ರಮುಖವಾಗಿ ಕನ್ನಡ ರಾಜ್ಯೋತ್ಸವ, ವಿಚಾರ ಮಾಲಿಕೆ, ವಿಚಾರ ಸಂಕಿರಣ, ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ, ಕೃತಿಗಳ ಲೋಕಾರ್ಪಣೆ, ಸಾಮೂಹಿಕ ಪ್ರಾರ್ಥನೆ, ಶಿವಮಂತ್ರ ಲೇಖನ, ಚಿಂತನ, ವಚನಗೀತೆ, ನೃತ್ಯ ರೂಪಕಗಳು, ಉಪನ್ಯಾಸ, ಅಭಿನಂದನೆ, ಆಶೀರ್ವಚನ, ನಾಟಕ ಪ್ರದರ್ಶನಗಳನ್ನು ಒಳಗೊಂಡಿದೆ. ನಾಟಕೋತ್ಸವದಲ್ಲಿ ಶಿವಸಂಚಾರದ ತುಲಾಭಾರ, ಬಂಗಾರದ ಮನುಷ್ಯ, ಕೋಳೂರು ಕೊಡಗೂಸು ಹಾಗೂ ರಾಜ್ಯದ ಇತರೆ ಜಿಲ್ಲೆಗಳ ಕಲಾವಿದರು ನಟಿಸುವ ಕಾಲಚಕ್ರ, ಮಹಾಬೆಳಗು, ಪರಸಂಗಗೆಡ್ಡೆತಿಮ್ಮ ಸೇರಿದಂತೆ ಈ ಬಾರಿ ಒಟ್ಟು 11 ನಾಟಕಗಳು ಪ್ರದರ್ಶನಗೊಳ್ಳಲಿವೆ. ಈ ಬಾರಿಯ ರಾಷ್ಟ್ರೀಯ ನಾಟಕೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸುವರು. ಯೋಜನೆ ಮತ್ತು ಸಾಂಖ್ಯಿಕ ಇಲಾಕೆ ಸಚಿವ ಡಿ. ಸುಧಾಕರ್ ಶಿವಸಂಚಾರ ನಾಟಕಗಳನ್ನು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ. ಎಂ.ಎನ್ ಅಜಯ್ ನಾಗಭೂಷಣ ಕನ್ನಡ ರಾಜ್ಯೋತ್ಸವ ಉದ್ಘಾಟಿಸುವರು.

ಬಸವ ಬೆಳವಿ ಚರಂತೇಶ್ವರ ಮಠದ ಶರಣಬಸವ ಸ್ವಾಮೀಜಿ ಹಾಗೂ ಪಂಡಿತಾರಾಧ್ಯ ಸ್ವಾಮೀಜಿ ಸಾನಿಧ್ಯವಹಿಸುವರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯಸ್ಥ ಪಿಜಿಆರ್ ಸಿಂದ್ಯ, ನಿವೃತ್ತ ಪೊಲೀಸ್ ಮಹಾನಿರ್ದೆಶಕ ಶಂಕರ್ ಬಿದರಿ, ನಿವೃತ್ತ ಪೋಲೀಸ್ ಆಯುಕ್ತ ಸಿದ್ದರಾಮಪ್ಪ, ಶಾಸಕರುಗಳಾದ ಎಂ. ಚಂದ್ರಪ್ಪ, ಬಿಪಿ ಹರೀಶ್, ಬೆಳ್ಳಿ ಪ್ರಕಾಶ್, ಮಾಡಾಳು ಮಲ್ಲಿಕಾರ್ಜುನ ಭಾಗವಹಿಸುವರು.

ಮಳೆ ಬಂದರೂ ಪ್ರೇಕ್ಷಕರಿಗೆ ತೊಂದರೆಯಾಗದಂತೆ 120 ಅಡಿ - 60 ಅಡಿಯ ತಗಡಿನ ಶೆಡ್‌ ಮಾಡಲಾಗಿದೆ. ಎಸ್‌ ಎಸ್‌ ರಂಗಮಂದಿರದಲ್ಲಿ 1000, ತಡಗಿನ ಸೆಡ್‌ನಲ್ಲಿ 1000, ಶ್ರೀ ಶಿವಕುಮಾರ ರಂಗಮಂದಿರದಲ್ಲಿ 1000 ಹೀಗೆ ಮೂರು ಸಾವಿರ ಜನರು ಕೂತು ನೋಡುವ ಅವಕಾಶ ಕಲ್ಪಿಸಲಾಗಿದೆ.

ಸರ್ವೋದಯ ತತ್ವ ಜಾರಿಗೆ ಬರಲಿ

ದೇಶದ ತುಂಬಾ ಭ್ರಷ್ಟಾಚಾರ, ಅನೀತಿ ತುಂಬಿ ತುಳುಕುತ್ತಿವೆ. ಮೌಲ್ಯಗಳು ಅಪಮೌಲ್ಯಗಳಾಗುತ್ತಿವೆ. ಗಾಂಧೀಜಿ ಹೇಳಿದ ಸರ್ವೋದಯ ತತ್ವ ಜಾರಿಗೆ ತರಬೇಕು . ಸರ್ವೋದಯ ಮತ್ತು ಕಲ್ಯಾಣ ಎರಡು ಒಂದೇ. ಸಮಾಜದಲ್ಲಿ ಅನಿಷ್ಟ ನಿವಾರಿಸಿ ಸಮ ಸಮಾಜದ ನಿರ್ಮಾಣ ಮಾಡುವುದು ಈ ಬಾರಿಯ ನಾಟಕೋತ್ಸವದ ಉದ್ದೇಶ. ಕ್ರೈಸ್ತ, ಜೈನ, ಬೌದ್ಧ, ಇಸ್ಲಾಂ, ಲಿಂಗಾಯತ ಈ ಧರ್ಮಗಳಲ್ಲಿ ಮಾನವ ಹಕ್ಕುಗಳನ್ನು ಹೇಗೆ ಪ್ರತಿಪಾದನೆ ಮಾಡಲಾಗಿದೆ ಎಂಬುದನ್ನು ತಿಳಿಸುವ ಉದ್ದೇಶದಿಂದ ಈ ವಿಷಯದ ಕುರಿತು ವಿಚಾರ ಸಂಕಿರಣದಲ್ಲಿ ಮುಕ್ತವಾಗಿ ಚರ್ಚೆ ನಡೆಯಲಿದೆ.

ಪಂಡಿತಾರಾಧ್ಯ ಶ್ರೀ ಸಾಣೇಹಳ್ಳಿ ಮಠ