ನ್ಯಾಷನಲ್‌ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ದೂರಿನ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ನಿರಾಕರಿಸುವ ಮೂಲಕ ಬಿಜೆಪಿ ಬಣ್ಣವನ್ನು ಬಯಲು ಮಾಡಿದೆ.

ಹುಬ್ಬಳ್ಳಿ:

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಗಾಂಧಿ ಕುಟುಂಬವನ್ನು ಸಿಲುಕಿಸಲು ಪ್ರಧಾನಿ ನರೇಂದ್ರ ಮೋದಿ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಗುರುವಾರ ನಡೆಯಿತು.

ಈ ವೇಳೆ ಪೊಲೀಸರು 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

ಇಲ್ಲಿನ ಕಾರವಾರ ರಸ್ತೆಯ ಕಾಂಗ್ರೆಸ್‌ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಕಚೇರಿಯ ಅನತಿ ದೂರದಲ್ಲಿ ಪೊಲೀಸರು ಹಾಕಲಾಗಿದ್ದ ಬ್ಯಾರಿಕೇಡ್‌ ವರೆಗೆ ಆಗಮಿಸಿದ ಕೈ ಕಾರ್ಯಕರ್ತರನ್ನು ತಡೆಯಲು ಯತ್ನಿಸಿದ ಪೊಲೀಸರೊಂದಿಗೆ ಕೆಲಕಾಲ ವಾಗ್ವಾದ ನಡೆಸಿ ಬ್ಯಾರಿಕೇಡ್‌ ಹಾರಲು ಯತ್ನಿಸಿದರು. ಈ ವೇಳೆ ಪೊಲೀಸರು 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದರು.

ಈ ವೇಳೆ ಮಹಾನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ ಮಾತನಾಡಿ, ನ್ಯಾಷನಲ್‌ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ದೂರಿನ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ನಿರಾಕರಿಸುವ ಮೂಲಕ ಬಿಜೆಪಿ ಬಣ್ಣವನ್ನು ಬಯಲು ಮಾಡಿದೆ. ಇದೇ ರೀತಿ ಕಾಂಗ್ರೆಸ್‌ ನಾಯಕರ ಮೇಲೆ ಬಿಜೆಪಿ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದೆ. ನ್ಯಾಯಾಲಯವು ಸತ್ಯದ ಪರವಾಗಿ ತೀರ್ಪು ನೀಡುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಿದೆ ಎಂದರು.

ಗ್ರಾಮೀಣ ಕಾಂಗ್ರೆಸ್‌ ಘಟಕದ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಮಾತನಾಡಿ, ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಸದಾ ಪಿತೂರಿ ನಡೆಸುತ್ತಾ ಬಂದಿದೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿಯೂ ಇದೇ ರೀತಿ ಮಾಡಲಾಗಿದೆ. ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಲ್ಲ-ಸಲ್ಲದ ಪ್ರಕರಣಗಳನ್ನು ಕಾಂಗ್ರೆಸ್‌ ನಾಯಕರ ಮೇಲೆ ಹಾಕುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್‌ನವರನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳಲು ಬಯಸುತ್ತಿದ್ದಾರೆ. ಆದರೆ, ಕಾನೂನು ಕಣ್ಣು ತೆರೆದಿದೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣವನ್ನು ತಿರಸ್ಕರಿಸಿರುವುದು ಸ್ವಾಗತಾರ್ಹ ಎಂದರು.

ಈ ವೇಳೆ ಯುವ ಕಾಂಗ್ರೆಸ್‌ ಅಧ್ಯಕ್ಷ ಅರ್ಜುನ ಪಾಟೀಲ, ಪ್ರಮುಖರಾದ ಸದಾನಂದ ಡಂಗನವರ, ಬ್ಲಾಕ್‌ ಅಧ್ಯಕ್ಷ ಶರೀಫ್‌ ಗರಗದ, ಬಿ.ಎಂ. ದೊಡ್ಡಮನಿ, ಪ್ರೇಮನಾಥ ಚಿಕ್ಕತುಂಬಳ, ನವೀದ ಮುಲ್ಲಾ, ಬಸವರಾಜ ಬೆಣಕಲ್ಲ, ಸಂಗಮೇಶ್ವರ ಗೌರಕ್ಕನವರ, ಮಹಿಳಾ ಅಧ್ಯಕ್ಷೆ ಗೌರಮ್ಮ ಬಳೋಗಿ, ಚೇತನಾ ಲಿಂಗದಾಳ, ಬಾಳಮ್ಮ ಜಂಗಿನವರ, ಕಲಾವತಿ ದತ್ತವಾಡ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.