ಕುಶಾಲನಗರದಿಂದ ರಾಷ್ಟ್ರೀಯ ಹೆದ್ದಾರಿ -275ರ ಮೈಸೂರು ಭಾಗಕ್ಕೆ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿ ಕಳೆದ ಕೆಲವು ತಿಂಗಳುಗಳಿಂದ ಬಿರುಸಿನಿಂದ ನಡೆಯುತ್ತಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರದಿಂದ ರಾಷ್ಟ್ರೀಯ ಹೆದ್ದಾರಿ -275ರ ಮೈಸೂರು ಭಾಗಕ್ಕೆ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿ ಕಳೆದ ಕೆಲವು ತಿಂಗಳುಗಳಿಂದ ಬಿರುಸಿನಿಂದ ನಡೆಯುತ್ತಿದೆ.

ಒಟ್ಟು 97.335 ಕಿ.ಮೀ. ದೂರದ ರಸ್ತೆ ಕಾಮಗಾರಿ ಕುಶಾಲನಗರ ಬೈಪಾಸ್ ನಲ್ಲಿ ಆರಂಭವಾಗಿ ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿಯಲ್ಲಿ ಕೊನೆಗೊಳ್ಳಲಿದೆ.

ಕಾಮಗಾರಿ ಯೋಜನೆಯ ಪ್ಯಾಕೇಜ್- 2ರ ಜಿಲ್ಲೆಯ ವ್ಯಾಪ್ತಿಯ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಕಳೆದ ಮೂರು ವಾರಗಳಿಂದ ಆರಂಭಗೊಂಡಿದ್ದು, 2027ರ ಆರಂಭದಲ್ಲಿ ರಸ್ತೆ ವಾಹನ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.ತೆಪ್ಪದ ಕಂಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆ ಸಮೀಪದಲ್ಲಿ ಬೃಹತ್ ಫ್ಲೈ ಓವರ್ ನಿರ್ಮಾಣ ಕಾರ್ಯ ನಡೆಯಲಿದೆ. ಗುಡ್ಡೆ ಹೊಸೂರು ಸಿದ್ದಾಪುರ ರಾಜ್ಯ ಹೆದ್ದಾರಿ ಕೆಳಭಾಗದಲ್ಲಿ ಸಾಗಲಿದ್ದು, ಮೇಲ್ಭಾಗದಲ್ಲಿ ಮೈಸೂರು-ಕುಶಾಲನಗರ (ಬಸವನಹಳ್ಳಿ) ಫ್ಲೈ ಓವರ್ ಚತುಷ್ಪಥ ರಸ್ತೆ ಸಾಗಲಿದೆ.

ಮೈಸೂರು ಭಾಗದಿಂದ ಸಾಗುವ ಚತುಷ್ಪಥ ರಸ್ತೆ ಕಾಮಗಾರಿ ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 2.3 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ಬಸವನಹಳ್ಳಿ ಗ್ರಾಮದ ಮೂಲಕ ಮಡಿಕೇರಿ ರಸ್ತೆಯ ಆನೆಕಾಡು ಬಳಿ ಸಂಪರ್ಕ ಕಲ್ಪಿಸಲಿದೆ.

ಬಸವನಹಳ್ಳಿ ಗ್ರಾಮದ 50 ಕುಟುಂಬಗಳು 25 ಕಟ್ಟಡಗಳು ಸೇರಿದಂತೆ ಆಸ್ತಿ ಮನೆಯನ್ನು ಕಳೆದುಕೊಂಡಿದ್ದು, ಈಗಾಗಲೇ ಸರ್ಕಾರದಿಂದ ಅಗತ್ಯ ಪರಿಹಾರ ಪಡೆದುಕೊಂಡಿದ್ದಾರೆ. ಪಿರಿಯಾಪಟ್ಟಣ ತಾಲೂಕು ಮತ್ತು ಈ ವ್ಯಾಪ್ತಿಯಲ್ಲಿ ವನ್ಯಜೀವಿ ಅರಣ್ಯ ವಿಭಾಗದ ತಕರಾರು ವ್ಯಾಜ್ಯ ತೆರವು ಗೊಂಡಿದ್ದು, ಇದೀಗ ಕಾಮಗಾರಿ ಆರಂಭಗೊಂಡಿರುವುದು ಕಂಡುಬಂದಿದೆ. ಶ್ರೀರಂಗಪಟ್ಟಣ-ಕುಶಾಲನಗರ (ಬಸವನಹಳ್ಳಿ) ತನಕ ಪ್ರಸ್ತಾವಿತ 45 ನಗರ, 60 ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ರಸ್ತೆ ಸುಮಾರು 2502.04 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಕೊಡಗು ಮೈಸೂರು ಮಂಡ್ಯ ಜಿಲ್ಲೆಗಳ ಭೂ ಪ್ರದೇಶಗಳನ್ನೊಳಗೊಂಡ ಈ ಯೋಜನೆ ಬಯಲು ಪ್ರದೇಶ ಮತ್ತು ಗುಡ್ಡಗಾಡು ವ್ಯಾಪ್ತಿಯಲ್ಲಿ ನಡೆಯಲಿದೆ. ಸುಮಾರು 581 ಹೆಕ್ಟೇರ್ ಭೂಮಿಯನ್ನು ಬಳಸಿಕೊಂಡು ಈ ರಸ್ತೆ ನಿರ್ಮಾಣವಾಗುತ್ತಿದ್ದು, ಸುಮಾರು 46.85 ಹೆಕ್ಟೇರ್ ಅರಣ್ಯ ಪ್ರದೇಶಗಳನ್ನು ರಸ್ತೆ ನಿರ್ಮಾಣಕ್ಕೆ ಉಪಯೋಗಿಸಲಾಗುತ್ತದೆ. ಅರಣ್ಯ ಇಲಾಖೆಯಿಂದ ಮತ್ತು ಸಂಬಂಧಿಸಿದ ಇಲಾಖೆಗಳಿಂದ ಯೋಜನೆಗೆ ಈಗ ಎಲ್ಲೆಡೆ ಗ್ರೀನ್ ಸಿಗ್ನಲ್ ಲಭಿಸಿದೆ.

ಕೊಡಗು ಜಿಲ್ಲೆಯ 2.3 ಹೆಕ್ಟೇರ್ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದ್ದು, 13.74 ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶ ಒಳಗೊಂಡಿದೆ. ಸುಮಾರು 62 ಹಳ್ಳಿಗಳು ಈ ಚತುಷ್ಪಥ ರಸ್ತೆಯ ಪ್ರಭಾವಕ್ಕೊಳಗಾಗಿದ್ದು ಅದರಲ್ಲಿ ಕೊಡಗು ಜಿಲ್ಲೆಯಲ್ಲಿ ಗುಡ್ಡೆ ಹೊಸೂರು ಗ್ರಾಪಂ ವ್ಯಾಪ್ತಿಯ ಬಸವನಹಳ್ಳಿ ಗ್ರಾಮ ಸೇರಿಕೊಂಡಿದೆ.

ಇಡೀ ಯೋಜನಾ ವ್ಯಾಪ್ತಿಯಲ್ಲಿ 326 ಕುಟುಂಬಗಳು ಹೆದ್ದಾರಿ ಕಾಮಗಾರಿ ಪ್ರಭಾವಕ್ಕೊಳಪಟ್ಟಿದ್ದು ಕೊಡಗು ಜಿಲ್ಲೆಯ ವ್ಯಾಪ್ತಿಯ ಒಟ್ಟು 50 ಮನೆಗಳು ಇದರಲ್ಲಿ ಒಳಗೊಂಡಿವೆ. 380 ಕಟ್ಟಡ, ಆಸ್ತಿಪಾಸ್ತಿಗೆ ಹಾನಿಯಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಅದರಲ್ಲಿ ಕೊಡಗು ಜಿಲ್ಲೆಯ ಬಸವನಹಳ್ಳಿ ಗ್ರಾಮದ 25 ಕಟ್ಟಡಗಳು ಸೇರಿಕೊಂಡಿವೆ. ಮನೆ ಆಸ್ತಿ ಆಸ್ತಿ ಕಳೆದುಕೊಳ್ಳುವ ಎಲ್ಲ ಮಾಲೀಕರಿಗೂ ದುಪ್ಪಟ್ಟು ಪ್ರಮಾಣದ ನಗದು ಪರಿಹಾರ ಈಗಾಗಲೇ ಕಲ್ಪಿಸಲಾಗಿದೆ ಎಂದು ಹೆದ್ದಾರಿ ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.ಚತುಷ್ಪಥ ಹೆದ್ದಾರಿ ಯೋಜನೆಯಲ್ಲಿ ಒಟ್ಟಾರೆ ಎರಡು ಮೇಲ್ಸೇತುವೆಗಳು ನಿರ್ಮಾಣಗೊಳ್ಳಲಿದ್ದು, ಹುಣಸೂರು ಪಿರಿಯಾಪಟ್ಟಣ ಹೆದ್ದಾರಿ ನಡುವೆ ನಿರ್ಮಾಣದ ಹಂತದಲ್ಲಿದೆ. ಅಗತ್ಯ ಇರುವ ಸ್ಥಳಗಳಲ್ಲಿ 44 ಚಿಕ್ಕ ಸೇತುವೆಗಳು ನಿರ್ಮಾಣಗೊಳ್ಳುತ್ತಿವೆ. ಕಾಮಗಾರಿಯಲ್ಲಿ ಒಟ್ಟು 22 ವಾಹನ ಸುರಂಗ ಕಾಮಗಾರಿ ನಡೆಯುತ್ತಿದ್ದು, ಜಿಲ್ಲೆಯ ವ್ಯಾಪ್ತಿಯಲ್ಲಿ ಎರಡು ವಾಹನ ಸುರಂಗಗಳು ನಿರ್ಮಾಣಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ 21 ಲಘು ವಾಹನ ಸುರಂಗ ಕಾಮಗಾರಿ ನಡೆಯಲಿದೆ. ಒಟ್ಟು ಯೋಜನಾ ವೆಚ್ಚ 4128.92 ಕೋಟಿ ರೂಗಳಾಗಿದ್ದು ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ 92 ಕೋಟಿ ರು. ವೆಚ್ಚವಾಗಲಿದೆ.ಹೆದ್ದಾರಿ ಕಾಮಗಾರಿ ಸಂದರ್ಭ ಅಂದಾಜು 18 ಸಾವಿರ ಸಂಖ್ಯೆಯ ಮರಗಳನ್ನು ಕಡಿಯುವ ನಿರೀಕ್ಷೆ ಹೊಂದಲಾಗಿದ್ದು ಈಗಾಗಲೇ ಬಹುತೇಕ ಮರಗಳನ್ನು ತೆರವುಗೊಳಿಸಲಾಗಿದೆ. ಯೋಜನೆಯಿಂದ ತೊಂದರೆಗೆ ಒಳಗಾಗುವ ಸಾಂಸ್ಕೃತಿಕ ಧಾರ್ಮಿಕ ಸಮುದಾಯದ ಆಸ್ತಿಗಳು ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಆಸ್ಪತ್ರೆಗಳನ್ನು ಕೂಡ ಗುರುತಿಸಲಾಗಿದ್ದು ಅವುಗಳನ್ನು ತೆರವುಗೊಳಿಸಿ ಬದಲಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ಪಿರಿಯಾಪಟ್ಟಣ ಕಡೆಯಿಂದ ಬರುವ ಚತುಷ್ಪಥ ರಸ್ತೆ ಬೈಲುಕುಪ್ಪೆ ಮೂಲಕ ಹಾದು ನಂತರ ರಾಣಿ ಗೇಟ್ ಮೂಲಕ ಕೊಡಗು ಜಿಲ್ಲೆಯ ತೆಪ್ಪದ ಕಂಡಿ ಬಳಿ ಜಿಲ್ಲೆಗೆ ಸಂಪರ್ಕ ಕಲ್ಪಿಸಲಿದೆ. ಯೋಜನೆಗೆ ಅಂದಾಜು 595.32 ಹೆಕ್ಟೇರ್ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಯೋಜನೆಯಿಂದ ಬಾಧಿತ ಜನರಿಗೆ ಅಥವಾ ಕುಟುಂಬಗಳಿಗೆ ನಿಯಮಾನುಸಾರ ಪರಿಹಾರ ಒದಗಿಸಲಾಗಿದೆ.ಯೋಜನೆಯು ಬಹುತೇಕ ಹಸಿರು ಕ್ಷೇತ್ರದ ಹೆದ್ದಾರಿಯಾಗಿದೆ. ಯೋಜನೆಯ ವೆಚ್ಚದಲ್ಲಿ ಪರಿಸರ ಪರಿಹಾರೋಪಾಯಗಳು ಮತ್ತು ಮೇಲ್ವಿಚಾರಣೆಯ ವೆಚ್ಚವಾಗಿ 22.284 ಕೋಟಿ ರೂಗಳ ಮೀಸಲು ಇರಿಸಲಾಗಿದೆ.2027ರ ಆರಂಭದಲ್ಲಿ ಕಾಮಗಾರಿ ಸಂಪೂರ್ಣ ಮುಗಿದು ಲೋಕಾರ್ಪಣೆಗೊಳಲಿದೆ ಎಂದು ಹೆದ್ದಾರಿ ಯೋಜನಾಧಿಕಾರಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ಈ ಪ್ರಸ್ತಾವಿತ ಹೆದ್ದಾರಿ ರಸ್ತೆ ಹುಣಸೂರು ಪಿರಿಯಾಪಟ್ಟಣ ಕುಶಾಲನಗರ ಪಟ್ಟಣಗಳ ಹೊರವಲಯದಿಂದ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ಪಟ್ಟಣಗಳ ವಾಹನ ಸಂಚಾರದ ಒತ್ತಡಗಳು ಬಹುತೇಕ ಕಡಿಮೆಯಾಗಲಿದೆ. ಮೂರು ಹಂತಗಳಲ್ಲಿ ನಡೆಯುತ್ತಿರುವ ಈ ಕಾಮಗಾರಿ ಉತ್ತಮ ಗುಣಮಟ್ಟದಲ್ಲಿ ನಡೆಯಲಿದೆ. 2027ರ ಆರಂಭದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇರುವುದಾಗಿ ಕೊಡಗು ಮೈಸೂರು ಲೋಕಸಭಾ ಸದಸ್ಯ ಯದುವೀರ್ ಒಡೆಯರ್ ಹೇಳಿದ್ದಾರೆ. ಮೈಸೂರಿನಿಂದ ಕುಶಾಲನಗರಕ್ಕೆ ಸಾಗುವ ಮಾರ್ಗಕ್ಕೆ ಹೋಲಿಸಿದರೆ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡಲಿದೆ ಈ ರಸ್ತೆ ಗುಣ ಮಟ್ಟದಿಂದಾಗಿ ವಾಹನ ನಿರ್ವಹಣಾ ವೆಚ್ಚ ಕೂಡ ಕಡಿಮೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.