ಸಾರಾಂಶ
- ಭದ್ರಾ ಐಸಿಸಿ ಸಭೆ ಕರೆಯಲು ಜಿಲ್ಲಾ ರೈತರ ಒಕ್ಕೂಟದ ಮುಖಂಡರ ಪಟ್ಟು
- - - ಕನ್ನಡಪ್ರಭ ವಾರ್ತೆ, ದಾವಣಗೆರೆಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಸುವಂತೆ, ಡ್ಯಾಂನ ನೀರಿನ ಲಭ್ಯತೆ ಅನುಸಾರ ನೀರು ಹರಿಸುವ ನಿರ್ಧಾರ ಕೈಗೊಳ್ಳುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜು.24ರಂದು ನಗರದ ಹೊರವಲಯದ ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಪ್ರತಿಭಟಿಸಲು ಜಿಲ್ಲಾ ರೈತರ ಒಕ್ಕೂಟ ನಿರ್ಧರಿಸಿದೆ.
ನಗರದ ಲೋಕೋಪಯೋಗಿ ಇಲಾಖೆ ಸರ್ಕ್ಯೂಟ್ ಹೌಸ್‌ನಲ್ಲಿ ಭಾರತೀಯ ರೈತ ಒಕ್ಕೂಟ (ಭದ್ರಾ ಶಾಖೆ) ಧುರೀಣ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದ ಭದ್ರಾ ಅಚ್ಚುಕಟ್ಟು ರೈತರ ಸಭೆಯಲ್ಲಿ ಜು.24ರಂದು ಬೆಳಗ್ಗೆ 11ರಿಂದ ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಪ್ರತಿಭಟಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.ರೈತ ಮುಖಂಡರು ಮಾತನಾಡಿ, ಐಸಿಸಿ ಸಭೆ ತಕ್ಷಣವೇ ನಡೆಸಬೇಕು. ಭದ್ರಾ ಡ್ಯಾಂನಲ್ಲಿ ನೀರಿನ ಲಭ್ಯತೆಗೆ ಅನುಸಾರವಾಗಿ ನೀರು ಬಿಡುವ ನಿರ್ಧಾರ ಮಾಡಬೇಕು. ಭದ್ರಾ ಡ್ಯಾಂನಲ್ಲಿ ಸ್ಲೂಯಿಸ್ ಗೇಟ್ ಮೂಲಕ ನೀರು ಸೋರಿಕೆ ತಡೆಗಟ್ಟಲು ಪ್ರಥಮ ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕು. ಸ್ಲೂಯಿಸ್ ಗೇಟ್ ಭದ್ರತೆ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದರು.
1962ರಲ್ಲಿ ಗಾರೆ, ಸುಣ್ಣ ಮತ್ತು ಕಲ್ಲು ಬಳಸಿ ಭದ್ರಾ ಡ್ಯಾಂ ನಿರ್ಮಿಸಲಾಗಿದೆ. ಸಹಜವಾಗಿ ಡ್ಯಾಂ ತಳಭಾಗದಲ್ಲಿ ನೀರು ಸೋರಿಕೆ ಆಗುತ್ತಿದೆ. ಸೋರಿಕೆ ತಡೆಗಟ್ಟಲು ಮೊದಲು ಕ್ರಮ ಕೈಗೊಳ್ಳಬೇಕು. ಹಳೆಯದಾದ ಡ್ಯಾಂ ಗೇಟ್‌ಗಳನ್ನು ಸರಿಪಡಿಸಿ, ಗಟ್ಟಿಗೊಳಿಸುವ ಕೆಲಸ ಆಗಬೇಕು. ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿರುವ ಡ್ಯಾಂ ನಿರ್ವಹಣೆಯ ಕ್ರೇನ್‌ಗಳನ್ನು ರೀ ಕಂಡೀಷನ್ ಮಾಡಿಸಬೇಕು ಎಂದು ಆಗ್ರಹಿಸಿದರು.ಡ್ಯಾಂನ ಸೇತುವೆ ಬಳಿ ಆಗಾಗ ಕುಸಿಯುವ ತಡೆಗೋಡೆಗಳನ್ನು ಸರಿಪಡಿಸಿ, ಭದ್ರಗೊಳಿಸಬೇಕು. ಡ್ಯಾಂ ಸುತ್ತಲೂ ಬೇಲಿ ನಿರ್ಮಿಸಿ ಸುಭದ್ರತೆ ಕಾಪಾಡಬೇಕು. ಡ್ಯಾಂ ಸುರಕ್ಷತೆಯ ಮೇಲ್ವಿಚಾರಣೆ ನಡೆಸುವ ಕೇಂದ್ರದ ಜಲ ಆಯೋಗ ಡ್ಯಾಂನ ಪುನರುತ್ಥಾನ ಮತ್ತು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಡ್ಯಾಂ ಸುರಕ್ಷತೆಗೆ ₹100 ಕೋಟಿಗಳ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ 100 ಕೋಟಿ ಅನುದಾನ ಬಿಡುಗಡೆ ಮಾಡಲಾರದೇ, ಕರ್ನಾಟಕ ನೀರಾವರಿ ನಿಗಮದ ಮೂಲಕ ಕೇಂದ್ರ ಸರ್ಕಾರಕ್ಕೆ ಮೋರೆ ಹೋಗಿ ಸುಮ್ಮನೆ ಕೈಕಟ್ಟಿ ಕುಳಿತಿದೆ. ಇದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಡ್ಯಾಂನ ಉಳಿವಿಗಾಗಿ ₹100 ಕೋಟಿ ಬಿಡುಗಡೆ ಮಾಡಲಾರದಷ್ಟು ಬಡತನ ರಾಜ್ಯ ಸರ್ಕಾರಕ್ಕೆ ಬಂದಿಲ್ಲ. ಆದ್ದರಿಂದ ₹100 ಕೋಟಿ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿ, ಡ್ಯಾಂ ಸುರಕ್ಷತೆ ಕಾಪಾಡಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಪ್ರತಿಭಟನೆ ನಡೆಯಲಿದೆ. ಅಚ್ಚುಕಟ್ಟು ರೈತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ನೀರು ಬಳಕೆಗಾರರ ಸಂಘದ ತೇಜಸ್ವಿ ವಿ. ಪಟೇಲ್, ಬೆಳವನೂರು ಬಿ.ನಾಗೇಶ್ವರ ರಾವ್, ಲೋಕಿಕೆರೆ ನಾಗರಾಜ , ಬಿ.ಎಂ. ಸತೀಶ ಕೊಳೇನಹಳ್ಳಿ, ಧನಂಜಯ ಕಡ್ಲೇಬಾಳು, ಚಂದ್ರಶೇಖರ ಪೂಜಾರ, ಗೋಪನಾಳ ಕರಿಬಸಪ್ಪ, ಶ್ಶಾಗಲೆ ಜಗದೀಶಗೌಡ, ಗೋಣಿವಾಡ ಮಂಜುನಾಥ, ಪಿ.ಎ.ನಾಗರಾಜಪ್ಪ, ವಡ್ನಾಳ ಸಿದ್ದೇಶ, ಬಾತಿ ಶಿವಕುಮಾರ, ಬಲ್ಲೂರು ಬಸವರಾಜ ಇತರರು ಇದ್ದರು.
- - - -21ಕೆಡಿವಿಜಿ8:ದಾವಣಗೆರೆಯಲ್ಲಿ ಜಿಲ್ಲಾ ರೈತ ಒಕ್ಕೂಟ ಸಭೆಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಮಾತನಾಡಿದರು. -21ಕೆಡಿವಿಜಿ9:
ದಾವಣಗೆರೆಯಲ್ಲಿ ಜಿಲ್ಲಾ ರೈತ ಒಕ್ಕೂಟದ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.