ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕ: ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ

| Published : Mar 26 2025, 01:31 AM IST

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕ: ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದರೂ ಚರಂಡಿ ನಿರ್ಮಾಣ ಮಾಡುವ ಕೆಲಸವಾಗುತ್ತಿಲ್ಲ. ಚರಂಡಿ ನಿರ್ಮಾಣವಾಗದಿದ್ದರೆ ಮಳೆ ನೀರು ಮತ್ತು ಯುಜಿಡಿಯ ಮಲಿನ ನೀರು ಮನೆ ಬಾಗಿಲುಗಳಿಗೆ ಹರಿಯುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬನ್ನಘಟ್ಟದಿಂದ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರುವರೆಗಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದೆ. ರಸ್ತೆ ಇಕ್ಕೆಲಗಳ ನಿವಾಸಿಗಳು ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿ ಸ್ಥಳೀಯರು ಮಂಗಳವಾರ ಪ್ರತಿಭಟಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

ಪಟ್ಟಣದ ಡಾ,ರಾಜ್‌ಕುಮಾರ್ ವೃತ್ತದಿಂದ ಬನ್ನಾರಿ ಅಮ್ಮ ದೇವಸ್ಥಾನದವರೆಗೆ ಚರಂಡಿ ನಿರ್ಮಾಣವಾಗಿಲ್ಲ. ಹೀಗಾಗಿ ಈ ಭಾಗದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ರಸ್ತೆ ನಿರ್ಮಾಣಕ್ಕೂ ಮೊದಲು ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರಶ್ನೆ ಮಾಡಿದ ಸ್ಥಳೀಯರಿಗೆ ಗುತ್ತಿಗೆದಾರರು ಕಡೆಯವರು ಉದ್ದಟತನದಿಂದ ವರ್ತಿಸುತ್ತಿದ್ದಾರೆ. ಚರಂಡಿ ನಿರ್ಮಾಣ ಮಾಡದಿದ್ದರೆ ರಸ್ತೆ ಕಾಮಗಾರಿ ಕೆಲಸ ಮಾಡಲು ಅವಕಾಶ ಕೊಡಲ್ಲ. ಚರಂಡಿ ಸಮಸ್ಯೆಯಿಂದ ಈಗಾಗಲೇ ಸಾಕಷ್ಟು ತೊಂದರೆ ಎದುರಿಸುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಮೊದಲು ರಸ್ತೆ ಎರಡು ಬದಿಯಲ್ಲಿ ಚರಂಡಿ ನಿರ್ಮಿಸಿದ ಬಳಿಕ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.

ಪಿಎಸಿಎಸ್ ಮಾಜಿ ಅಧ್ಯಕ್ಷ ಬಲರಾಮು ಮಾತನಾಡಿ, ಈ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ಕೊಳಚೆ ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣಗೊಳ್ಳುತ್ತಿದೆ. ಇದೇ ನೀರನ್ನು ನಾವು ಪ್ರತಿನಿತ್ಯ ಬಳಸುವಂತಾಗಿದೆ ಎಂದು ಕಿಡಿಕಾರಿದರು.

ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದರೂ ಚರಂಡಿ ನಿರ್ಮಾಣ ಮಾಡುವ ಕೆಲಸವಾಗುತ್ತಿಲ್ಲ. ಚರಂಡಿ ನಿರ್ಮಾಣವಾಗದಿದ್ದರೆ ಮಳೆ ನೀರು ಮತ್ತು ಯುಜಿಡಿಯ ಮಲಿನ ನೀರು ಮನೆ ಬಾಗಿಲುಗಳಿಗೆ ಹರಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವ ಆಧಾರದ ಮೇಲೆ ಗುತ್ತಿಗೆದಾರರು ಮತ್ತು ಪ್ರಾಧಿಕಾರದ ಅಧಿಕಾರಿಗಳು ಈ ರೀತಿಯ ಅವೈಜ್ಞಾನಿಕ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ ಚರಂಡಿ ನಿರ್ಮಾಣ ಮಾಡದಿದ್ದರೆ ಕಾಮಗಾರಿ ನಡೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಸಿದರು.

ರೈತಸಂಘ ಮುಖಂಡರ ಸಂತೋಷ್ ಮಾತನಾಡಿ, ಡಾ.ರಾಜ್‌ಕುಮಾರ್ ವೃತ್ತದಿಂದ ಪಟ್ಟಣ ವ್ಯಾಪ್ತಿಯಲ್ಲಿ ಹಾದು ಹೋಗುವ ರಸ್ತೆಯ ಅಗಲ ಒಂದೇ ಸಮನಾಗಿರಬೇಕು. ಆದರೆ, ಗುತ್ತಿಗೆದಾರುರ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಮಗಾರಿ ಅಂದಾಜು ಪಟ್ಟಿ ಮತ್ತು ಇತರೆ ವಿಚಾರಗಳ ಬಗ್ಗೆ ಕೇಳಿದರೆ ಅಧಿಕಾರಿಗಳು ನೀಡುತ್ತಿಲ್ಲ. ರಸ್ತೆ ಬದಿ ಪಾದಚಾರಿ ಮಾರ್ಗದ ಮೇಲ್ಮೈಯನ್ನು ಜೆಸಿಬಿಯಿಂದ ಕೆರೆದು ಎರಡ್ಮೂರು ಇಂಚಿಗೆ ಮೆಟ್‌ಲಿಂಗ್ ಮಾಡಲಾಗುತ್ತಿದೆ. ಇದರಿಂದ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಕಾಮಗಾರಿ ಅಂದಾಜು ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ ಬಳಿಕ ಕೆಲಸ ಮಾಡಬೇಕು. ಇಲ್ಲವಾದರೆ ಕಾಮಗಾರಿ ತಡೆಯಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಚಿಕ್ಕಾಡೆ ರಾಜಪ್ಪ, ಸಂತೋಷ್, ಮೋಹನ, ನಾಗರಾಜೇಗೌಡ ಇತರರು ಇದ್ದರು.