ಹೆದ್ದಾರಿಯನ್ನು ಎತ್ತರಗೊಳಿಸಲು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ

| Published : Aug 03 2024, 12:31 AM IST

ಹೆದ್ದಾರಿಯನ್ನು ಎತ್ತರಗೊಳಿಸಲು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ತೋಪಿನ ಬೀದಿಯಲ್ಲಿ ನೀರು ತುಂಬಿಕೊಂಡು ಉಂಟಾಗುವ ಸಮಸ್ಯೆಗಳನ್ನು ಸ್ವತಃ ವೀಕ್ಷಣೆ

ಕನ್ನಡಪ್ರಭ ವಾರ್ತೆ ನಂಜನಗೂಡು

ಕಪಿಲಾ ನದಿಯ ಪ್ರವಾಹದಿಂದ ಮಲ್ಲನಮೂಲೆ ಮಠದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ಹೆದ್ದಾರಿಯನ್ನು ಎತ್ತರಗೊಳಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಕಪಿಲಾ ನದಿಯ ಪ್ರವಾಹದಿಂದ ನೀರು ತುಂಬಿಕೊಂಡಿರುವ ತಗ್ಗು ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪಟ್ಟಣದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ನಿರಾಶ್ರಿತರ ಬಳಿ ಚರ್ಚೆ ನಡೆಸಿ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.

ತಾಲೂಕಿನ ಮಲ್ಲನಮೂಲೆ ಮಠದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಳ್ಳುವುದರಿಂದ ಕೇರಳ, ತಮಿಳುನಾಡು, ಚಾಮರಾನಗರ ಜಿಲ್ಲೆ, ನಂಜನಗೂಡಿಗೆ ರಸ್ತೆ ಸಂಪರ್ಕ ಕಡಿತಗೊಳ್ಳುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಸ್ಥಳಪರಿಶೀಲನೆ ನಡೆಸಿದ್ದೇನೆ. ಹೆದ್ದಾರಿಯಲ್ಲಿ ನೀರು ನಿಲ್ಲುವುದನ್ನು ತಪ್ಪಿಸುವ ಸಲುವಾಗಿ ಹೆದ್ದಾರಿಯನ್ನು ಎತ್ತರಗೊಳಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಲಿದ್ದೇನೆ. ಅಲ್ಲದೆ ಕಪಿಲಾ ನದಿಯ ನೀರು ಚರಂಡಿ ಮೂಲಕ ತಗ್ಗು ಪ್ರದೇಶಗಳಿಗೆ ವಾಪಸ್ಸು ಹರಿಯುವುದನ್ನು ತಪ್ಪಿಸಲು ಸಹ ಗೇಟ್‌ ವಾಲ್ ನಿರ್ಮಿಸಿ ಸಮಸ್ಯೆ ಪರಿಹರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಪಿಲಾ ನದಿಯ ಪ್ರವಾಹದಿಂದ ಉಂಟಾಗುವ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಕ್ರಮವಹಿಸುತ್ತೇನೆ ಎಂದರು.

ಇದೇ ವೇಳೆ ಮುಡಿಕಟ್ಟೆ ಸಮೀಪದಲ್ಲಿ ನದಿ ನೀರು ಚರಂಡಿ ಮೂಲಕ ನೀರು ವಾಪಸ್ಸಾಗುವುದನ್ನು ಪರಿಶೀಲಿಸಿದರು. ತೋಪಿನ ಬೀದಿಯಲ್ಲಿ ನೀರು ತುಂಬಿಕೊಂಡು ಉಂಟಾಗುವ ಸಮಸ್ಯೆಗಳನ್ನು ಸ್ವತಃ ವೀಕ್ಷಣೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಆಶ್ರಯ ಪಡೆದಿರುವ ನಿವಾಸಿಗಳ ಸಮಸ್ಯೆ ಆಲಿಸಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ದರ್ಶನ್‌ ಧ್ರುವನಾರಾಯಣ ಮಾತನಾಡಿ, ಕಪಿಲಾ ನದಿಯ ಪ್ರವಾಹದ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಕೃತಿಕ ಹವಾಮಾನದ ವೈಪರಿತ್ಯದ ಜೊತೆಗೆ ನಾವು ಹೊಂದಿಕೊಂಡು ಹೋಗ ಬೇಕಿರುವುದರಿಂದ ಪ್ರವಾಹ ಸಂಧರ್ಭದಲ್ಲಿ ಆಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮವಹಿಸಲಾಗುವುದು ಎಂದರು.

ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ನಗರಸಭಾ ಆಯುಕ್ತ ನಂಜುಂಡಸ್ವಾಮಿ, ನಗರಸಭಾ ಎಇಇ ಮಹೇಶ್, ಶಿರಸ್ತೇದಾರ್ ಹರೀಶ್, ಸರ್ವೇಶ್, ಗ್ರಾಮ ಲೆಕ್ಕಾಧಿಕಾರಿ ವರುಣ್, ಎಇ ಕುಮಾರ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವಾಲ್ಮೀಕಿ ನಿಗಮ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್, ಜಿಪಂ ಮಾಜಿ ಸದಸ್ಯ ಕೆ. ಮಾರುತಿ, ಕೆಪಿಸಿಸಿ ಸದಸ್ಯ ಅಕ್ಬರ್ ಅಲಿಂ, ನಗರಸಭಾ ಸದಸ್ಯರಾದ ಎಸ್.ಪಿ. ಮಹೇಶ್, ಗಂಗಾಧರ್, ಗಾಯತ್ರಿ, ಯೋಗೀಶ್, ಸಿದ್ದಿಖ್, ಮುಖಂಡರಾದ ಎನ್.ಎಂ. ಮಂಜುನಾಥ್, ನಾಗರಾಜು ಇದ್ದರು.

-----------------