ರಾಷ್ಟ್ರೀಯ ಹೆದ್ದಾರಿ ಜಲಾವೃತ

| Published : Jul 17 2024, 12:50 AM IST

ಸಾರಾಂಶ

ಕಿನ್ನರ ಗ್ರಾಮದ ನಿರಾಕಾರ ದೇವಾಲಯದ ಹತ್ತಿರ ಗುಡ್ಡ ಕುಸಿದು ಹೆಂಚಿನ ಮನೆ ಪೂರ್ತಿಯಾಗಿ ನೆಲಸಮವಾಗಿದೆ. ಮನೆಯಲ್ಲಿ ವಾಸವಿದ್ದ ತಿಕರ್ಸ್ ಗುರುವ ಒಳಗೆ ಸಿಲುಕಿಕೊಂಡಿದ್ದು, ೪ರಿಂದ ೫ ತಾಸು ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಬದುಕುಳಿಯಲಿಲ್ಲ.

ಕಾರವಾರ: ತಾಲೂಕಿನಾದ್ಯಂತ ಮಂಗಳವಾರ ಭಾರಿ ಮಳೆಯಾಗಿದ್ದು, ಕಿನ್ನರ ಗ್ರಾಮದಲ್ಲಿ ಮನೆ ಬಳಿಯ ಗುಡ್ಡ ಕುಸಿದು ಒಬ್ಬರು ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ ೬೬ ಸಂಪೂರ್ಣ ಜಲಾವೃತವಾಗಿದೆ.

ಕಿನ್ನರ ಗ್ರಾಮದ ನಿರಾಕಾರ ದೇವಾಲಯದ ಹತ್ತಿರ ಗುಡ್ಡ ಕುಸಿದು ಹೆಂಚಿನ ಮನೆ ಪೂರ್ತಿಯಾಗಿ ನೆಲಸಮವಾಗಿದೆ. ಮನೆಯಲ್ಲಿ ವಾಸವಿದ್ದ ತಿಕರ್ಸ್ ಗುರುವ ಒಳಗೆ ಸಿಲುಕಿಕೊಂಡಿದ್ದು, ೪ರಿಂದ ೫ ತಾಸು ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಬದುಕುಳಿಯಲಿಲ್ಲ.

ತಾಲೂಕಿನ ಮಂದ್ರಾಳಿಯಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕಿ ರೂಪಾಲಿ ನಾಯ್ಕ ಅಧಿಕಾರಿಗಳೊಂದಿಗೆ ತೆರಳಿ ಭೇಟಿ ನೀಡಿದರು. ತಡೆಗೋಡ ನಿರ್ಮಿಸಿದ್ದರೂ ಗುಡ್ಡ ಕುಸಿತವಾಗಿದ್ದು, ತಡೆಗೋಡೆ ಕಾಮಗಾರಿಯಲ್ಲಿ ರಾಜಕೀಯ ಮಾಡಿದ್ದರಿಂದ ಅವಘಡ ಎಂದು ಸ್ಥಳೀಯರು ದೂರಿದರು. ಅಭಿವೃದ್ಧಿ ಕಾಮಗಾರಿಯಲ್ಲಿ ರಾಜಕೀಯ ಮಾಡುವುದಕ್ಕೆ ಸಂಸದರು ಗರಂ ಆದರು. ಮಂದ್ರಾಳಿ ಗುಡ್ಡ ಕುಸಿತದಿಂದ ಎರಡು ಮನೆಗಳಿಗೆ ಹಾನಿಯಾಗಿದೆ. ಮಂದ್ರಾಳಿ ಕೈಗಾ ಸಂಪರ್ಕಿಸುವ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಕೂಡಲೇ ಹೆಚ್ಚಿನ ವಾಹನಗಳನ್ನು ಬಳಸಿ ಗುಡ್ಡ ತೆರವು ಮಾಡಲು ಸೂಚನೆ ನೀಡಿದರು.

ನಗರದ ಹಬ್ಬುವಾಡದಲ್ಲಿ ಇರುವ ಸಾರಿಗೆ ಸಂಸ್ಥೆ ಬಸ್ ಡಿಪೋ ಜಲಾವೃತವಾಗಿದ್ದು, ಬಸ್‌ಗಳನ್ನು ಹೊರತೆಗೆಯಲು ಚಾಲಕರು ಪರದಾಡುವಂತಾಯಿತು. ಹಬ್ಬುವಾಡ ರಸ್ತೆಯ ಮೇಲೆಲ್ಲಾ ನೀರು ತುಂಬಿದ ಕಾರಣ ವಾಹನ, ಪಾದಚಾರಿಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ತಾಲೂಕಿನ ಚೆಂಡಿಯಾ, ಈಡೂರು, ಅರಗಾದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಸೋಮವಾರ ರಾತ್ರಿಯಿಂದಲೂ ನೀರು ನಿಂತು ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಮಂಗಳವಾರವೂ ಮಳೆ ಮುಂದುವರಿದ ಕಾರಣ ಈ ಭಾಗದ ಸುತ್ತಮುತ್ತಲಿನ ಅಂಗಡಿ ಮುಂಗಟ್ಟು, ಮನೆ, ದೇವಸ್ಥಾನಗಳೂ ಸಂಪೂರ್ಣವಾಗಿ ಜಲಾವೃತವಾಗಿತ್ತು. ಹೊಸಾಳಿ, ಕೊಳಗಿ ಕೂಡಾ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಮನೆಗಳನ್ನು ಆವರಿಸುವ ಆತಂಕ ಎದುರಾಗಿದೆ.