ನಾಳೆ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ: ನ್ಯಾ. ಮಹಾವೀರ

| Published : Nov 08 2025, 01:30 AM IST

ನಾಳೆ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ: ನ್ಯಾ. ಮಹಾವೀರ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಾದ್ಯಂತ ನವೆಂಬರ್ 9ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಸಮಾನ ನ್ಯಾಯ, ಕಾನೂನಿನ ಅರಿವು- ನೆರವು ಒದಗಿಸುವುದು ಇದರ ಪ್ರಮುಖ ಉದ್ದೇಶ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಹೇಳಿದ್ದಾರೆ.

- ಪ್ರತಿಯೊಬ್ಬರಿಗೂ ಸಮಾನ ನ್ಯಾಯ, ಉಚಿತ ಕಾನೂನು ಅರಿವು-ನೆರವು ಉದ್ದೇಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದಾದ್ಯಂತ ನವೆಂಬರ್ 9ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಸಮಾನ ನ್ಯಾಯ, ಕಾನೂನಿನ ಅರಿವು- ನೆರವು ಒದಗಿಸುವುದು ಇದರ ಪ್ರಮುಖ ಉದ್ದೇಶ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಹೇಳಿದರು.

ನಗರದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಅವರು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಮಾಹಿತಿ ನೀಡಿದರು. ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಬಡವರು, ಮಹಿಳೆಯರು, ಮಕ್ಕಳು, ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ, ದೌರ್ಜನ್ಯದಿಂದ ನೊಂದವರಿಗೆ, ಅಂಗವಿಕಲರಿಗೆ, ವಿಶೇಷವಾಗಿ ಕಾರಾಗೃಹದ ಕೈದಿಗಳಿಗೂ ಉಚಿತ ಕಾನೂನಿನ ನೆರವು ನೀಡಲಾಗುತ್ತದೆ. ಹಾಗೆಯೇ ಜನಸಾಮಾನ್ಯರಿಗೆ ದಿನನಿತ್ಯದ ಅವಶ್ಯಕತೆಗೆ ಬೇಕಾದ ಕಾನೂನಿನ ಅರಿವು, ಜಾಗೃತಿ ಶಿಬಿರದ ಮೂಲಕ ಕಾನೂನು ನೆರವು ನೀಡಲಾಗುವುದು ಎಂದರು.

ಒಂದು ವಾರದಿಂದ ವಿವಿಧ ಶಾಲಾ-ಕಾಲೇಜು, ಹಾಸ್ಟೆಲ್‌ಗಳಲ್ಲಿ ಕಾನೂನು ಅರಿವು ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಾಗಿ ಕಾನೂನು ಸೇವಾ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ 25 ಪ್ಯಾನಲ್ ವಕೀಲರು, 37 ಮಧ್ಯಸ್ಥಗಾರ, 100 ಪ್ಯಾನಲ್ ಸ್ವಯಂ ಸೇವಕರು, 08 ಕಾನೂನು ನೆರವು ಅಭಿರಕ್ಷಕರನ್ನು ನೇಮಿಸಲಾಗಿದೆ. ಹರಿಹರ, ಹೊನ್ನಾಳಿ, ಜಗಳೂರು ಹಾಗೂ ಚನ್ನಗಿರಿಯಲ್ಲಿ ತಾಲೂಕುವಾರು ತಲಾ 25 ಕಾನೂನು ಸ್ವಯಂ ಸೇವಕ ಮತ್ತು 10 ಪ್ಯಾನಲ್ ವಕೀಲರು ಸೇರಿ ಒಟ್ಟು 204 ಕಾನೂನು ಅರಿವು, ನೆರವು ನೀಡಲು ನೇಮಿಸಲಾಗಿದೆ. ಅಲ್ಲದೇ, ಎಲ್ಲ ನ್ಯಾಯಾಲಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಒಬ್ಬ ಉಚಿತ ಕಾನೂನು ಸಲಹೆಗಾರರನ್ನು ನೇಮಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ವಿವಿಧೆಡೆ ಅರಿವು ಕಾರ್ಯಕ್ರಮ:

ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಶಾಲಾ, ಕಾಲೇಜು, ಹಾಸ್ಟೆಲ್, ಗ್ರಾಮ ಪಂಚಾಯಿತಿ ಹಾಗೂ ಹಾಸ್ಪಿಟಲ್‌ಗಳು ಸೇರಿ ಒಟ್ಟು 34 ಸ್ಥಳಗಳಲ್ಲಿ ಕಾನೂನು ಅರಿವು ಕುರಿತು ಜಾಗೃತಿ ಕಾರ್ಯಾಗಾರ ನಡೆಸಲಾಗಿದೆ. ನ.11ರಂದು ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ಆರ್.ಎಲ್. ಕಾನೂನು ಕಾಲೇಜು ವತಿಯಿಂದ ಈ ಕುರಿತು ಜಾಗೃತಿ ಮೂಡಿಸಲು ಕಿರು ಬೀದಿನಾಟಕ ಹಮ್ಮಿಕೊಳ್ಳಲಾಗಿದೆ ಎಂದರು.

ನ.15ರಂದು ಆರ್‌ಎಲ್ ಕಾನೂನು ವಿದ್ಯಾಲಯದಲ್ಲಿ ಜಾಗೃತಿ ಕಾರ್ಯಾಗಾರ ಆಯೋಜಿಸಲಾಗಿದೆ. ಯಾವುದೇ ವ್ಯಕ್ತಿ ಕಾನೂನು ಸಂಘರ್ಷದಲ್ಲಿ ಸಿಲುಕಿಕೊಂಡವರು ಅಥವಾ ಕಾನೂನು ಬಗ್ಗೆ ಅರಿವಿಲ್ಲದೇ ಇರುವವರು ಕಾನೂನು ಸೇವೆಗಳ ಪ್ರಾಧಿಕಾರದ ಉಚಿತ ಸಹಾಯವಾಣಿ ಸಂಖ್ಯೆ 15100 ಇಲ್ಲಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖ್ಯ ಕಾನೂನು ಅಭಿರಕ್ಷಕ ಕೆ.ಕೆಂಚಪ್ಪ ಇದ್ದರು.

- - -

-7ಕೆಡಿವಿಜಿ38: ನ್ಯಾ. ಮಹಾವೀರ ಮ. ಕರೆಣ್ಣವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆ.ಕೆಂಚಪ್ಪ ಇದ್ದರು.