ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ 1987 ಜಾರಿಗೆ ಬಂದಿದ್ದು, ಇದರ ಸವಿನೆನಪಿಗಾಗಿ ಪ್ರತಿ ವರ್ಷ ನ.9ರಂದು ಕಾನೂನು ಸೇವೆಗಳ ದಿನವನ್ನಾಗಿ ದೇಶಾದ್ಯಾಂತ ಆಚರಿಸಲಾಗುತ್ತಿದೆ ಎಂದು ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಮಂಜುನಾಥ ಬಣಕಾರ ಹೇಳಿದ್ದಾರೆ.

- ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯ, ಸೇವೆ ಬಗ್ಗೆ ಜಾಗೃತಿ: ನ್ಯಾ.ಮಂಜುನಾಥ ಬಣಕಾರ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ 1987 ಜಾರಿಗೆ ಬಂದಿದ್ದು, ಇದರ ಸವಿನೆನಪಿಗಾಗಿ ಪ್ರತಿ ವರ್ಷ ನ.9ರಂದು ಕಾನೂನು ಸೇವೆಗಳ ದಿನವನ್ನಾಗಿ ದೇಶಾದ್ಯಾಂತ ಆಚರಿಸಲಾಗುತ್ತಿದೆ ಎಂದು ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಮಂಜುನಾಥ ಬಣಕಾರ ಹೇಳಿದರು.

ತಾಲೂಕಿನಲ್ಲಿ ನ್ಯಾಯಾಂಗ ಇಲಾಖೆ ಸೇರಿದಂತೆ ಶಿಕ್ಷಣ, ಮಕ್ಕಳ ಮತ್ತು ಮಹಿಳಾ ಇಲಾಖೆ,ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ದಿ ಹಾಗೂ ಕಂದಾಯ ಇಲಾಖೆಗಳ ಸಹಯೋಗದಲ್ಲಿ ತಾಲೂಕಿನಾದ್ಯಂತ ಅತಿ ಹಿಂದುಳಿದ ಪ್ರದೇಶಗಳು, ಹಾಗೂ ಶಾಲಾ ಕಾಲೇಜುಗಳಲ್ಲಿ ಕಾನೂನು ಅರಿವು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಪ್ತಾಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಗ್ಗೆ ಪೂರ್ವಭಾವಿಯಾಗಿ ಅಧಿಕಾರಿಗಳೊಂದಿಗೆ ಚರ್ಚಿಸಲು ಪೂರ್ವಭಾವಿ ಸಭೆ ಕರೆಯಲಾಗಿದ್ದು, ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ, ಕಾರ್ಯಗಳು, ಮತ್ತು ಸೇವೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಈ ಕಾರ್ಯಕ್ಕೆ ಎಲ್ಲರೂ ಕೂಡ ಕೈ ಜೊಡಿಸಿ ಕೆಲಸ ಮಾಡಬೇಕಾಗಿದೆ. ಜೊತೆಗೆ ಕಾರ್ಯಕ್ರಮ ನಡೆಸಿದ ಬಗ್ಗೆ ತಮ್ಮ ನ್ಯಾಯಾಂಗ ಇಲಾಖೆಗೆ ವರದಿಯನ್ನು ಕೂಡ ಕೊಡಬೇಕಾಗುತ್ತೆದೆ. ವಿಶೇಷವಾಗಿ ಕಾನೂನು ಜಾಗೃತಿ ಶಿಬಿರಗಳು, ತಳಮಟ್ಟದಲ್ಲಿ ಸಮಾಜದ ಹಿಂದುಳಿದ ಮತ್ತು ದುರ್ಬಲ ವರ್ಗದವರನ್ನು ದೃಷ್ಠಿಯಲ್ಲಿಟ್ಟುಕೊಂಡು ಕಾನೂನು ಜಾಗೃತಿ ಶಿಬಿರಗಳು ಹಮ್ಮಿಕೊಳ್ಳುವುದಾಗಿದೆ ಎಂದು ಸಭೆಯಲ್ಲಿ ಹೇಳಿದರು.

ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಬೇಕಾಗಿದೆ. ಶಾಲೆಗಳು ಮತ್ತು ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಮಾಹಿತಿ ಹಾಗೂ ಕಾನೂನು ನೆರವಿನ ಬಗ್ಗೆ ಜಾಗೃತಿ ಸಾಮಗ್ರಿಗಳನ್ನು ವಿತರಿಸುವುದು. ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಥೀಮ್ ಹಾಡನ್ನು ಕಡ್ಡಾಯವಾಗಿ ಪ್ಲೇ ಮಾಡಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಕಾನೂನು ಸೇವೆಗ‍ಳ ಪ್ರಾಧಿಕಾರದಡಿ ಉಚಿತ ಕಾನೂನು ನೆರವಿನ ಲಭ್ಯತೆ ಮತ್ತು ಕಾನೂನು ಸೇವಾ ಪ್ರಾಧಿಕಾರಗಳು ಜಾರಿಗೆ ತರುತ್ತಿರುವ ವಿವಿಧ ಸೇವೆಗಳು ಮತ್ತು ಯೋಜನೆಗಳ ಬಗ್ಗೆ ವ್ಯಾಪಕ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡಬೇಕಾಗಿದೆ ಎಂದರು.

ಕಾನೂನು ಸಾಕ್ಷರತೆ, ಮತ್ತು ಜಾಗೃತಿ ಕಾರ್ಯಕ್ರಮಗಳು ಗ್ರಾಮಾಂತರ ಪ್ರದೇಶಗಳು ಹಾಗೂ ಶಾಲಾ ಕಾಲೇಜುಗಳ ಹಂತಗಳಲ್ಲಿ ಒಂದು ವಾರಗಳ ಕಾಲ ನಡೆಸಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಮಗ್ರ ವರದಿಯನ್ನು ತಮಗೆ ಸಲ್ಲಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಗುಡ್ಡಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ಎಚ್.ಸುನಿಲ್ ಕುಮಾರ್, ಶಿಕ್ಷಣ ಇಲಾಖೆಯ ಮುದ್ದನಗೌಡ, ಸಮಾಜ ಕಲ್ಯಾಣಾಧಿಕಾರಿ ಉಮಾ ಎಚ್.ಎಲ್. ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ತಿಪ್ಪೇಶಪ್ಪ, ಸಿಡಿಪಿಒ ಇಲಾಖೆ ಅಧಿಕಾರಿಗಳು ಇತರರು ಇದ್ದರು.

- - -

-5ಎಚ್‌.ಎಲ್.ಐ1:

ನ್ಯಾಯಾಧೀಶ ಮಂಜುನಾಥ ಬಣಕಾರ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.