ಎಸ್‌ಡಿಎಂನಲ್ಲಿ ಭಾರತೀಯ ಜ್ಞಾನ ಪರಂಪರೆ ಕುರಿತು ವಿಚಾರ ಸಂಕಿರಣ

| Published : Feb 28 2024, 02:32 AM IST

ಸಾರಾಂಶ

ಉಜಿರೆಯ ಖ್ಯಾತ ಜ್ಯೋತಿಷಿ ಡಾ. ಯತೀಶ ಪೊದುವಾಳ್ ಅವರು ಜ್ಯೋತಿಷ್ಯ ಹಾಗೂ ಅದು ವಿಜ್ಞಾನಕ್ಕೆ ಹೇಗೆ ಸಂಬಂಧಿಸಿದೆ,ವೈಜ್ಞಾನಿಕವಾಗಿ ಹೇಗೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ವಿವರಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಸಂಸ್ಕೃತ ವಿಭಾಗದ ಜಂಟಿ ಸಂಯೋಜನೆಯಲ್ಲಿ ಐಐಟಿ ಖರಗಪುರದ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಇಂಡಿಯನ್ ನಾಲೆಜ್ ಸಿಸ್ಟಂ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಭೌತ ಶಾಸ್ತ್ರ ಶಿಕ್ಷಕರ ಸಂಘದ ಸಹಯೋಗದೊಂದಿಗೆ ‘ಭಾರತೀಯ ಜ್ಞಾನ ಪರಂಪರೆ’ ವಿಚಾರದ ಕುರಿತು ಸೋಮವಾರ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.

ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮಾತನಾಡಿ, ಭಾರತೀಯ ಪುರಾತನ ಜ್ಞಾನ ಪದ್ಧತಿ ಇಂದಿನ ಎಲ್ಲ ಆಧುನಿಕ ವಿಜ್ಞಾನ ಪದ್ಧತಿಗೆ ಮೂಲ ತಳಹದಿಯಾಗಿದೆ. ಇಂತಹ ವಿಚಾರ ಸಂಕಿರಣಗಳಿಂದ ಇಂದಿನ ಯುವ ಜನತೆಗೆ ವಿಜ್ಞಾನಕ್ಕೆ ನಮ್ಮ ದೇಶದ ಕೊಡುಗೆಗಳ ಕುರಿತು ಹೆಚ್ಚಿನ ಅನುಭವ ಪಡೆಯಲು ಸಹಕಾರಿಯಾಗುವುದು. ನಮ್ಮ ದೇಶದ ಅಪಾರ ಜ್ಞಾನ ಸಂಪತ್ತಿನ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ್ ಹೆಗ್ಡೆ ಮಾತನಾಡಿ, ಅದೆಷ್ಟೋ ವರುಷಗಳ ಹಿಂದೆಯೇ ನಮ್ಮ ದೇಶ ವೈಜ್ಞಾನಿಕವಾಗಿ ಅದೆಷ್ಟು ವಿಚಾರವಂತವಾಗಿತ್ತು ಎಂಬ ಅರಿವಾಗುತ್ತದೆ. ಇಂತ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದರಿಂದ ವಿಚಾರ ಸಂಕಿರಣಗಳ ಮೂಲ ಆಶಯ ಸಾರ್ಥಕವಾಗುತ್ತದೆ ಎಂದರು.

ವಿಚಾರ ಸಂಕಿರಣದಲ್ಲಿ ಐಐಟಿ ಖರಗಪುರದ ಡಾ. ಮಹೇಶ್ ಕೆ., ಮುಂಬೈನ ಡಾ.ಆನಂದ ಕೆ. ವಿಚಾರ ಮಂಡಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಹಾಗೂ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಎಸ್. ಎನ್. ಕಾಕತ್ಕರ್ ಸ್ವಾಗತಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಭಟ್ ವಂದಿಸಿದರು. ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ರಾಘವೇಂದ್ರ ಎಸ್. ಹಾಗೂ ಪದವಿ ಕಾಲೇಜಿನ ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ನಮ್ರತಾ ಜೈನ್‌ ಇದ್ದರು. ಗಣೇಶ್ ನಾಯಕ್ ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಚಾರ ಸಂಕಿರಣದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಯಾಗಿ ಉಜಿರೆಯ ಖ್ಯಾತ ಜ್ಯೋತಿಷಿ ಡಾ. ಯತೀಶ ಪೊದುವಾಳ್ ಅವರು ಜ್ಯೋತಿಷ್ಯ ಹಾಗೂ ಅದು ವಿಜ್ಞಾನಕ್ಕೆ ಹೇಗೆ ಸಂಬಂಧಿಸಿದೆ,ವೈಜ್ಞಾನಿಕವಾಗಿ ಹೇಗೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಬಿ ಎ. ಕುಮಾರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ್ ಭಟ್ ಸ್ವಾಗತಿಸಿದರು. ಗಣಿತ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಗಣೇಶ ನಾಯಕ್ ವಂದಿಸಿದರು.