ಬರುವ ಡಿ.16ರಿಂದ 20ರ ವರೆಗೆ ಬ್ಯಾಡಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 19 ವರ್ಷದೊಳಗಿನ ರಾಷ್ಟ್ರಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನು ಅದ್ಧೂರಿಯಾಗಿ ಆಯೋಜಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಬ್ಯಾಡಗಿ: ಬರುವ ಡಿ.16ರಿಂದ 20ರ ವರೆಗೆ ಬ್ಯಾಡಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 19 ವರ್ಷದೊಳಗಿನ ರಾಷ್ಟ್ರಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನು ಅದ್ಧೂರಿಯಾಗಿ ಆಯೋಜಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಉನ್ನತ ಮಟ್ಟದ ಪ್ರಥಮ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್‌ಜೆಜೆಎಂ ಪದವಿ ಪೂರ್ವ ಮಹಾವಿದ್ಯಾಲಯ ಬ್ಯಾಡಗಿ ಇವರ ಆಶ್ರಯದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾವೇರಿ, ನಿರ್ದೇಶಕರು ಶಾಲಾ ಶಿಕ್ಷಣ (ಪದವಿ ಪೂರ್ವ) ಕಚೇರಿ ಬೆಂಗಳೂರು, ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ, ಪದವಿ ಪೂರ್ವ ಕಾಲೇಜುಗಳ ದೈಹಿಕ ನಿರ್ದೇಶಕರ ರಾಜ್ಯ ಹಾಗೂ ಜಿಲ್ಲಾ ಘಟಕ, ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ (ರಿ.) ಬ್ಯಾಡಗಿ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಅದ್ಧೂರಿಯಾಗಿ ನಡೆಸುವುದಾಗಿ ತಿಳಿಸಿದರು.ದೇಶದೆಲ್ಲೆಡೆಯಿಂದ 500 ಕ್ರೀಡಾಪಟುಗಳು: ದೇಶದ ವಿವಿಧ ರಾಜ್ಯಗಳಿಂದ ಒಟ್ಟು 38ಕ್ಕೂ ಹೆಚ್ಚು ಮಹಿಳಾ ತಂಡಗಳು ಪಾಲ್ಗೊಳ್ಳಲಿದ್ದು 500ಕ್ಕೂ ಹೆಚ್ಚು ಕ್ರೀಡಾಪಟುಗಳು 100ಕ್ಕೂ ಹೆಚ್ಚು ತಾಂತ್ರಿಕ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದ ಅವರು, ಬ್ಯಾಡಗಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುಸಜ್ಜಿತವಾದ ವಸತಿ ಸೌಕರ್ಯ ಕಲ್ಪಿಸುವುದಾಗಿ ತಿಳಿಸಿದರು.
1 ಕೋಟಿಗೂ ಅಧಿಕ ವೆಚ್ಚದಲ್ಲಿ ಪಂದ್ಯಾವಳಿ: ಬ್ಯಾಡಗಿ ಪಟ್ಟಣವು ಕಬಡ್ಡಿ ಕ್ರೀಡೆಗೆ ಅತ್ಯುತ್ತಮ ಹೆಸರನ್ನು ಪಡೆದಿದೆ, ಕಬಡ್ಡಿ ಪೋಷಕರ ಸಂಖ್ಯೆ ಹೆಚ್ಚಾಗಿದ್ದು ತನು-ಮನ-ಧನದಿಂದ ಪಾಲ್ಗೊಳ್ಳಲಿದ್ದಾರೆ, ಹೀಗಾಗಿ ರು. 1 ಕೋಟಿಗೂ ಅಧಿಕ ವೆಚ್ಚದಲ್ಲಿ ಬ್ಯಾಡಗಿ ಪಟ್ಟಣದಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ ಪಂದ್ಯಾವಳಿ ನಡೆಸುತ್ತಿರುವುದಾಗಿ ತಿಳಿಸಿದರು.ಜರ್ಮನ ಟೆಂಟ್ ಚಿಂತನೆ: ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ಬ್ಯಾಡಗಿ ಶಾಸಕರ ನೇತೃತ್ವದಲ್ಲಿ ಬಹು ಹಿಂದಿನಿಂದಲೂ ಶಿಕ್ಷಣ ಇಲಾಖಾ ಕ್ರೀಡಾಕೂಟಗಳನ್ನು ಅದ್ಧೂರಿಯಾಗಿ ನಡೆಸುತ್ತಾ ಬರಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಮ್ಯಾಟ, ಪ್ರೇಕ್ಷಕರ ಗ್ಯಾಲರಿ, ಜೊತೆಗೆ ಜರ್ಮನ ಟೆಂಟ್ ಅಳವಡಿಸಿ ರಾಷ್ಟ್ರಮಟ್ಟದ ಕ್ರೀಡಾಕೂಟ ನಡೆಸಲು ಚಿಂತನೆ ನಡೆಸಲಾಗುತ್ತಿದ್ದು ಇದಕ್ಕಾಗಿ ಕಬಡ್ಡಿ ಕ್ರೀಡಾಪ್ರೇಮಿಗಳ ಸಹಕಾರವನ್ನು ಕೋರಿದರು.
ರಾಜ್ಯಮಟ್ಟವೂ ಬ್ಯಾಡಗಿಯಲ್ಲೇ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬಸವರಾಜ ಇಟ್ಟಿಗುಡಿ ಮಾತನಾಡಿ, 19 ವರ್ಷದೊಳಗಿನ ರಾಜ್ಯ ಮಟ್ಟದ ಮಹಿಳಾ ಕಬಡ್ಡಿ ಕ್ರೀಡಾಕೂಟವು ಸಹ ಬರುವ ಡಿ.4ರಿಂದ 6ರ ವರೆಗೆ ಬ್ಯಾಡಗಿ ಪಟ್ಟಣದಲ್ಲಿ ಎಸ್ ಜೆಜೆಎಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ, ಉಪನ್ಯಾಸಕರ ಸಂಘದ ಅಧ್ಯಕ್ಷ ನಿಸ್ಸೀಮಗೌಡ್ರ, ದೈಹಿಕ ನಿರ್ದೇಶಕರ ಜಿಲ್ಲಾ ಘಟಕದ ಅಧ್ಯಕ್ಷ ಬೀರಪ್ಪ ಲಮಾಣಿ, ಸದಸ್ಯ ಶಿವರಾಜ್ ಗುಂಡೆ, ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ಗಂಗಣ್ಣ ಎಲಿ, ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ, ನಿರ್ದೇಶಕರಾದ ಸುಭಾಸ್ ಮಾಳಗಿ, ಎ.ಟಿ.ಪೀಠದ, ಎಂ.ಆರ್.ಕೋಡಿಹಳ್ಳಿ, ರತ್ನ ತಹಶೀಲ್ದಾರ, ಕೋಚ್ ಮಹ್ಮದ ಇಸ್ಮಾಯಿಲ್, ಮಂಜುಳ ಭಜಂತ್ರಿ, ಪ್ರಕಾಶ ತಾವರಗಿ ಹಾಗೂ ಇನ್ನಿತರರಿದ್ದರು.