12ಕ್ಕೆ ರಾಷ್ಟ್ರೀಯ ಲೋಕ ಅದಾಲತ್‌: ಹಲವು ಪ್ರಕರಣ ಇತ್ಯರ್ಥ

| Published : Jun 27 2025, 12:48 AM IST

12ಕ್ಕೆ ರಾಷ್ಟ್ರೀಯ ಲೋಕ ಅದಾಲತ್‌: ಹಲವು ಪ್ರಕರಣ ಇತ್ಯರ್ಥ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಜು. 12ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದ್ದು ಕಡಿಮೆ ಖರ್ಚಿನಲ್ಲಿ ಸಾರ್ವಜನಿಕರಿಗೆ ಶೀಘ್ರ ನ್ಯಾಯ ಒದಗಿಸುವುದು ಇದರ ಮೂಲ ಉದ್ದೇಶ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಪಟ್ಟಣದ ನ್ಯಾಯಾಲಯದಲ್ಲಿ ಜು. 12 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಬಿ.ಸಿ. ಅರವಿಂದ್ರ ಹೇಳಿದರು.

ಪಟ್ಟಣದ ನ್ಯಾಯಾಲಯದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಜು. 12ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದ್ದು ಕಡಿಮೆ ಖರ್ಚಿನಲ್ಲಿ ಸಾರ್ವಜನಿಕರಿಗೆ ಶೀಘ್ರ ನ್ಯಾಯ ಒದಗಿಸುವುದು ಇದರ ಮೂಲ ಉದ್ದೇಶ ಎಂದು ಹೇಳಿದರು.

ಚೆಕ್ ಅಮಾನ್ಯ, ಹಣಕಾಸು ವಸೂಲಾತಿ, ಬ್ಯಾಂಕ್ ವಸೂಲಾತಿ, ಅಪಘಾತ, ಎಲ್‌ಐಸಿ ಪ್ರಕರಣ, ವಿವಾಹ ವಿಚ್ಚೇದನ ಹೊರತುಪಡಿಸಿ ಪತಿ- ಪತ್ನಿ ಒಂದುಗೂಡುವುದಾದರೆ ಇಬ್ಬರನ್ನು ಒಂದಾಗಿ ಸೇರಿ ಜೀವನಾಂಶ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಲೋಕ ಅದಾಲತ್ ನಲ್ಲಿ ಪ್ರಕರಣ ಇತ್ಯರ್ಥ ಮಾಡಿಕೊಂಡರೆ ಉಭಯ ಕಕ್ಷಿದಾರರು ಬಾಂಧವ್ಯ ಉಳಿಸಿಕೊಳ್ಳುವುದರ ಜತೆಗೆ ನ್ಯಾಯಾಲಯದ ಸಮಯದೊಂದಿಗೆ ದೂರುದಾರರ ಖರ್ಚು ವೆಚ್ಚಗಳು ಉಳಿದು ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದರು.

ಕಳೆದ ಬಾರಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ವಕೀಲರು, ಉಭಯ ಕಕ್ಷಿದಾರರ ಸಹಕಾರದಿಂದ ಮೂರು ನ್ಯಾಯಾಲಯಗಳಿಂದ ನಾನೂರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥ ಪಡಿಸಲಾಗಿದ್ದು ಸದ್ಯ ಮೂರು ನ್ಯಾಯಾಲಯಗಳಿಂದ ಒಟ್ಟು 6 ಸಾವಿರ ಪ್ರಕರಣಗಳು ಬಾಕಿ ಇದ್ದು, ಜು. 12ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಆಗಬಹುದಾದಂತಹ ಸುಮಾರು ಐನೂರು ಪ್ರಕರಣಗಳು ಗುರುತಿಸಲಾಗಿದೆ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್. ಚಂದನ್ ಮಾತನಾಡಿ, ತಮಗೆ ಶೀಘ್ರ ನ್ಯಾಯ ಸಿಗಲಿ ಎಂದು ಬಹುತೇಕರು ನ್ಯಾಯಾಲಯಕ್ಕೆ ಬರುತ್ತಾರೆ. ಆದರೆ ತಳ ಹಂತದ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದರೂ ಸುಪ್ರೀಂ ಕೋರ್ಟ್ ವರೆಗೂ ಹೋಗುವುದರಿಂದ ನ್ಯಾಯ ಪಡೆಯಲು ಸಾಕಷ್ಟು ಸಮಯವಕಾಶ ಬೇಕಾಗುತ್ತದೆ ಎಂದು ಅವರು ಹೇಳಿದರು.

ಕೆಲವು ನ್ಯಾಯಾಲಯಗಳಲ್ಲಿ 1982 ರಿಂದಲೂ ಪ್ರಕರಣಗಳು ಬಾಕಿ ಇದ್ದು ಸಿವಿಲ್ ಪ್ರಕರಣಗಳಲ್ಲಿ ಮಕ್ಕಳು, ಮೊಮ್ಮಕ್ಕಳು ಪ್ರಕರಣ ಮುಂದುವರೆಸಿಕೊಂಡು ಹೋಗುತ್ತಿದ್ದು ಇದಕ್ಕೆ ಶಾಶ್ವತವಾದ ಪರಿಹಾರ ಕಂಡು ಕೊಳ್ಳಲು ರಾಷ್ಟ್ರೀಯ ಲೋಕ ಅದಾಲತ್ ನಡೆಸಿ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಲು ಸುಪ್ರೀಂಯ ಕೋರ್ಟ್ ಅವಕಾಶ ನೀಡಿದ್ದು ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾದರೆ ನ್ಯಾಯಾಲಯಕ್ಕೂ ಹೊರೆ ಕಡಿಮೆಯಾಗುತ್ತದೆ ಎಂದರು.

ಲೋಕ ಅದಾಲತ್ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಲಿದ್ದು ಕೊಲೆ ಮತ್ತು ಘೋರ ಅಪರಾಧ ಪ್ರಕರಣಗಳನ್ನು ಹೊರತುಪಡಿಸಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಬಹುದಾದಂತಹ ಪ್ರಕರಣಗಳಗಳಿಗೆ ಅವಕಾಶ ನೀಡಲಿದ್ದು ಉಭಯ ಕಕ್ಷಿದಾರರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.