ರಾಂ ಅಜೆಕಾರು ಕಾರ್ಕಳ: ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪತಂಗಗಳ ಮಹತ್ವವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ ತಿಂಗಳ ಕೊನೆಯ ಪೂರ್ಣ ವಾರವನ್ನು ರಾಷ್ಟ್ರೀಯ ಪತಂಗಗಳ ವಾರ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಪತಂಗಗಳ ಸಂರಕ್ಷಣೆ, ವೈಜ್ಞಾನಿಕ ಅಧ್ಯಯನ ಮತ್ತು ಜೀವ ವೈವಿಧ್ಯದ ಕುರಿತು ಜಾಗೃತಿ ಮೂಡಿಸುವ ಅಂತಾರಾಷ್ಟ್ರೀಯ ನಾಗರಿಕ ವಿಜ್ಞಾನ ಅಭಿಯಾನವಾಗಿದೆ.ಪತಂಗಗಳು ಚಿಟ್ಟೆಗಳಂತೆ, ವಿಶ್ವದಲ್ಲಿ ಸುಮಾರು 1.6 ಲಕ್ಷಕ್ಕೂ ಹೆಚ್ಚು ಜಾತಿಗಳು ಗುರುತಿಸಲ್ಪಟ್ಟಿವೆ. ಭಾರತದಲ್ಲೂ ಸಾವಿರಾರು ಪ್ರಭೇದಗಳು ಕಂಡುಬರುತ್ತವೆ. ಜುಲೈ ತಿಂಗಳಲ್ಲಿ ಪತಂಗಗಳ ಚಟುವಟಿಕೆ ಹೆಚ್ಚಿರುವುದರಿಂದ ಅವುಗಳನ್ನು ವೀಕ್ಷಿಸಲು, ಅವುಗಳ ವೈವಿಧ್ಯತೆಯನ್ನು ತಿಳಿದುಕೊಳ್ಳಲು ಹಾಗೂ ದಾಖಲಿಸಲು ಈ ಅವಧಿಗೆ ವಿಶೇಷ ಮಹತ್ವವಿದೆ.ರಾಷ್ಟ್ರೀಯ ಪತಂಗಗಳ ವಾರದ ಅಂಗವಾಗಿ ಪ್ರಕೃತಿ ಪ್ರಿಯರು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಛಾಯಾಗ್ರಾಹಕರು ರಾತ್ರಿ ವೇಳೆಯಲ್ಲಿ ಪತಂಗಗಳನ್ನು ವೀಕ್ಷಿಸಿ, ಛಾಯಾಚಿತ್ರಗಳನ್ನು ಸೆರೆಹಿಡಿದು, ಅವುಗಳ ಜಾತಿಯನ್ನು ಗುರುತಿಸಿ ವೈಜ್ಞಾನಿಕ ದಾಖಲೆಗಳಿಗೆ ಮಾಹಿತಿ ಒದಗಿಸುತ್ತಾರೆ. ಈ ಮಾಹಿತಿಯು ಪತಂಗಗಳ ವೈವಿಧ್ಯತೆ, ವಿಸ್ತರಣೆ ಹಾಗೂ ಪರಿಸರದಲ್ಲಾಗುತ್ತಿರುವ ಬದಲಾವಣೆಗಳನ್ನು ಅಧ್ಯಯನ ಮಾಡಲು ನೆರವಾಗುತ್ತದೆ.

ಪತಂಗಗಳು ಪರಿಸರದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಅನೇಕ ಸಸ್ಯಗಳ ಪರಾಗಸ್ಪರ್ಶದಲ್ಲಿ ಅವು ಸಹಕರಿಸುತ್ತವೆ. ಜೊತೆಗೆ ಪಕ್ಷಿಗಳು, ಬಾವಲಿಗಳು, ಕಪ್ಪೆಗಳು ಹಾಗೂ ಇತರ ಜೀವಿಗಳಿಗೆ ಆಹಾರವಾಗುವ ಮೂಲಕ ಆಹಾರ ಸರಪಳಿಯ ಪ್ರಮುಖ ಕೊಂಡಿಯಾಗಿವೆ. ಪತಂಗಗಳ ಸಂಖ್ಯೆಯಲ್ಲಿ ಆಗುವ ಕುಸಿತವು ಪರಿಸರ ಮಾಲಿನ್ಯ, ಕೀಟ ನಾಶಕಗಳ ಅತಿಯಾದ ಬಳಕೆ ಮತ್ತು ಅರಣ್ಯ ನಾಶದಂತಹ ಸಮಸ್ಯೆಗಳ ಸೂಚಕವಾಗಿರುವುದರಿಂದ ಅವುಗಳನ್ನು ಜೈವ ಸೂಚಕಗಳಾಗಿಯೂ ಪರಿಗಣಿಸಲಾಗುತ್ತದೆ. ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶ ಪತಂಗಗಳ ವೈವಿಧ್ಯತೆಗೆ ಹೆಸರುವಾಸಿಯಾಗಿದೆ.ತಜ್ಞರ ಪ್ರಕಾರ ಪತಂಗಗಳನ್ನು ಸಂರಕ್ಷಿಸುವುದು ಎಂದರೆ ಕೇವಲ ಒಂದು ಕೀಟವನ್ನು ಉಳಿಸುವುದಲ್ಲ, ಇಡೀ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಕಾರ್ಯವಾಗಿದೆ. ಶಾಲೆ-ಕಾಲೇಜುಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಗಳು, ಪ್ರಕೃತಿ ನಡಿಗೆ, ಪತಂಗ ವೀಕ್ಷಣೆ ಮತ್ತು ಛಾಯಾಗ್ರಹಣ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಪ್ರಕೃತಿ ಪ್ರೇಮ ಹಾಗೂ ಜೀವ ವೈವಿಧ್ಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪರಿಸರ ಮಾಲಿನ್ಯ, ಬೆಳಕಿನ ಮಾಲಿನ್ಯ ಹಾಗೂ ಅರಣ್ಯ ನಾಶದಿಂದ ಪತಂಗಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ರಾಷ್ಟ್ರೀಯ ಪತಂಗಗಳ ವಾರವು ಪತಂಗಗಳನ್ನು ವೀಕ್ಷಿಸಲು, ದಾಖಲಿಸಲು ಹಾಗೂ ನಾಗರಿಕ ವಿಜ್ಞಾನದ ಮೂಲಕ ಅವುಗಳ ಬಗ್ಗೆ ಜಾಗೃತಿ ಮೂಡಿಸಲು ಉತ್ತಮ ಅವಕಾಶವಾಗಿದೆ. ಮನೆಯ ಅಂಗಳ, ತೋಟ ಅಥವಾ ಬೆಳಕಿನ ಸುತ್ತ ಕಾಣುವ ಪತಂಗಗಳನ್ನು ಗಮನಿಸಿ ದಾಖಲಿಸುವುದರಿಂದ ಪ್ರಕೃತಿಯನ್ನು ಇನ್ನಷ್ಟು ಹತ್ತಿರದಿಂದ ಅರಿಯುವುದರ ಜೊತೆಗೆ ಅವುಗಳ ಸಂರಕ್ಷಣೆಗೂ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬಹುದು.

– ಅಕ್ಷರ್ , ಕಾನನ ಕನ್ಸರ್ವೇಶನ್, ಆಗುಂಬೆ