ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಸಾತಂತ್ರ್ಯ ಬಂದು ೭೫ ವರ್ಷ ಕಳೆದರೂ ದೇಶದಲ್ಲಿ ಇನ್ನೂ ಬಡತನ, ನಿರುದ್ಯೋಗ ಸಮಸ್ಯೆ, ಮೂಲಭೂತ ಸಮಸ್ಯೆಗಳಿಗೆ ಪರಿಹಾರ ದೊರಕಿಲ್ಲ. ದೇಶವನ್ನು ಆಳಿದ ರಾಷ್ಟ್ರೀಯ ಪಕ್ಷಗಳು ದೇಶವನ್ನು ಅಭಿವೃದ್ಧಿಗೊಳಿಸುವಲ್ಲಿ ವಿಫಲವಾಗಿವೆ. ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸಿ, ಸಂವಿಧಾನದ ಆಶಯವನ್ನು ಎತ್ತಿಹಿಡಿಯುವುದು ಬಹುಜನ ಸಮಾಜ ಪಕ್ಷದ ಉದ್ದೇಶವಾಗಿದೆ ಎಂದು ಬಿಎಸ್‌ಪಿ ಅಭ್ಯರ್ಥಿ ಡಾ. ಚಿನ್ನಪ್ಪ ವೈ ಚಿಕ್ಕ ಹಾಗಡೆ ತಿಳಿಸಿದರು.ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಹಾಗೂ ಸಂವಿಧಾನದ ಆಶಯವನ್ನು ಎತ್ತಿಹಿಡಿಯುವುದು ಬಿಎಸ್‌ಪಿಯಿಂದ ಮಾತ್ರ ಸಾಧ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರು ಪಕ್ಷಗಳ ಅಭ್ಯರ್ಥಿಗಳು ಸಹ ಹಲವಾರು ಬಾರಿ ಆಯ್ಕೆಯಾಗಿದ್ದಾರೆ. ಬಲಾಢ್ಯರೇ ಈ ಕ್ಷೇತ್ರದಿಂದ ಚುನಾಯಿತರಾಗಿ ಸಂಸದರಾಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಿಲ್ಲ. ಆದ್ದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಉದ್ದೇಶದೊಂದಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ತಿಳಿಸಿದರು.ಮಲತಾಯಿ ಧೋರಣೆ ಸರಿಯಲ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಇಂದಿಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟೋ ಕಡೆ ಸಂಸದ ಡಿ.ಕೆ. ಸುರೇಶ್ ಭಾವಚಿತ್ರಗಳು ರಾರಾಜಿಸುತ್ತಿವೆ. ಇವುಗಳನ್ನು ತೆರವುಗೊಳಿಸದೇ ಚುನಾವಣಾ ಆಯೋಗ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಕೂಡಲೇ ಇವುಗಳನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದರು.
ಕ್ಷೇತ್ರದಲ್ಲಿ ಸೀರೆ, ಕುಕ್ಕರ್ ಹಂಚುತ್ತಿರುವ ಕುರಿತು ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಆಮಿಷಗಳನ್ನು ಒಡ್ಡುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ. ಜನರಿಗೆ ಆಮಿಷ ಒಡ್ಡಿ ಮತ ಕೇಳುವುದು ಅಪರಾಧ. ಚುನಾವಣಾ ಆಯೋಗ ಇದಕ್ಕೆಲ್ಲಾ ಕಡಿವಾಣ ಹಾಕಿಬೇಕು. ನ್ಯಾಯ ಸಮ್ಮತ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸಿದರು.ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ವಲಯ ಪ್ರಭಾರಿ ನಾಗೇಶ್ ಮಾತನಾಡಿ, ಸಂಸದ ಸುರೇಶ್ ಕನಕಪುರಕ್ಕೆ ಯಾವುದೇ ರೈಲ್ವೆ ಯೋಜನೆಯನ್ನು ತರಲು ಶ್ರಮಿಸಿಲ್ಲ. ವಿಧಾನಸಭೆ ಚುನಾವಣೆಗೂ ಮುನ್ನ ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸಿತ್ತು. ಆದರೆ, ಸಂಸತ್ತಿನಲ್ಲಿ ಈ ಯೋಜನೆಯ ಕುರಿತು ಅವರು ಧ್ವನಿಯೆತ್ತಿಲ್ಲ. ಯಾವುದೇ ಯೋಜನೆಗಳನ್ನು ತರದೇ ಬರೀ ಜನಸಂಪರ್ಕ ಸಭೆ ಮಾಡಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ. ಅಣ್ಣತಮ್ಮಂದಿರು ಅಪಾರ ಪ್ರಮಾಣದ ಸಂಪತ್ತು ಗಳಿಸಿದ್ದು, ಇದನ್ನು ರಕ್ಷಿಸಲು ಒಬ್ಬರು ಶಾಸಕ ಹಾಗೂ ಮತ್ತೊಬ್ಬರು ಸಂಸದರಾಗಬೇಕಿದೆ ಎಂದು ಆರೋಪಿಸಿದರು.
ಅಪವಿತ್ರ ಮೈತ್ರಿ: ಇನ್ನು ಕೋಮುವಾದಿ ಪಕ್ಷ ಎಂದು ಜರಿಯುತ್ತಿದ್ದ ಬಿಜೆಪಿಯೊಂದಿಗೆ ಈಗ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ತಮ್ಮ ಕುಟುಂಬದ ಉಳಿವಿಗಾಗಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ನಾಲ್ಕು ಕೆರೆ ತುಂಬಿಸಿದ್ದು ಬಿಟ್ಟರೆ ಏನು ಮಾಡಿಲ್ಲ. ಇವರೆಲ್ಲ ಸೇರಿ ಡಾ. ಮಂಜುನಾಥ್ ಅವರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಲೋಕಸಭಾ ಚುನಾವಣೆ ಉಸ್ತುವಾರಿ ಅಂದಾನಪ್ಪ, ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಸಂಯೋಜಕ ವೆಂಕಟಚಲ, ಮಹಿಳಾ ಘಟಕದ ಅನು, ಪದಾಧಿಕಾರಿಗಳಾದ ದೇವರಾಜ್ ಮತ್ತು ಮಹದೇವ್, ಚಂದ್ರಕಾಂತ್, ರಮೇಶ್, ಕೂಡ್ಲೂರು ಕಾಂತರಾಜ್, ರಾಮಕೃಷ್ಣ, ಕೇಶಹೊಲೆಯರ್, ಇಮಾನ್ಯವೇಲ್ ಇತರರು ಇದ್ದರು.