ಪುರಾತತ್ತ್ವ ಶಾಸ್ತ್ರಜ್ಞ ಪ್ರೊ. ಎ.ವಿ. ನರಸಿಂಹಮೂರ್ತಿಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ

| Published : Apr 02 2024, 01:01 AM IST

ಪುರಾತತ್ತ್ವ ಶಾಸ್ತ್ರಜ್ಞ ಪ್ರೊ. ಎ.ವಿ. ನರಸಿಂಹಮೂರ್ತಿಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಪ್ರೊ. ಎ.ವಿ. ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ 1 ಲಕ್ಷ ರು. ನಗದು ಒಳಗೊಂಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಕೊಡಮಾಡುವ 2022ನೇ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಮೈಸೂರು ವಿವಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ಎ. ವಿ. ನರಸಿಂಹಮೂರ್ತಿ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 1 ಲಕ್ಷ ರು. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿ.ಎ. ಮತ್ತು ಎಂ.ಎ ಪದವಿಯನ್ನು ಪ್ರಥಮ ರ್‍ಯಾಂಕ್‌ನೊಂದಿಗೆ ಪಡೆದ ಪ್ರೊ. ನರಸಿಂಹ ಮೂರ್ತಿ ಅವರು 1969 ರಲ್ಲಿ ಆಂಧ್ರ ವಿ.ವಿ.ಯಿಂದ ಪಿ.ಎಚ್.ಡಿ ಪದವಿ ಪಡೆದರು. ಈ ಮಧ್ಯೆ ಅಮೆರಿಕಾದ ಹಾರ್ವರ್ಡ್ ವಿ.ವಿ.ಯಲ್ಲಿ ಫುಲ್‌ಬ್ರೈಟ್ ಸ್ಕಾಲರ್ ಆಗಿದ್ದರು. ಭಾರತೀಯ ಪುರಾತತ್ವ ಇಲಾಖೆಯಲ್ಲಿ ತನ್ನ ವೃತ್ತಿ ಆರಂಭಿಸಿ, ಅನಂತರ ಆಂಧ್ರ ವಿ.ವಿ.ಯಲ್ಲಿ ಉಪನ್ಯಾಸಕರಾಗಿ, 1965 ರಲ್ಲಿ ಮೈಸೂರು ವಿ.ವಿ.ಯಲ್ಲಿ ರೀಡರ್ ಆಗಿ ಸೇರಿ, ಪ್ರೊಫೆಸರ್ ಆಗಿ ನಿವೃತ್ತರಾದರು.

ಅವರು ಇಂಗ್ಲಿಷ್‌ನಲ್ಲಿ 18 ಹಾಗೂ ಕನ್ನಡದಲ್ಲಿ 18 ಪುಸ್ತಕ ರಚಿಸಿದ್ದಾರೆ. ಕೆ. ಎಂ.ಮುನ್ಶಿಯವರ 22 ಪುಸ್ತಕಗಳನ್ನು ಕನ್ನಡದಲ್ಲಿ ಸಂಪಾದಿಸಿದ್ದಾರೆ. ಹಿಸ್ಟರಿ ಆ್ಯಂಡ್ ಕಲ್ಚರ್ ಆಫ್ ಇಂಡಿಯನ್ ಪಿಪಲ್ ಇದರ ಸಂಪಾದನೆಯಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ಇವರು ನಾಣ್ಯಶಾಸ್ತ್ರ, ಶಾಸನಶಾಸ್ತ್ರ, ಲಿಪಿಶಾಸ್ತ್ರಕ್ಕೆ ಸಂಬಂಧಿಸಿದಂತೆ 95ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು, ಮೈಸೂರು ವಿ.ವಿ.ಯ ವಿಶ್ವಕೋಶದಲ್ಲಿ 400 ಲೇಖನ ಬರೆದಿದ್ದಾರೆ. ಕರ್ನಾಟಕ ವಿಶ್ವಕೋಶದಲ್ಲಿ 50 ಕ್ಕೂ ಹೆಚ್ಚು ಲೇಖನ ಪ್ರಕಟವಾಗಿದೆ. 20 ಸಂಶೋಧನ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮಾರ್ಗದರ್ಶಕರಾಗಿದ್ದರು.

ಭಾರತೀಯ ನಾಣ್ಯಸಂಸ್ಥೆ ವಾರಣಾಸಿ ಇದರ ಅಧ್ಯಕ್ಷರಾಗಿ, ದಕ್ಷಿಣ ಭಾರತ ನಾಣ್ಯಶಾಸ್ತ್ರ ಸಂಘದ ಕಾರ್ಯದರ್ಶಿ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅವರು ಬನವಾಸಿ, ಕೊಪ್ಪ, ಹೆಗ್ಗಡೆಹಳ್ಳಿ, ತಲಕಾಡು ಮುಂತಾದ ಕಡೆ ಉತ್ಖನನಗಳನ್ನು ನಡೆಸಿದ್ದಾರೆ. ಇವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪುರಾತತ್ವ ರತ್ನ ಪ್ರಶಸ್ತಿ, ಕರ್ನಾಟಕ ಸಾಹಿತ್ಯಅಕಾಡೆಮಿ ಪ್ರಶಸ್ತಿ, ಪುರಾತತ್ವ ಇಲಾಖೆಯಿಂದ ಅವಾರ್ಡ್ ಆಫ್ ಎಕ್ಸಲೆನ್ಸ್ ಹೀಗೆ ಹತ್ತಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.