ಸಾರಾಂಶ
ರಾಯಚೂರಿನ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ರಾಷ್ಟ್ರೀಯ ಪಲ್ಸ್ ಪೊಲೀಯೋ ದಿನಾಚರಣೆ ಪೋಸ್ಟರ್ ರನ್ನು ಬಿಡುಗಡೆಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೊಲೀಯೋ ಲಸಿಕೆ ನೀಡಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ತಿಳಿಸಿದರು.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ ಪೊಲೀಯೋ ದಿನಾಚರಣೆ ಕುರಿತು ಜಿಲ್ಲಾ ಮಟ್ಟದ ಟಾಸ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರುವ ಮಾ.3ರಿಂದ 6 ರವರೆಗೆ ಜರಗುವ ಲಸಿಕೆ ಕಾರ್ಯಕ್ರಮದಲ್ಲಿ ಮೊದಲನೆ ದಿನ ಬೂತ್ ಕವರೇಜ 98% ಕಡ್ಡಾಯವಾಗಿ ಎಲ್ಲಾ ಮಕ್ಕಳಿಗೆ ಲಸಿಕೆ ಕೊಡಿಸುವುದರ, ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಗುಡ್ಡಗಾಡು ಪ್ರದೇಶ, ತಾಂಡಾ ಮತ್ತು ದೊಡ್ಡಿಗಳಲ್ಲಿ ಮಾ.1ಮತ್ತು 2 ರಂದು ಮುಂಚಿತವಾಗಿ ಮಕ್ಕಳಿಗೆ ಲಸಿಕೆ ನೀಡಬೇಕು ಹಾಗೂ ಶಾಲಾ ಮಕ್ಕಳಿಂದ ಜಾಥಾ ಮಾಡಿಸಿ ವ್ಯಾಪಕ ಪ್ರಚಾರ ಮಾಡಬೇಕು ಮತ್ತು ಜೆಸ್ಕಾಂ ಇಲಾಖೆಯವರು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಮುಗಿಯುವರೆಗೂ ವಿದ್ಯೂತ್ ಸರಬರಾಜು ಮಾಡಬೇಕು ಹಾಗೂ ಆರ್.ಟಿ.ಓ ಇಲಾಖೆಯವರು ವಾಹನದ ವ್ಯವಸ್ಥೆ ಮಾಡಬೇಕೆಂದು ಹೇಳಿದರು.ಜಿಲ್ಲೆಯಲ್ಲಿ ಒಟ್ಟು 2,55,257 5ವರ್ಷದೊಳಗಿನ ಮಕ್ಕಳಿದ್ದು, ಗ್ರಾಮೀಣ ಭಾಗದಲ್ಲಿ 1,90,658 ಮಕ್ಕಳಿದ್ದಾರೆ. ಉಳಿದಂತೆ ನಗರ ಪ್ರದೇಶದಲ್ಲಿ 64,599 ಮಕ್ಕಳಿದ್ದು, ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪೊಲೀಯೋ ಲಸಿಕೆಯನ್ನು ನೀಡುವಲ್ಲಿ ಅಧಿಕಾರಿಗಳು, ಸಿಬ್ಬಂದಿ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಎಡಿಸಿ ಅಶೋಕ ದುಡಗುಂಟಿ, ಡಿಎಚ್ಒ ಡಾ.ಸುರೇಂದ್ರಬಾಬು, ವಿವಿಧ ಇಲಾಖೆ ಅಧಿಕಾರಿಗಳಾದ ಡಾ.ಕೆ.ಗಣೇಶ, ಚೇತನ ಕುಮಾರ, ಡಾ.ಶಿವಕುಮಾರ, ಡಾ.ನಂದಿತಾ, ಡಾ.ಮಹ್ಮದ್ ಶಾಕೀರ್ ಮೊಹಿನುದ್ದಿನ್, ಡಾ.ಪ್ರಜ್ವಲ್ ಕುಮಾರ, ಡಾ.ಅಯ್ಯನಗೌಡ, ಡಾ.ಶರಣಬಸವರಾಜ, ಡಾ.ಬನದೇಶ್ವರ, ಡಾ.ರವಿಕಿರಣ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.