ಬೋಧನೆ- ಕಲಿಕೆಯ ವಿಧಾನ ಸುಧಾರಿಸುವುದು, ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವುದು ಹಾಗೂ ವೈಯಕ್ತಿಕ ಕಲಿಕಾ ಅನುಭವಗಳನ್ನು ಒದಗಿಸಲು ಎಐ ನೆರವಾಗುತ್ತದೆ. ತರಗತಿ ಕೊಠಡಿಗಳಿಂದ ಹಿಡಿದು ಪ್ರಯೋಗಾಲಯಗಳವರೆಗೆ ಸಂಪೂರ್ಣ ಶೈಕ್ಷಣಿಕ ಮೂಲಸೌಕರ್ಯವನ್ನು ಎಐ ಆಧಾರಿತ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗೆ ಅನುಗುಣವಾಗಿ ಮರುವಿನ್ಯಾಸಗೊಳಿಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಕರ್ನಾಟಕದ ಮಾಜಿ ಕುಲಪತಿಗಳ ವೇದಿಕೆ ಸಂಯುಕ್ತವಾಗಿ ಕೃತಕ ಬುದ್ಧಿಮತ್ತೆಯ ಮೂಲಕ ಉನ್ನತ ಶಿಕ್ಷಣದ ಪುನರ್ ಕಲ್ಪನೆ ವಿಷಯ ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ಜೆಎಸ್‌ಎಸ್ ಸಿಎಂಎಸ್, ಜೆಎಸ್‌ಎಸ್ ತಾಂತ್ರಿಕ ಸಂಸ್ಥೆಗಳ ಆವರಣದ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.ವಿಚಾರ ಸಂಕಿರಣದಲ್ಲಿ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸಿದ 40ಕ್ಕೂ ಹೆಚ್ಚು ಮಾಜಿ ಕುಲಪತಿಗಳು, ಖ್ಯಾತ ಶಿಕ್ಷಣ ತಜ್ಞರು, ಶೈಕ್ಷಣಿಕ ನಾಯಕರು, ಕೈಗಾರಿಕಾವಲಯದ ಪರಿಣಿತರು, ಸಂಶೋಧಕರು ಹಾಗೂ ನೀತಿ ನಿರೂಪಕರು ಭಾಗವಹಿಸಿ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತರಲಿರುವ ಪರಿವರ್ತನೆಗಳ ಕುರಿತು ಚರ್ಚಿಸಿದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಹ ಕುಲಪತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ. ಸುರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃತಕ ಬುದ್ಧಿಮತ್ತೆಯು ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಪರಿವರ್ತಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದರು.ಬೋಧನೆ- ಕಲಿಕೆಯ ವಿಧಾನ ಸುಧಾರಿಸುವುದು, ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವುದು ಹಾಗೂ ವೈಯಕ್ತಿಕ ಕಲಿಕಾ ಅನುಭವಗಳನ್ನು ಒದಗಿಸಲು ಎಐ ನೆರವಾಗುತ್ತದೆ. ತರಗತಿ ಕೊಠಡಿಗಳಿಂದ ಹಿಡಿದು ಪ್ರಯೋಗಾಲಯಗಳವರೆಗೆ ಸಂಪೂರ್ಣ ಶೈಕ್ಷಣಿಕ ಮೂಲಸೌಕರ್ಯವನ್ನು ಎಐ ಆಧಾರಿತ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗೆ ಅನುಗುಣವಾಗಿ ಮರುವಿನ್ಯಾಸಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಜೆಎಸ್‌ಎಸ್ ಎಸ್.ಟಿ.ಯು ಕುಲಪತಿ ಡಾ.ಎ.ಎನ್. ಸಂತೋಷ್ ಕುಮಾರ್ ಅವರು ಗೌರವ ಅತಿಥಿಯಾಗಿ ಭಾಗವಹಿಸಿ, ಭವಿಷ್ಯದ ಜ್ಞಾನ ಆರ್ಥಿಕತೆಗೆ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಸಿದ್ಧರಾಗಲು ನವೋದ್ಯಮ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದರು.ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಅಮೆರಿಕದ ಮಾಜಿ ರಾಯಭಾರಿ, ಆರ್ಮ್ ಹೋಲ್ಡಿಂಗ್ ಸಂಸ್ಥೆಯ ಪ್ರತಿನಿಧಿ ಹಾಗೂ ಮಿಸ್ಟ್ರಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಗ್ನಲ್ ಪ್ರೊಸೆಸಿಂಗ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಡಾ. ಜಯಕುಮಾರ್ ಸಿಂಗಾರಂ ಮಾತನಾಡಿ, ವಿವಿಗಳು ತಮ್ಮ ಪಠ್ಯಕ್ರಮ, ಸಂಶೋಧನಾ ಆದ್ಯತೆ, ಅಧ್ಯಾಪಕರ ಕೌಶಲ್ಯವೃದ್ಧಿ ಕಾರ್ಯಕ್ರಮ ನವೀಕರಿಸಿಕೊಳ್ಳಬೇಕು. ಉದ್ಯಮ 5.0 ಹಾಗೂ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಪರಿಸರಕ್ಕೆ ಹೊಂದಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ವಿಚಾರ ಸಂಕಿರಣದಲ್ಲಿ ತಜ್ಞರು ಹಲವು ಪ್ರಮುಖ ವಿಷಯಗಳ ಕುರಿತು ಉಪನ್ಯಾಸ ಹಾಗೂ ಪ್ಯಾನೆಲ್ ಚರ್ಚೆ ನಡೆಸಿದರು. ಉನ್ನತ ಶಿಕ್ಷಣದಲ್ಲಿ ಎಐ ಯನ್ನು ನಾಯಕತ್ವದ ಕಾರ್ಯತಂತ್ರದ ಸಾಧನವಾಗಿ ಬಳಸುವುದು. ಎಐ ಆಧಾರಿತ ಸಂಶೋಧನೆ, ಅನುದಾನ ಅವಕಾಶ ಮತ್ತು ಡಿಜಿಟಲ್ ಗ್ರಂಥಾಲಯಗಳ ರೂಪಾಂತರ. ನೈತಿಕ ಮತ್ತು ಜವಾಬ್ದಾರಿಯುತ ಎಐ ಬಳಕೆಯನ್ನು ಖಚಿತಪಡಿಸಿಕೊಳ್ಳಲು ವಿಶ್ವವಿದ್ಯಾಲಯ ವ್ಯವಸ್ಥೆಗಳಲ್ಲಿ ಮಾರ್ಗಸೂಚಿಗಳ ರಚನೆ ಕುರಿತು ಚರ್ಚಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕದ ಮಾಜಿ ಕುಲಪತಿಗಳ ವೇದಿಕೆ ಅಧ್ಯಕ್ಷ ಡಾ.ಎಸ್. ಚಂದ್ರಶೇಖರ ಶೆಟ್ಟಿ, ಶಿಕ್ಷಣದ ಗುಣಮಟ್ಟ ಮತ್ತು ಲಭ್ಯತೆಯನ್ನು ಹೆಚ್ಚಿಸಲು ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ನೀತಿ ರೂಪಿಸುವ ಸಂಸ್ಥೆಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಕೃತಕ ಬುದ್ಧಿಮತ್ತೆಯು ಉನ್ನತ ಶಿಕ್ಷಣದ ಭವಿಷ್ಯವನ್ನು ರೂಪಿಸುವ ಪ್ರಮುಖ ಶಕ್ತಿಯಾಗಿದ್ದು, ವಿಶ್ವವಿದ್ಯಾಲಯಗಳು ಎಐ -ಸಿದ್ಧ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಹಾಗೂ ವಿದ್ಯಾರ್ಥಿ-ಅಧ್ಯಾಪಕರಿಗೆ ಡಿಜಿಟಲ್ ಯುಗಕ್ಕೆ ಅಗತ್ಯವಾದ ಕೌಶಲ್ಯ ಒದಗಿಸುವುದು ಇಂದಿನ ಅನಿವಾರ್ಯತೆ ಎಂದು ಅವರು ಹೇಳಿದರು.