ಸಾರಾಂಶ
ಕನ್ನಡಪ್ರಭ ವಾರ್ತೆ, ಬೆಂಗಳೂರು
ಭಾರತದ ಸಂವಿಧಾನ ಜಾರಿಯಾಗಿ 75ನೇ ವರ್ಷ ನಡೆಯುತ್ತಿರುವುದರಿಂದ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಫೆ.24 ಹಾಗೂ 25 ರಂದು ಎರಡು ದಿನ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಏಕತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶನಿವಾರ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಜತೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಸಂವಿಧಾನ ರಚನೆಯಾದ ಬಳಿಕ ಬಜೆಟ್ ಮುಖಪುಟದಲ್ಲಿ ಪೀಠಿಕೆ ಮುದ್ರಿಸಿದ್ದೇವೆ. ಈಗಾಗಲೇ ಜ.26 ರಿಂದ ಸಂವಿಧಾನ ಜಾಥಾ ಶುರು ಮಾಡಿದ್ದು, ಫೆ.23ರವರೆಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲೂ ನಡೆಯಲಿದೆ. ಫೆ.24 ರಂದು ಬೆಂಗಳೂರಿನಲ್ಲಿ ಏಕತಾ ಸಮಾವೇಶ ನಡೆಯಲಿದೆ ಎಂದು ಹೇಳಿದರು.
ಈ ವೇಳೆ ಖ್ಯಾತ ಚಿಂತಕರು, ಭಾಷಣಕಾರರಾದ ಪ್ರೊ. ಅಸುತೋಶ್ ವರ್ಶನಿ, ಡಾ. ಗಣೇಶ್ ದೇವಿ, ಪ್ರೊ. ಜಯಂತಿ ಘೋಷ್, ಪ್ರೊ. ಸುಖದೇವ್ ಥೋರಟ್, ಪ್ರೊ. ಕಾಂಚಾ, ಪ್ರಶಾಂತ್ ಭೂಷಣ್, ಬಿಜುವಾಡ ವಿಲ್ಸನ್, ಮೇಧಾ ಪಾಟ್ಕರ್ ಸೇರಿ ಅನೇಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವೇಳೆ ದೇಶದ ಸಮಸ್ಯೆಗಳು, ಜನರ ಬವಣೆಗಳು ಹಾಗೂ ಸಂವಿಧಾನದಲ್ಲಿ ಅದಕ್ಕೆ ಇರುವ ಪರಿಹಾರಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಇದೇ ವೇಳೆ, ಫೆ.25ರಂದು ಬೃಹತ್ ಸಂವಿಧಾನ ಜಾಥಾ ನಡೆಯಲಿದೆ. ಜತೆಗೆ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದಿಸಲಾಗುವುದು ಎಂದರು.
ಜಾತ್ಯಾತೀತತೆ, ಸಮಾನತೆ, ಭ್ರಾತೃತ್ವ ತತ್ವಗಳೇ ಸಂವಿಧಾನದ ತಳಹದಿ. ಇದಕ್ಕೆ ಚ್ಯುತಿ ತರುವ ಪ್ರಯತ್ನಗಳನ್ನು ವಿಫಲಗೊಳಿಸಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ.
ಈ ಜವಾಬ್ದಾರಿಯನ್ನು ನಿಭಾಯಿಸಲು ಯಾವ ಪಕ್ಷ, ಗುಂಪು ಎನ್ನದೆ ಎಲ್ಲಾ ಜನರೂ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದ ಆಶಯ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ಅರಿವು ಇರಬೇಕು. ಸಂವಿಧಾನ ಜಾರಿಯಾಗಿ 75 ವರ್ಷವಾದರೂ ಎಲ್ಲರಿಗೂ ಎಲ್ಲ ಹಕ್ಕುಗಳು ಸಿಕ್ಕಿಲ್ಲ.
ಜತೆಗೆ, ವೈರುಧ್ಯತೆಯತ್ತ ಸಮಾಜ ಕಾಲಿಡುತ್ತಿದೆ. ಈಗಲೂ ಸಾಮಾಜಿಕ ಹಾಗೂ ರಾಜಕೀಯ ಅಸಮಾನತೆ ಇದೆ. ಸಂವಿಧಾನ ಸಮಾನತೆ ಪ್ರತಿಪಾದಿಸಿದ್ದರೂ ನಮಗೆ ಯಾಕೆ ಸಿಕ್ಕಿಲ್ಲ ಎಂಬ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕಾದ್ದು ಸರ್ಕಾರಗಳ ಕರ್ತವ್ಯ. ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಸಂವಿಧಾನ ತಿಳಿಸುತ್ತದೆ. ಆದರೆ, ಪಾಲನೆಯಾಗುತ್ತಿದೆಯೇ ಎಂಬುದನ್ನು ನೋಡಬೇಕು.
ಸುಮಾರು 78% ರಷ್ಟು ಜನರು ಶಿಕ್ಷಣ ಪಡೆದಿದ್ದಾರೆ. ವಿದ್ಯಾವಂತರು ಇಂದಿಗೂ ಮೌಢ್ಯ ಕಂದಾಚಾರವನ್ನು ನಂಬುತ್ತಿದ್ದಾರೆ. ಹೀಗಾಗಿ, ವೈಚಾರಿಕತೆ ಹಾಗೂ ಸಂವಿಧಾನದ ಜ್ಞಾನ ಅಗತ್ಯ ಎಂದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ವೇಳೆ ಹಾಜರಿದ್ದರು.
ಇದಕ್ಕೂ ಮೊದಲು ಐಕ್ಯತಾ ಸಮಾವೇಶದ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಎಚ್.ಸಿ. ಮಹದೇವಪ್ಪ, ಸಮಾವೇಶದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸಂವಿಧಾನದ 75ನೇ ವರ್ಷ, ಸಂವಿಧಾನ ಕಲ್ಯಾಣ ಮತ್ತು ಅಭಿವೃದ್ಧಿ, ಕರ್ನಾಟಕದಲ್ಲಿ ಅಭಿವೃದ್ಧಿ ಮಾದರಿಗಳು, ಪ್ರಜಾಪ್ರಭುತ್ವ ಮತ್ತು ಅಂತರ್ಗತ ಕರ್ನಾಟಕ ಎಂಬ ನಾಲ್ಕು ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಚರ್ಚೆಗಳು ನಡೆಯಲಿವೆ ಎಂದರು.