ಸಾಮೂಹಿಕ ವಿವಾಹ ಕಾರ್ಯಕ್ರಮದಿಂದ ರಾಷ್ಟ್ರೀಯ ಸಂಪತ್ತು ಉಳಿಕೆ

| Published : May 12 2024, 01:19 AM IST

ಸಾಮೂಹಿಕ ವಿವಾಹ ಕಾರ್ಯಕ್ರಮದಿಂದ ರಾಷ್ಟ್ರೀಯ ಸಂಪತ್ತು ಉಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಘರ್ಷದ ಹಾದಿ ದೂರವಾಗಿ ಪ್ರತಿಯೊಬ್ಬರಲ್ಲಿ ಭಾರತೀಯತೆ ಅಳವಡಿಸಿಕೊಳ್ಳುವ ಮೂಲಕ ಪ್ರತಿ ಹಂತದಲ್ಲಿ ಸೌಹಾರ್ದದಿಂದ ಬಾಳಿ ಬದುಕುವುದೇ ಶ್ರೇಷ್ಠ ಕೆಲಸವಾಗಿದೆ.

ಕೊಟ್ಟೂರು: ಸಂಘರ್ಷದ ಹಾದಿ ದೂರವಾಗಿ ಪ್ರತಿಯೊಬ್ಬರಲ್ಲಿ ಭಾರತೀಯತೆ ಅಳವಡಿಸಿಕೊಳ್ಳುವ ಮೂಲಕ ಪ್ರತಿ ಹಂತದಲ್ಲಿ ಸೌಹಾರ್ದದಿಂದ ಬಾಳಿ ಬದುಕುವುದೇ ಶ್ರೇಷ್ಠ ಕೆಲಸವಾಗಿದೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಡೋಣೂರು ಚಾನುಕೋಟಿ ಮಠದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮರುಳಸಿದ್ದೇಶ್ವರ ರಥೋತ್ಸವ ಜಗಜ್ಯೋತಿ ಬಸವೇಶ್ವರ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಡೋಣೂರು ಚಾನುಕೋಟಿ ಮಠ ಕಳೆದ ಮೂರು ದಶಕಗಳಿಂದ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೇ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುತ್ತಾ ಬರುವ ಮೂಲಕ ರಾಷ್ಟ್ರೀಯ ಸಂಪತ್ತಿನ ಉಳುವಿಗೆ ಖಂಡಿತ ಕಾರಣರಾಗಿರುವುದು ಮಾದರಿ ವಿಷಯ ಎಂದು ಅವರು ಹೇಳಿದರು.

ಅನವಶ್ಯಕವಾಗಿ ದುಂದು ವೆಚ್ಚ ಮಾಡಿ ಅದ್ಧೂರಿ ಮದುವೆ ಮಾಡಿಕೊಳ್ಳುವ ಬದಲು ರಾಷ್ಟ್ರೀಯ ಸಂಪತ್ತಿನ ಅಪವ್ಯಯ ತಪ್ಪಿಸಲು ಇಂತಹ ಸಾಮೂಹಿಕ ವಿವಾಹಗಳು ಮತ್ತು ಇತರ ಜನಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವುದು ಶ್ರೇಷ್ಠ ಮಟ್ಟದ್ದು. ಇಂತಹ ಸಾಮೂಹಿಕ ವಿವಾಹದಲ್ಲಿ ಮದುವೆಯಾದವರು ನಿಜಕ್ಕೂ ಧನ್ಯರು ಎಂದು ಅವರು ಹೇಳಿದರು.

ಸಾಮೂಹಿಕ ವಿವಾಹ ಎಂದರೆ ಮೂಗು ಮುರಿಯುವ ಇಂತಹ ದಿನಗಳಲ್ಲಿ ಶ್ರೀಮಂತರು ಪಾಲ್ಗೊಳ್ಳುವ ಮೂಲಕ ಇದರ ಸಾಮಾಜಿಕ ಕೊಡುಗೆ ಸಂದೇಶಕ್ಕೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಡೋಣೂರು ಚಾನುಕೋಟಿ ಮಠಾಧ್ಯಕ್ಷ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜದ ಋಣ ತೀರಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಚಾನುಕೋಟಿ ಮಠದಿಂದ ಪ್ರತಿ ವರ್ಷ ಇಂತಹ ಸಮಾಜ ಮುಖಿ ಕಾರ್ಯಗಳಿಗೆ ಸಹಾಯ ಮಾಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು.

ಬೆಂಗಳೂರು ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ , ಕೂಡ್ಲಿಗಿ ಹಿರೇಮಠಾಧ್ಯಕ್ಷ ಪ್ರಶಾಂತ ಸಾಗರ ಸ್ವಾಮೀಜಿ, ನಂದೀಪುರದ ಚರಂತೇಶ್ವರ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಕ್ಕು ಮೊದಲು ಶ್ರೀಮರುಳ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ನಡೆಯಿತು. ನಂತರ ಮಠದ ವತಿಯಿಂದ 10 ಕ್ಕೂ ಹೆಚ್ಚು ದಂಪತಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು 41 ಜಂಗಮ ವಠುಗಳ ಶಿವದೀಕ್ಷೆ ಕಾರ್ಯಕ್ರಮ ನಡೆಯಿತು.

ಅಟವಾಳ್ಗಿ ಭೋಜರಾಜ ಮತ್ತು ಕರಡಿ ಕೊಟ್ರೇಶ್‌ ದಂಪತಿಗಳು, ಚಾಪಿ ಚಂದ್ರಪ್ಪ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು, ಮೈದೂರು ವಿಶ್ವನಾಥ ಕಾರ್ಯಕ್ರಮ ನಿರೂಪಸಿದರು.