ಪ್ರಾಕೃತಿಕ ಅವಘಡ: ದ.ಕ.ದಲ್ಲಿ ಭೂಕುಸಿತದ್ದೇ ಆತಂಕ!

| Published : May 05 2024, 02:09 AM IST / Updated: May 05 2024, 02:10 AM IST

ಪ್ರಾಕೃತಿಕ ಅವಘಡ: ದ.ಕ.ದಲ್ಲಿ ಭೂಕುಸಿತದ್ದೇ ಆತಂಕ!
Share this Article
  • FB
  • TW
  • Linkdin
  • Email

ಸಾರಾಂಶ

ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಪ್ರಾಕೃತಿಕ ವಿಕೋಪ ಸಂಭವಿಸಬಹುದಾದ ಪ್ರದೇಶಗಳನ್ನು ಗುರುತಿಸಿದೆ. ಈ ಪ್ರದೇಶಗಳಲ್ಲಿ ಸಂಭಾವ್ಯ ಪ್ರಾಕೃತಿಕ ತೊಂದರೆ ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿದ್ಧತೆ ಆರಂಭಿಸಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಸಮುದ್ರ ತೀರವನ್ನು ಒಳಗೊಂಡಂತೆ ಪಶ್ಚಿಮ ಘಟ್ಟದಿಂದ ಆವೃತ್ತವಾದ ಪ್ರದೇಶ ದ.ಕ. ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರಾಕೃತಿಕ ಅವಘಡಗಳು ತುಸು ಜಾಸ್ತಿಯೇ ಸಂಭವಿಸುತ್ತಿವೆ. ಮಳೆಗಾಲದಲ್ಲಿ ಮಳೆಹಾನಿ ಸ್ವಾಭಾವಿಕವಾದರೆ, ಪದೇ ಪದೇ ಗುಡ್ಡ ಕುಸಿತದಂತಹ ವಿದ್ಯಮಾನಗಳು ಹೆಚ್ಚಾಗಿಯೇ ಕಾಣಿಸುತ್ತಿವೆ. ಕಳೆದ ಮಳೆಗಾಲದಲ್ಲಿ ದ.ಕ.ಜಿಲ್ಲೆಯಲ್ಲಿ ಅಲ್ಲಲ್ಲಿ ನೆರೆ ಮತ್ತು ಭೂಕುಸಿತ ಪ್ರಕರಣಗಳು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಪ್ರಾಕೃತಿಕ ವಿಕೋಪ ಸಂಭವಿಸಬಹುದಾದ ಪ್ರದೇಶಗಳನ್ನು ಗುರುತಿಸಿದೆ. ಈ ಪ್ರದೇಶಗಳಲ್ಲಿ ಸಂಭಾವ್ಯ ಪ್ರಾಕೃತಿಕ ತೊಂದರೆ ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿದ್ಧತೆ ಆರಂಭಿಸಿದೆ. 171 ಸ್ಥಳಗಳಲ್ಲಿ ಪ್ರಕೃತಿ ವಿಕೋಪ ಸವಾಲು:

ಕಂದಾಯ ಇಲಾಖೆಯ ಅಂಕಿಅಂಶಗಳು ದ.ಕ.ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಒಂಭತ್ತು ತಾಲೂಕುಗಳಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಬಹುದಾದ ಒಟ್ಟು 171 ಪ್ರದೇಶಗಳ ಪಟ್ಟಿ ಮಾಡಿದೆ. ಇವುಗಳಲ್ಲಿ ನೆರೆ ಮತ್ತು ಭೂಕುಸಿತ 74 ಕಡೆಗಳಲ್ಲಿ ಇದೆ. ಮಂಗಳೂರು ಪಾಲಿಕೆ ವ್ಯಾಪ್ತಿಯ 18 ಸೇರಿ ಒಟ್ಟು 59 ನೆರೆಪೀಡಿತ ಪ್ರದೇಶಗಳು ಇವೆ. ಕೇವಲ ಭೂಕುಸಿತ 28 ಕಡೆಗಳಲ್ಲಿ ಕಂಡುಬಂದಿದೆ.

ನೆರೆ ಮತ್ತು ಭೂಕುಸಿತ ಬಂಟ್ವಾಳದ 3 ಕಡೆ, ಮಂಗಳೂರಿನ 4, ಸುಳ್ಯ, ಕಡಬ ಮತ್ತು ಪುತ್ತೂರಿನ ತಲಾ 2 ಕಡೆ, ಬೆಳ್ತಂಗಡಿಯ 18 ಸ್ಥಳಗಳನ್ನು ಗುರುತಿಸಲಾಗಿದೆ. ಭೂಕುಸಿತ ಪ್ರದೇಶಗಳು ಬಂಟ್ವಾಳ, ಸುಳ್ಯ ಹಾಗೂ ಬೆಳ್ತಂಗಡಿಗಳಲ್ಲಿ ತಲಾ 4, ಕಡಬ ಮತ್ತು ಪುತ್ತೂರಿನಲ್ಲಿ ತಲಾ 2, ಉಳ್ಳಾಲದಲ್ಲಿ 5 ಹಾಗೂ ಮೂಡುಬಿದಿರೆಯಲ್ಲಿ 6 ಸ್ಥಳಗಳನ್ನು ಪತ್ತೆ ಮಾಡಲಾಗಿದೆ.

ಜಿಯಾಲಾಜಿಕಲ್‌ ಸರ್ವೇ ಆಫ್ ಇಂಡಿಯಾ ಹಾಗೂ ಗ್ರಾಮ ಪಂಚಾಯ್ತಿಗಳಿಂದ ಜಿಲ್ಲಾಡಳಿತ ಈ ಅಂಕಿಅಂಶ ಕಲೆ ಹಾಕಿದೆ. ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕುಗಳಲ್ಲಿ ಭೂಕುಸಿತಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಜಿಯಾಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ ಕಳೆದ ನಾಲ್ಕು ತಿಂಗಳಿಂದ ಪರಿಶೀಲನೆ ನಡೆಸುತ್ತಿದೆ. ಇನ್ನಷ್ಟೆ ಅಂತಿಮ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕಾಗಿದೆ.

ತಡೆಗೋಡೆ ರಚನೆಗೆ ಶಿಫಾರಸು:

ಸಂಭಾವ್ಯ ಭೂಕುಸಿತ ಪ್ರದೇಶಗಳಲ್ಲಿ ವಾಸವಿರುವ ಕುಟುಂಬಗಳನ್ನು ಮಳೆಗಾಲಕ್ಕೆ ಮುನ್ನ ಸ್ಥಳಾಂತರಿಸಬೇಕು. ಅವರಿಗೆ ಪರ್ಯಾಯ ವಾಸ್ತವ್ಯ ಕಲ್ಪಿಸಬೇಕು. ಗುಡ್ಡ ಪ್ರದೇಶವನ್ನು ಇಳಿಜಾರು ಮಾಡಬೇಕು. ಸಮರ್ಪಕ ಚರಂಡಿ ವ್ಯವಸ್ಥೆ ಮಾಡಬೇಕು. ರಸ್ತೆಗಳ ಇಕ್ಕೆಲಗಳಲ್ಲಿ ನೀರು ಸರಾಗ ಹರಿವಿಗೆ ಆಸ್ಪದ ಇರಬೇಕು ಇತ್ಯಾದಿ ಮುಂಜಾಗ್ರತಾ ಕ್ರಮಗಳನ್ನು ಜಿಯಾಲಾಜಿಕಲ್‌ ಸರ್ವೇ ಆಫ್ ಇಂಡಿಯಾ ಜಿಲ್ಲಾಡಳಿತಕ್ಕೆ ಸಲ್ಲಿಸಿದ ವರದಿಯಲ್ಲಿ ಶಿಫಾರಸು ಮಾಡಿದೆ. ಇದೇ ವೇಳೆ ಕಳೆದ ವರ್ಷ ಬಂಟ್ವಾಳದ ಅಮ್ಟಾಡಿ ಬಳಿ ಗುಡ್ಡಕುಸಿತದಿಂದ ತಾಯಿ ಮೃತಪಟ್ಟು ಮಗಳು ಗಾಯಗೊಂಡ ಘಟನೆಯನ್ನು ಉಲ್ಲೇಖಿಸಿದೆ. ಬಂಟ್ವಾಳದ ಗೂಡಿನಬಳಿಯೂ ಇಂಥದ್ದೇ ಘಟನೆ ಸಂಭವಿಸಿದ್ದು, ಅಲ್ಲಿ ಕೂಡ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ವರದಿಯಲ್ಲಿ ಸೂಚಿಸಲಾಗಿದೆ.

ಜಿಲ್ಲಾಡಳಿತಕ್ಕೆ ದೊಡ್ಡ ಸವಾಲು

ನೆರೆ ಹಾನಿ ಹಾಗೂ ಗುಡ್ಡ ಕುಸಿತ ಘಟನೆಗಳು ಪ್ರತಿ ಮಳೆಗಾಲದಲ್ಲಿ ಸಂಭವಿಸುತ್ತಿದ್ದರೂ, ಸಾಕಷ್ಟು ಮುಂಜಾಗ್ರತಾ ಕ್ರಮ ಮಾತ್ರ ಇನ್ನೂ ಆಗಿಲ್ಲ.

ಜಿಲ್ಲಾಡಳಿತದ ಪ್ರಾಕೃತಿಕ ವಿಕೋಪ ಖಾತೆಯಲ್ಲಿ 7 ಕೋಟಿ ರು. ಹಣ ಇದೆ. ಆದರೆ ಅದನ್ನು ಹೇಗೆ ಬಳಕೆ ಮಾಡಬೇಕು ಎಂದು ಸರ್ಕಾರ ಮಾರ್ಗದರ್ಶನ ಮಾಡಿಲ್ಲ. ಇದರಿಂದಾಗಿ ಜಿಲ್ಲಾಡಳಿತ ಕೂಡ ಮುಂಜಾಗ್ರತಾ ಕ್ರಮದ ವರದಿ ತನ್ನಲ್ಲಿ ಇದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದೆ.

ಮಳೆಗಾಲಕ್ಕೆ ಇನ್ನು ಒಂದೇ ತಿಂಗಳು ಬಾಕಿ ಉಳಿದಿದೆ. ಅದಕ್ಕೂ ಮೊದಲೇ ಒಂದಷ್ಟು ಮುಂಜಾಗ್ರತಾ ಕಾಮಗಾರಿಗಳನ್ನು ಕೈಗೊಂಡರೆ ಅಷ್ಟೇನೂ ತೊಂದರೆಯಾಗದು. ಆದರೆ ದುರಂತದ ಬಳಿಕವೇ ಕ್ರಮ ಎಂದು ಕಾದು ಕುಳಿತರೆ ಏನೂ ಮಾಡಲಾಗದು ಎನ್ನುವುದು ಸಾರ್ವಜನಿಕರ ಮಾತು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ 10-15 ವರ್ಷಗಳಿಂದ ಮಳೆ ನೀರು ಹರಿವಿಗೆ ತಡೆ ಒಡ್ಡಿರುವುದು, ಬೆಟ್ಟಗುಡ್ಡಗಳ ನಾಶವೇ ಪ್ರಾಕೃತಿಕ ಏರುಪೇರಿಗೆ ಕಾರಣ. ಮಳೆಗಾಲದಲ್ಲಿ ಭೂಕುಸಿತಕ್ಕೆ ನೀರು ಸರಾಗ ಹರಿದು ಹೋಗದಿರುವುದೇ ಕಾರಣವಾಗಿದೆ. ಇಳಿಜಾರಿನಲ್ಲಿ ತಡೆಗೋಡೆ ಬದಲು ಕನಿಷ್ಠ ಜಲ್ಲಿಕಲ್ಲು ಅಥವಾ ಹುಲ್ಲಿನ ಪದರ ಹಾಕಿ ಮುಚ್ಚಿದರೆ, ಮಳೆ ನೀರನ್ನು ಹೀರಿಕೊಂಡು ಕುಸಿತಕ್ಕೆ ತಡೆಯಾಗುತ್ತದೆ. ಇಂತಹ ವಿಧಾನ ಅನುಸರಿಸಲು ಜಿಲ್ಲಾಡಳಿತ ಮುಂದಾಗಬೇಕು.

-ದಿನೇಶ್‌ ಹೊಳ್ಳ, ಸಂಚಾಲಕ, ಸಹ್ಯಾದ್ರಿ ಸಂಚಯಪ್ರಾಕೃತಿಕ ವಿಕೋಪ ಖಾತೆಯಲ್ಲಿ 7 ಕೋಟಿ ರು. ನಿಧಿ ಮೀಸಲಾಗಿದೆ. ಆದರೆ ಅದರ ಬಳಕೆಗೆ ನಿರ್ದಿಷ್ಟ ಮಾನದಂಡವನ್ನು ಸರ್ಕಾರ ಇನ್ನೂ ನೀಡಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಕೂಡ ಬರೆಯಲಾಗಿದೆ. ಈ ಬಾರಿ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಕುರಿತಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲು ಮೇ 3ರಂದು ಸಭೆ ಕರೆಯಲಾಗಿದೆ.

-ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.