ಮಳೆಗಾಲ ಅವಧಿಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಲೋಪ ಕಂಡು ಬಂದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಎಚ್ಚರಿಕೆ ನೀಡಿದ್ದಾರೆ.
ಕುಶಾಲನಗರ: ಮಳೆಗಾಲ ಅವಧಿಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಲೋಪ ಕಂಡು ಬಂದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಎಚ್ಚರಿಕೆ ನೀಡಿದ್ದಾರೆ. 2026- 27ನೇ ಸಾಲಿನ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಕೃತಿ ವಿಕೋಪ ನಿರ್ವಹಣೆಗಾಗಿ ತೆಗೆದುಕೊಂಡಿ ರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ನಡೆದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.2018-19 ರ ಅವಧಿಯಲ್ಲಿ ನಡೆದ ಪ್ರಕೃತಿ ವಿಕೋಪ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅನಾಹುತ ನಡೆಯದಂತೆ ಎಚ್ಚರ ವಹಿಸುವುದು ಮತ್ತು ಅಗತ್ಯ ಪೂರ್ವ ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಶಾಲನಗರದಲ್ಲಿ ಕಾವೇರಿ ಹಾರಂಗಿ ಸಂಗಮದಿಂದ ಉಂಟಾಗುವ ಪ್ರವಾಹ ನಿಯಂತ್ರಣ ಸೇರಿದಂತೆ ನೆಲ್ಯ ಹುದಿಕೇರಿಯಿಂದ ಶಿರಂಗಾಲದ ತನಕ ಎಲ್ಲ ಗ್ರಾಮ ವ್ಯಾಪ್ತಿಯಲ್ಲಿ ಸ್ಥಳೀಯ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸಬೇಕು. ಆ ಮೂಲಕ ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯ ಬಿದ್ದರೆ ಪ್ರವಾಹಕ್ಕೆ ತುತ್ತಾಗುವ ಸಂತ್ರಸ್ತರಿಗೆ ಕಾಳಜಿ ಕೇಂದ್ರ ಮತ್ತು ತಕ್ಷಣ ನೀಡಬೇಕಾದ ಆಹಾರ ಸಾಮಗ್ರಿ ಬಗ್ಗೆ ಈಗಲೇ ಸಿದ್ಧರಾಗುವಂತೆ ಶಾಸಕರು ಸೂಚಿಸಿದರು.
ಕಾವೇರಿ ನದಿ ತಟದ ಮನೆಗಳ ಮಾಲೀಕರಿಗೆ ಹಾಗೂ ನಿವಾಸಿಗಳಿಗೆ ಮುನ್ನೆಚ್ಚರಿಕೆ ಬಗ್ಗೆ ನೋಟಿಸ್ ನೀಡಬೇಕು. ಹವಾಮಾನ ಮುನ್ಸೂಚನೆ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಹಿಂದಿನ ವರ್ಷಗಳಲ್ಲಿ ಮಳೆಯಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳು ಹಾಗೂ ಮುಳುಗಡೆಯಾಗುವ ನದಿ ತಟದ ನಾಗರಿಕರನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು. ನೋಡಲ್ ಅಧಿಕಾರಿಗಳು ಈ ಬಗ್ಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳೊಂದಿಗೆ ಸಂಪರ್ಕ ಇಟ್ಟುಕೊಂಡು ದಿನನಿತ್ಯದ ವರದಿ ಸಲ್ಲಿಸುವಂತೆ ಶಾಸಕರು ಸೂಚಿಸಿದರು.ಮಳೆಗಾಲ ಅವಧಿಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡುವ ಸಂದರ್ಭ ಸ್ಥಳೀಯ ಹವಾಮಾನ ಗಮನದಲ್ಲಿ ಇಟ್ಟುಕೊಂಡು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಅನವಶ್ಯಕ ರಜೆಗಳನ್ನು ತಪ್ಪಿಸುವ ಕೆಲಸವಾಗಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಳೆಗಾಲಕ್ಕೆ ಅಗತ್ಯವಾಗಿ ಬೇಕಾಗಿರುವ ಟಾರ್ಪಾಲ್ ಗಳನ್ನು ಖರೀದಿಸುವುದು, ಕುಸಿತಕ್ಕೊಳಗಾಗುವ ಮನೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವುದು ಮತ್ತು ರಸ್ತೆ ದುರಸ್ತಿ ಸೇರಿದಂತೆ ಚರಂಡಿಗಳ ನಿರ್ವಹಣೆ ಮಾಡುವುದು, ಈ ಬಗ್ಗೆ ಸಮಗ್ರ ವರದಿಯನ್ನು ಜೂ. 16ರೊಳಗೆ ತನಗೆ ನೀಡುವಂತೆ ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.ಸರಕಾರದಿಂದ ಪರ್ಯಾಯ ಮನೆ ನೀಡಿದ ಮನೆ ಮಾಲೀಕರಿಗೆ ಹಳೆಯ ಮನೆಗೆ ಮತ್ತೆ ತೆರಳದಂತೆ ಎಚ್ಚರ ವಹಿಸಿ ಅಂತಹ ಮನೆಗಳನ್ನು ತೆರವುಗೊಳಿಸಿ ಸ್ಥಳವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕು. ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ಮತ್ತು ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯದ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಬ್ಬಾಲೆ ಶನಿವಾರ ಸಂತೆ ರಸ್ತೆ ಬದಿಯಲ್ಲಿ ಕಸ ರಾಶಿ ಹಾಕುವುದನ್ನು ತಕ್ಷಣ ತಪ್ಪಿಸಬೇಕು ಈ ಬಗ್ಗೆ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಮತ್ತು ಕಸ ಹಾಕುವ ಜನರನ್ನು ಪತ್ತೆ ಹಚ್ಚಿ ದಂಡ ವಿಧಿಸುವಂತೆ ಅಲ್ಲಿನ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು. ಕುಶಾಲನಗರದಲ್ಲಿ ನೂತನವಾಗಿ ನೇಮಕವಾಗಿರುವ ತಾಪಂ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ಅವರಿಗೆ ಸಮರ್ಪಕವಾಗಿ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಗ್ರಾಪಂ ಮೂಲಕ ಕಾರ್ಯ ಯೋಜನೆ ರೂಪಿಸುವಂತೆ ಶಾಸಕರು ಗಮನಕ್ಕೆ ತಂದರು.ಕೂಡಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಯಾವುದೇ ಮಾಹಿತಿ ಇಲ್ಲದೆ ಸಭೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಶಾಸಕರು ತರಾಟೆಗೆ ತೆಗೆದುಕೊಂಡರು.
ವಿದ್ಯುತ್ ಇಲಾಖೆಯ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಯ ಮೇಲ್ದರ್ಜೆ ಸಲುವಾಗಿ ಕೊಡಗು ಜಿಲ್ಲೆಗೆ 100 ಕೋಟಿ ರು. ಬಿಡುಗಡೆಯಾಗಿದ್ದು, ಕುಶಾಶನಗರ ತಾಲೂಕಿಗೆ 40 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಸಲು ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ, ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿ ಉತ್ತಮ ಮಟ್ಟದ ಸೇವೆಯನ್ನು ಗ್ರಾಹಕರಿಗೆ ನೀಡಬೇಕು ಎಂದು ಶಾಸಕರು ಹೇಳಿದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ತಹಸೀಲ್ದಾರ್ ಕೃಷ್ಣಮೂರ್ತಿ ಕಾರ್ಯನಿರ್ವಾಣಾಧಿಕಾರಿ ಅಪ್ಪಣ್ಣ, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಇದ್ದರು. ಕುಶಾಲನಗರ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.