ಸಾರಾಂಶ
ಸಾಗರ ಪಟ್ಟಣದ ಕೋರ್ಟ್ ರಸ್ತೆಯಲ್ಲಿ ಸುಮಾರು ₹೧೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಿನಿ ವಿಧಾನಸೌಧ ಮಾ.೧೩ರಂದು ಉದ್ಘಾಟನೆ ಆಗಲಿದೆ. ಇದರ ಜೊತೆಗೆ ಮಿನಿ ವಿಧಾನಸೌಧದ ಮುಂದುವರಿದ ಕಾಮಗಾರಿಗೆ ₹೫.೨೦ ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸಾಗರದಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಸಾಗರ
ಪಟ್ಟಣದ ಕೋರ್ಟ್ ರಸ್ತೆಯಲ್ಲಿ ಸುಮಾರು ₹೧೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಿನಿ ವಿಧಾನಸೌಧ ಮಾ.೧೩ರಂದು ಉದ್ಘಾಟನೆ ಆಗಲಿದೆ. ಇದರ ಜೊತೆಗೆ ಮಿನಿ ವಿಧಾನಸೌಧದ ಮುಂದುವರಿದ ಕಾಮಗಾರಿಗೆ ₹೫.೨೦ ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ನೂತನ ಮಿನಿ ವಿಧಾನಸೌಧದಲ್ಲಿ ಭಾನುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಬೇರೆ ಬೇರೆ ಇಲಾಖೆ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ಒಂದೇ ಸೂರಿನಡಿ ಬಹುತೇಕ ಕಚೇರಿಗಳು:
ಮಿನಿ ವಿಧಾನಸೌಧದ ಕೆಳ ಅಂತಸ್ತಿನಲ್ಲಿ ಶಾಸಕರ ಕಚೇರಿ, ತಹಸೀಲ್ದಾರ್ ಗ್ರೇಡ್-೨ ಕಚೇರಿ, ಪಡಶಾಲೆ ಕೊಠಡಿ, ಖಜಾನೆ, ನಿರೀಕ್ಷಣಾ ಕೊಠಡಿ ಕಾರ್ಯನಿರ್ವಹಿಸಲಿದೆ. ಮೊದಲ ಮಹಡಿಯಲ್ಲಿ ತಹಸೀಲ್ದಾರ್ ಕಚೇರಿ, ನ್ಯಾಯಾಲಯ, ಸಿಬ್ಬಂದಿ ಕೊಠಡಿ, ಶಿರಸ್ತೇದಾರ್ ಕೊಠಡಿ, ದಾಖಲೆ ಕೊಠಡಿ, ಚುನಾವಣಾ ಶಾಖೆ, ಹಕ್ಕು ದಾಖಲೆ ದಾಸ್ತಾನು ಶಾಖೆ, ಎರಡನೇ ಮಹಡಿಯಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಮೀಟಿಂಗ್ ಹಾಲ್, ಬಗರ್‌ಹುಕುಂ ಶಾಖೆ ಹೀಗೆ ಬಹುತೇಕ ಕಚೇರಿಗಳು ಒಂದೇ ಸಂಕೀರ್ಣದಲ್ಲಿ ಬರಲಿದೆ ಎಂದು ಹೇಳಿದರು.ಗ್ರಿಡ್‌ಗಳು, ಶಾಲೆಗಳ ಉದ್ಘಾಟನೆ:
ಇದೇ ದಿನ ತಾಲೂಕಿನ ನಾಡ ಮಂಚಾಲೆಯಲ್ಲಿ ₹೬೯ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ೨೨೦ ಕೆ.ವಿ. ಗ್ರಿಡ್ ಲೋಕಾರ್ಪಣೆ ಮಾಡಲಾಗುತ್ತದೆ. ಬಳಸಗೋಡಿನಲ್ಲಿ ಸಹ ಗ್ರಿಡ್ ಲೋಕಾರ್ಪಣೆ ನಡೆಯಲಿದೆ. ಆವಿನಹಳ್ಳಿಯಲ್ಲಿ ₹೩.೮೦ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಾಜಪೇಯಿ ಮಾದರಿ ವಸತಿ ಶಾಲೆ ಸಂಕೀರ್ಣ ಲೋಕಾರ್ಪಣೆ, ಗೆಣಸಿನಕುಣಿಯಲ್ಲಿ ೯.೩೬ ಎಕರೆ ನಿವೇಶನದಲ್ಲಿ ₹೧.೮೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.ಠಾಣೆಗಳ ಉದ್ಘಾಟನೆ-ಶಂಕುಸ್ಥಾಪನೆ:
ಮಾ.೧೨ರಂದು ಆನಂದಪುರದಲ್ಲಿ ₹೧.೮೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪೊಲೀಸ್ ಠಾಣೆ ಉದ್ಘಾಟನೆಯಾಗಲಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ₹೧.೯೦ ಕೋಟಿ ವೆಚ್ಚದಲ್ಲಿ ಮಂಜೂರು ಮಾಡಿರುವ ಕಾರ್ಗಲ್ ಪೊಲೀಸ್ ಠಾಣೆಯ ಶಂಕುಸ್ಥಾಪನೆ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.ಅಭಿವೃದ್ಧಿಗೆ ಅನುದಾನ:
ಸಾಗರ ಪಟ್ಟಣದ ಅಣಲೆಕೊಪ್ಪ ಗ್ರಂಥಾಲಯ ಅಭಿವೃದ್ಧಿಗೆ ₹೫೦ ಲಕ್ಷ, ಆನಂದಪುರ ಆಸ್ಪತ್ರೆ ಅಭಿವೃದ್ಧಿಗೆ ₹೬೦ ಲಕ್ಷ, ಪಟ್ಟಣದ ತಾಯಿಮಗು ಆಸ್ಪತ್ರೆ ಆಭಿವೃದ್ಧಿಗೆ ₹೧.೪೫ ಲಕ್ಷ, ಉಪವಿಭಾಗೀಯ ಆಸ್ಪತ್ರೆಗೆ ₹೧.೬೦ ಲಕ್ಷ, ಗ್ರಾಮೀಣ ಆಸ್ಪತ್ರೆ ಅಭಿವೃದ್ಧಿಗೂ ಹೆಚ್ಚಿನ ಅನುದಾನ ಬಂದಿದೆ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣದ ಮೀನು ಮಾರುಕಟ್ಟೆ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಸಚಿವರು ₹೧.೨೦ ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.ಈ ಸಂದರ್ಭ ಪ್ರಮುಖರಾದ ಸೋಮಶೇಖರ ಲ್ಯಾವಿಗೆರೆ, ಟಿ.ಪಿ.ರಮೇಶ್, ಚೇತನರಾಜ್ ಕಣ್ಣೂರು, ಆನಂದ್ ಹರಟೆ, ಎಲ್.ಚಂದ್ರಪ್ಪ, ಗಣಪತಿ ಮಂಡಗಳಲೆ, ಮದನ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
- - - -೧೦ಕೆ.ಎಸ್.ಎ.ಜಿ.೧:ಸಾಗರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಮಿನಿ ವಿಧಾನಸೌಧ ಕಟ್ಟಡದ ಲೋಕಾರ್ಪಣೆಯ ಅಂತಿಮ ಹಂತದ ಸಿದ್ಧತೆಯನ್ನು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಭಾನುವಾರ ಪರಿಶೀಲಿಸಿದರು.