ನಟ ದರ್ಶನ್ ಬಿಡುಗಡೆಗಾಗಿ ಕೊಲ್ಲೂರಿನಲ್ಲಿ ಪತ್ನಿ ವಿಜಯಲಕ್ಷ್ಮಿಯಿಂದ ನವ ಚಂಡಿಕಾ ಯಾಗ

| Published : Jul 27 2024, 01:01 AM IST / Updated: Jul 27 2024, 11:22 AM IST

ನಟ ದರ್ಶನ್ ಬಿಡುಗಡೆಗಾಗಿ ಕೊಲ್ಲೂರಿನಲ್ಲಿ ಪತ್ನಿ ವಿಜಯಲಕ್ಷ್ಮಿಯಿಂದ ನವ ಚಂಡಿಕಾ ಯಾಗ
Share this Article
  • FB
  • TW
  • Linkdin
  • Email

ಸಾರಾಂಶ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಪ್ತರೊಂದಿಗೆ ಭೇಟಿ ನೀಡಿದ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ, ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು, ತಮ್ಮ ಪತಿಯ ಶೀಘ್ರ ಬಿಡುಗಡೆಗಾಗಿ ಪ್ರಾರ್ಥನೆ ಸಲ್ಲಿಸಿ, ನವ ಚಂಡಿಕಾ ಯಾಗ ಹಾಗೂ ಚಂಡಿಕಾ ಪಾರಾಯಣ ಸಂಕಲ್ಪದಲ್ಲಿ ಭಾಗಿಯಾದರು.

 ಕುಂದಾಪುರ : ಕೊಲೆ ಪ್ರಕರಣದ ಆರೋಪ ಮೇಲೆ ಕಳೆದ ಒಂದೂವರೆ ತಿಂಗಳಿಂದ ಜೈಲಿನಲ್ಲಿರುವ ಚಲನಚಿತ್ರ ನಟ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮೀ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶುಕ್ರವಾರ ನವ ಚಂಡಿಕಾ ಯಾಗ ನಡೆಸಿದರು.ಗುರುವಾರ ಸಂಜೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಪ್ತರೊಂದಿಗೆ ಭೇಟಿ ನೀಡಿದ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ, ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು, ತಮ್ಮ ಪತಿಯ ಶೀಘ್ರ ಬಿಡುಗಡೆಗಾಗಿ ಪ್ರಾರ್ಥನೆ ಸಲ್ಲಿಸಿ, ನವ ಚಂಡಿಕಾ ಯಾಗ ಹಾಗೂ ಚಂಡಿಕಾ ಪಾರಾಯಣ ಸಂಕಲ್ಪದಲ್ಲಿ ಭಾಗಿಯಾದರು.

ಶುಕ್ರವಾರ ಬೆಳಗ್ಗೆ ಕ್ಷೇತ್ರದ ಅರ್ಚಕ ಎನ್‌.ನರಸಿಂಹ ಅಡಿಗ ಹಾಗೂ ಎನ್.ಸುಬ್ರಮಣ್ಯ ಅಡಿಗ ಅವರ ನೇತೃತ್ವದಲ್ಲಿ ನಡೆದ ನವ ಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು, ಶ್ರೀದೇವಿಯ ದರ್ಶನ ಮಾಡಿ, ಪ್ರಸಾದ ಸ್ವೀಕರಿಸಿ ತೆರಳಿದ್ದಾರೆ.

ಪೂಜೆಯ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿದ್ದ ವಿಜಯಲಕ್ಷ್ಮೀ ಅವರು ಬಿಡುವಿನ ಸಂದರ್ಭದಲ್ಲಿ ದೂರವಾಣಿ ಸಂಭಾಷಣೆಯಲ್ಲಿಯೇ ನಿರತರಾಗಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದರಾದರೂ, ಯಾವುದೇ ಪ್ರತಿಕ್ರಿಯೆ ನೀಡದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ.----ಚಂಡಿಕಾ ಹೋಮದ ಮಹತ್ವ

ಮೂಕಾಂಬಿಕಾ ಕ್ಷೇತ್ರದಲ್ಲಿ ಚಂಡಿಕಾ ಹೋಮಕ್ಕೆ ಬಹಳ ಮಹತ್ವ ಇದೆ. ಪ್ರತಿದಿನ 8ರಿಂದ 10 ಚಂಡಿಕಾ ಹೋಮಗಳು ನಡೆಯುತ್ತದೆ. ಹರಕೆ ಅಥವಾ ಇಷ್ಟಾರ್ಥ ಸಿದ್ಧಿಗೆ ಕ್ಷೇತ್ರದಲ್ಲಿ ವಿಶೇಷ ನವಚಂಡಿಕಾ ಯಾಗವನ್ನು ಭಕ್ತರು ಸಲ್ಲಿಕೆ ಮಾಡುತ್ತಾರೆ. ಶುಕ್ರವಾರ ದೇವಿಯ ಸನ್ನಿಧಾನದಲ್ಲಿ ಚಂಡಿಕಾ ಹೋಮ ನೆರವೇರಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತದೆ. ಸಂಕಟಗಳು ದೂರವಾಗಿ ಮನೋಭಿಲಾಷೆಗಳು ನೆರವೇರುತ್ತದೆ ಎಂಬ ನಂಬಿಕೆ ಇದೆ.