ಗ್ರಾಮೀಣ ಪ್ರದೇಶದಲ್ಲಿ ಅನಾರೋಗ್ಯ ಪೀಡಿತರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸುವುದೆಂದರೆ ಬಹು ಪ್ರಯಾಸದ ಕೇಲಸವೇ ಆಗಿರುತ್ತದೆ. ಇದನ್ನು ನಿವಾರಿಸಲು ಪದ್ಮುಂಜದ ಯುವಕರು ಮಾದರಿ ಕೆಲಸಕ್ಕೆ ಇಳಿದಿದ್ದಾರೆ.
ಬೆಳ್ತಂಗಡಿ : ಗ್ರಾಮೀಣ ಪ್ರದೇಶದಲ್ಲಿ ಅನಾರೋಗ್ಯ ಪೀಡಿತರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸುವುದೆಂದರೆ ಬಹು ಪ್ರಯಾಸದ ಕೇಲಸವೇ ಆಗಿರುತ್ತದೆ. ಇದನ್ನು ನಿವಾರಿಸಲು ಪದ್ಮುಂಜದ ಯುವಕರು ಮಾದರಿ ಕೆಲಸಕ್ಕೆ ಇಳಿದಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ, ದುರ್ಘಟನೆ ಸಂಭವಿಸಿದಾಗ, ತೀವ್ರ ಅನಾರೋಗ್ಯಕ್ಕೆ ಒಳಗಾದಾಗ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದೆ ಪರದಾಟ ಅನುಭವಿಸಿದವರಿಗೆ ಗೊತ್ತು. ನಗರದಿಂದ ಆಂಬ್ಯುಲೆನ್ಸ್ ಬರುವುದನ್ನೇ ಕಾಯಬೇಕಾದ ಅನಿವಾರ್ಯತೆ ಕೆಲವೊಮ್ಮೆ ಜೀವಕ್ಕೆ ಕುತ್ತು ತರುವ ಆತಂಕ ಸೃಷ್ಟಿಸುತ್ತದೆ. ಇಂತಹ ಸಮಸ್ಯೆಯನ್ನು ಮನಗಂಡ ಕಣಿಯೂರು ಗ್ರಾಮದ ಪದ್ಮುಂಜ ಮಲೆಂಗಲ್ಲಿನ ನವಕೇಸರಿ ಹೆಸರಿನ ಯುವಕರ ತಂಡ ಸ್ವಯಂಪ್ರೇರಣೆಯಿಂದ 10 ಲಕ್ಷ ರು. ವೆಚ್ಚದ ಆಂಬ್ಯುಲೆನ್ಸ್ ಖರೀದಿಸುವ ಮೂಲಕ ಇಡೀ ಊರಿನ ಪಾಲಿಗೆ ಸಂಜೀವಿನಿಯಾಗಿದೆ.ಪದ್ಮುಂಜ ಮಲೆಂಗಲ್ಲು ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ಅಪಘಾತ ಅಥವಾ ತುರ್ತು ಆರೋಗ್ಯ ಸಮಸ್ಯೆ ಎದುರಾದರೆ ಆಂಬ್ಯುಲೆನ್ಸ್ಗಾಗಿ ಉಜಿರೆ ಅಥವಾ ಉಪ್ಪಿನಂಗಡಿಯಿಂದ ಬರಬೇಕಾದ ಪರಿಸ್ಥಿತಿಯಿತ್ತು. ಸುಮಾರು 15 ಕಿ.ಮೀ. ದೂರದಿಂದ ವಾಹನ ಬರುವವರೆಗೆ ಕಾಯುವುದು ಅನಿವಾರ್ಯವಾಗಿತ್ತು. ಕೆಲವೊಮ್ಮೆ ಆಂಬ್ಯುಲೆನ್ಸ್ ಬರುವಷ್ಟರಲ್ಲಿ ಪರಿಸ್ಥಿತಿ ಕೈಮೀರುವ ಸಾಧ್ಯತೆಯೂ ಇತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನವಕೇಸರಿ ತಂಡ ಪರಸ್ಪರ ಚರ್ಚಿಸಿ ಊರಿಗೊಂದು ಸ್ವಂತ ಆಂಬ್ಯುಲೆನ್ಸ್ ಇರಬೇಕು ಎಂಬ ನಿರ್ಧಾರಕ್ಕೆ ಬಂದರು. ಅದರಂತೆ ಎಲ್ಲರೂ ಒಗ್ಗೂಡಿ ಹಣ ಸಂಗ್ರಹಿಸಿ ಆಂಬ್ಯುಲೆನ್ಸ್ ಖರೀದಿಸುವ ಸಾಹಸಕ್ಕೆ ಮುಂದಾದರು. ಆಂಬ್ಯುಲೆನ್ಸ್ ಖರೀದಿಸಲು ಒಟ್ಟು 10 ಲಕ್ಷ ರು. ವೆಚ್ಚವಾಗಿದೆ. ಯುವಕರ ತಂಡ ತನ್ನಿಂದ ಸಾಧ್ಯವಾದಷ್ಟು ಹಣವನ್ನು ಹೊಂದಿಸಿದರೂ, ಸಂಪೂರ್ಣ ಮೊತ್ತ ಸಂಗ್ರಹಿಸುವುದು ಸುಲಭವಾಗಿರಲಿಲ್ಲ. ಹಣದ ಕೊರತೆಯನ್ನು ನೀಗಿಸಲು 3 ಲಕ್ಷ ರು. ಸಾಲ ಪಡೆದು ಆಂಬ್ಯುಲೆನ್ಸ್ ಖರೀದಿಸುವ ಮೂಲಕ ತಮ್ಮ ಕನಸನ್ನು ನನಸಾಗಿಸಿದ್ದಾರೆ.ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಚಾಲನೆಗೆ ಪ್ರತ್ಯೇಕ ಚಾಲಕನನ್ನು ಅವಲಂಬಿಸದೆ, ಈ ಆರು ಮಂದಿಯೇ ಜವಾಬ್ದಾರಿ ಹಂಚಿಕೊಂಡಿದ್ದಾರೆ. ತಮ್ಮ ದೈನಂದಿನ ಕೆಲಸ ಕಾರ್ಯಗಳ ನಡುವೆಯೇ ಬಿಡುವು ಮಾಡಿಕೊಂಡು ಒಬ್ಬೊಬ್ಬರಾಗಿ ಚಾಲನಾ ಸೇವೆ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದ ಯಾವುದೇ ಸಮಯದಲ್ಲಿ ತುರ್ತು ಕರೆ ಬಂದರೂ ಸಾಧ್ಯವಾದಷ್ಟು ಶೀಘ್ರ ಸ್ಪಂದಿಸಲು ಅನುಕೂಲವಾಗಿದೆ. ಮಲೆಂಗಲ್ಲುವಿನ ಉಮಾಮಹೇಶ್ವರ ಭಜನಾ ಮಂದಿರದಲ್ಲಿ ಸಣ್ಣ ಶೆಡ್ ನಿರ್ಮಿಸಿ, ಆಂಬ್ಯುಲೆನ್ಸ್ ನಿಲುಗಡೆ ತಾಣ ಮಾಡಿದ್ದಾರೆ. ಆಂಬ್ಯುಲೆನ್ಸ್ನಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಹಾಗೂ ಪ್ರಥಮ ಚಿಕಿತ್ಸೆಗೆ ಅಗತ್ಯವಾದ ಸೌಲಭ್ಯ ಕಲ್ಪಿಸಲಾಗಿದೆ.ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸಿಗದೆ ಜನರು ಎದುರಿಸುತ್ತಿದ್ದ ಸಮಸ್ಯೆಯನ್ನು ಕಣ್ಣಾರೆ ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮೂರಿನ ಜನರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ನವ ಕೇಸರಿ ತಂಡದ ಸದಸ್ಯರೆಲ್ಲರೂ ಸೇರಿ ಆಂಬ್ಯುಲೆನ್ಸ್ ಖರೀದಿಸುವ ನಿರ್ಧಾರ ಕೈಗೊಂಡೆವು. ಹಣದ ಕೊರತೆಯಿದ್ದರೂ ಸಾಲ ಪಡೆದು ಈ ಕಾರ್ಯ ಪೂರ್ಣಗೊಳಿಸಿದ್ದೇವೆ. ಇದು ನಮ್ಮ ತಂಡದ ಸೇವಾ ಕಾರ್ಯ ಮಾತ್ರವಲ್ಲ, ಇಡೀ ಊರಿನ ಆಸ್ತಿಯಾಗಿದೆ. ತುರ್ತು ಸಂದರ್ಭದಲ್ಲಿ ಯಾವುದೇ ಕುಟುಂಬಕ್ಕೂ ನೆರವು ಸಿಗಬೇಕು ಎನ್ನುವುದೇ ನಮ್ಮ ಆಶಯ.
। ಶರತ್ ಪದ್ಮುಂಜ ನವಕೇಸರಿ ತಂಡದ ಸದಸ್ಯ