ಅನುಮತಿ ಇಲ್ಲದೆ ನವೋದಯ ಕೋಚಿಂಗ್‌: ತರಾಟೆ

| Published : Jul 26 2024, 01:42 AM IST

ಸಾರಾಂಶ

ಅನುಮತಿ ಪಡೆಯದೇ ನವೋದಯ ಕೋಚಿಂಗ್ ನಡೆಸುತ್ತಿದ್ದ ವಿದ್ಯಾಜ್ಯೋತಿ ಕಿರಿಯ ಪ್ರಾಥಮಿಕ ಶಾಲೆ ಆಡಳಿತ ಮಂಡಳಿಯನ್ನು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಳ ತರಾಟೆಗೆ ತೆಗೆದುಕೊಂಡರು.

ನವಲಗುಂದ:

ತಾಲೂಕಿನ ಆರೇಕುರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರ, ಯಮನೂರು ಗ್ರಾಮ ಪಂಚಾಯಿತಿ, ಮೊರಾರ್ಜಿ ವಸತಿ ಶಾಲೆ, ನವಲಗುಂದ ಜನಸ್ನೇಹಿ ಪೋಲಿಸ್ ಠಾಣೆಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಳ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಅನುಮತಿ ಪಡೆಯದೆ ನವೋದಯ ಕೋಚಿಂಗ್‌ ನೀಡುತ್ತಿದ್ದ ವಿದ್ಯಾಜ್ಯೋತಿ ಕಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಮಾತನಾಡಿದ ಶೇಖರಗೌಡ ಜಿ. ರಾಮತ್ನಳ, ಯಮನೂರು ಗ್ರಾಪಂಗೆ ಬರುವ ಎಲ್ಲ ಅಂಗನವಾಡಿ ಮತ್ತು ಶಾಲೆಗಳ ಮಕ್ಕಳ ಅಂಕಿ-ಸಂಖ್ಯೆ, ಮಕ್ಕಳ ಸಹಾಯವಾಣಿ, ಸಲಹಾ ಪೆಟ್ಟಿಗೆ ಹಾಗೂ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚನೆ, ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಸಿದ ಮಾಹಿತಿ ಪಡೆದರು. ಇನ್ನು ಮಕ್ಕಳಿಗೆ ಸಂಬಂಧಿಸಿದ ಅನುಷ್ಠಾನಗಳಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ತಮ್ಮ ವ್ಯಾಪ್ತಿಗೆ ಬರುವ ಎಲ್ಲ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಪಿಡಿಒಗೆ ಎಚ್ಚರಿಕೆ ನೀಡಿದರು.ನಂತರ ಬಿಇಒಗೆ ತಾಲೂಕಿನ ಎಲ್ಲ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ 2016 ಅಳವಡಿಸಲು 15 ದಿನದೊಳಗೆ ಕ್ರಮವಹಿಸಿ ಮಾಹಿತಿ ಸಲ್ಲಿಸಬೇಕು ಎಂದರು. ತಾಪಂ ಇಒ ಭಾಗ್ಯಶ್ರೀ ಜಾಗೀರದಾರ, ತಾಲೂಕಿನ ಪಿಡಿಒ ಸಭೆ ಕರೆದು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಪಂಚಾಯಿತಿ ಮಟ್ಟದಲ್ಲಿ ಸಲಹಾ ಸಮಿತಿ ರಚನೆ ಕುರಿತು ಅನುಷ್ಠಾನಗೊಳಿಸಿ ವರದಿ ನೀಡಲಾಗುವುದು ಎಂದು ತಿಳಿಸಿದರು.

ನಂತರ ಪಟ್ಟಣದ ವಿದ್ಯಾಜ್ಯೋತಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಶೇಖರಗೌಡ ಜಿ. ರಾಮತ್ನಳ, ಅನುಮತಿ ಪಡೆಯದೇ ನವೋದಯ ಕೋಚಿಂಗ್ ನಡೆಸಲಾಗುತ್ತಿದೆ. ಜತೆಗೆ ಅನಧೀಕೃತವಾಗಿ ಬೇರೆ ಬೇರೆ ತಾಲೂಕು ಮತ್ತು ಜಿಲ್ಲೆಗಳ 40ಕ್ಕಿಂತ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪಡೆದಿದ್ದರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಸತಿ ಇರಿಸಿಕೊಂಡಿದ್ದಕ್ಕೆ ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. 15 ದಿನ ಕಾಲಾವಕಾಶ ನೀಡಿದ್ದು, ಆದಷ್ಟು ಬೇಗ ಆಯಾ ಶಾಲೆಗೆ ಆ ಮಕ್ಕಳನ್ನು ಕಳುಹಿಸಬೇಕು ಹಾಗೂ ಅದರ ಸಂಪೂರ್ಣ ವರದಿಯನ್ನು ಬಿಇಒಗೆ ನೀಡಬೇಕು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಸಿಪಿಐ ರವಿಕುಮಾರ ಕಪ್ಪತನವರ, ಪಿಎಸ್‌ಐ ಜನಾರ್ದನ ಭಟ್ರಳ್ಳಿ, ಬಿಇಒ ಶಿವಾನಂದ ಮಲ್ಲಾಡದ, ಪ್ರಕಾಶ ಕೊಡ್ಲಿವಾಡ, ಚಿಕನಾಳ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.