ಸಾರಾಂಶ
ಹನೂರು: ಪಟ್ಟಣದ ಶ್ರೀ ಮಹಿಷಾಸುರ ಮರ್ದಿನಿ (ಮೈಸೂರು ಮಾರಮ್ಮ) ದೇಗುಲದಲ್ಲಿ ನವರಾತ್ರಿಯ ಅಂಗವಾಗಿ ಕಳೆದ 9 ದಿನಗಳಿಂದ ಪಟ್ಟದಲ್ಲಿ ಕೂರಿಸಲಾಗಿದ್ದ ದೇವಿಯ ವಿಗ್ರಹಮೂರ್ತಿಯನ್ನು ಶನಿವಾರ ಮೆರವಣಿಗೆಯ ಮೂಲಕ ಬನ್ನಿಮರಕ್ಕೆ ಕೊಂಡೊಯ್ದು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಮಹಾನವಮಿ ಹಾಗೂ ವಿಜಯದಶಮಿ ಹಬ್ಬದ ಅಂಗವಾಗಿ ಮಹಿಷಾಸುರ ಮರ್ದಿನಿ ವಿಗ್ರಹಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಪಟ್ಟದಲ್ಲಿ ಕೂರಿಸಲಾಗಿತ್ತು. ಪ್ರತಿನಿತ್ಯ ಪೂಜೆಯನ್ನು ಸಲ್ಲಿಸಲಾಗುತ್ತಿತ್ತು. 10ನೇ ದಿನವಾದ ವಿಜಯದಶಮಿಯಂದು ಬೆಳಿಗ್ಗೆ ದೇಗುಲದಲ್ಲಿ ದೇವಿಗೆ ಹಾಲು, ಮೊಸರು, ಬೆಣ್ಣೆ, ಜೇನುತುಪ್ಪ, ಎಳನೀರು, ಪನ್ನೀರು, ಪಂಚಾಮೃತ ಅಭಿಷೇಕವನ್ನು ನೆರವೇರಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು. ಮಧ್ಯಾಹ್ನ 2.30ರಲ್ಲಿ ಮಹಿಷಾಸುರ ಮರ್ದಿನಿ ವಿಗ್ರಹಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸಿದ ಬಳಿಕ ಹಳೇ ಎಂಡಿಸಿಸಿ ರಸ್ತೆ, ಬಸ್ ನಿಲ್ದಾಣ, ಬಂಡಳ್ಳಿ ರಸ್ತೆ, ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದ ಮೂಲಕ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಬನ್ನಿಮಂಟಪ ಬಡಾವಣೆಯಲ್ಲಿರುವ ಬನ್ನಿಮರಕ್ಕೆ ಮೆರವಣಿಗೆ ಮೂಲಕ ಕರೆದೊಯ್ದು ಸಂಪ್ರದಾಯದಂತೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಮೆರವಣಿಗೆಯುದ್ದಕ್ಕೂ ಯುವಕರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿದರು.