ಸಾರಾಂಶ
ಶಿವಮೊಗ್ಗ: ನವ್ಯಶ್ರೀ ನಾಗೇಶ ಅವರ ಪ್ರಕ್ರತಿಪ್ರೇಮ, ಸಮಾಜಮುಖಿ ಕೆಲಸ ಅನುಕರಣೀಯ. ಅವರು ಮಾಡುವ ಕೆಲಸ ಎಲ್ಲರೂ ಮಾಡಿದಲ್ಲಿ ಸಕಾಲದಲ್ಲಿ ಮಳೆ-ಬೆಳೆಯಾಗಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಪ್ರಾಯಪಟ್ಟರು.
ನವ್ಯಶ್ರೀ ಈಶ್ವರ ವನ ಚಾರಿಟೇಬಲ್ ಟ್ರಸ್ಟ್‌ನ ಶಿವರಾತ್ರಿ ಉತ್ಸವ-24 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಚಿತವಾಗಿ ಬಟ್ಟೆಯ ಚೀಲವನ್ನು ನೀಡುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆಗೆ ಪ್ರೇರೆಪಿಸುತ್ತಿರುವ ಗೀತಾ ಪಂಡಿತ್ ಹಾಗೂ ವೃದ್ಧರ, ಮಾನಸಿಕ ಅಸ್ವಸ್ಥರ ಮತ್ತು ಅನಾಥರ ಸೇವೆ ಮಾಡುವ ಶಿವಮೊಗ್ಗದ ಗುಡ್ ಲಕ್ ಅರೈಕೆ ಕೇಂದ್ರವನ್ನು ಗುರುತಿಸಿ, ಸನ್ಮಾನಿಸಿ ದೇಣಿಗೆ ನೀಡುವ ಸಮಾರಂಭದಲ್ಲಿ ಪಾಲ್ಗೊಂಡಿರುವುದು ನನ್ನ ಭಾಗ್ಯ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ನಾಗೇಶ್ ಕಳೆದ ಹಲವಾರು ವರ್ಷಗಳಿಂದ ಸದ್ದಿಲ್ಲದೇ ಸೇವೆ ಮಾಡುವ ಮೂಲಕ ಜನಾನುರಾಗಿ ಆಗಿದ್ದಾರೆ. ಹಸಿದವರಿಗೆ ಅನ್ನ ದಾಸೋಹ ಯೋಜನೆ ಮೂಲಕ ಸರ್ಕಾರ ಮಾಡದೇ ಇರುವ ಕೆಲಸ ಮಾಡುತ್ತಿದ್ದಾರೆ. ಪ್ರತಿವರ್ಷ ಶಿವರಾತ್ರಿ ಪ್ರಯುಕ್ತ ಸಾಮಾಜಿಕ, ಪರಿಸರ ಸಂರಕ್ಷಣೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಉಳಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಗುಡ್ ಲಕ್ ಅರೈಕೆ ಕೇಂದ್ರದವರು ಮಾಡುತ್ತಿರುವ ಹಿರಿಯರ, ಅನಾಥರ ಸೇವೆ ತುಂಬ ಒಳ್ಳೆಯ ಕೆಲಸ. ಇದು ಶಿವಮೊಗ್ಗದ ಹೆಮ್ಮೆಯ ಸಂಸ್ಥೆ ಎಂದರು.
ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಕಿರುಚಿತ್ರ ಪ್ರದರ್ಶನ, ಸಾಮಾಜಿಕ ಸೇವಾ ಪ್ರಶಸ್ತಿ ಮತ್ತು ಜಲಪಾತ ಚಲನಚಿತ್ರ ಸಂವಾದ ಕಾರ್ಯಕ್ರಮ ಹಾಗೂ ಗುಡ್ ಲಕ್ ಆರೈಕೆ ಕೇಂದ್ರದ ರವೀಂದ್ರನಾಥ್ ಐತಾಳ್ ಮತ್ತು ಗೀತಾ ಪಂಡಿತ್ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಜಲಪಾತ ಚಲನಚಿತ್ರ ನಿರ್ದೇಶಕರಾದ ರಮೇಶ ಬೇಗಾರ್, ನಿರ್ಮಾಪಕ ರವೀಂದ್ರ ತುಂಬರಮನೆ, ನಿರ್ದೇಶಕ ಕಾಸರವಳ್ಳಿ, ರವೀಂದ್ರನಾಥ ಐತಾಳ, ಜಿ.ವಿಜಯಕುಮಾರ, ಶಿವಪ್ಪ ಗೌಡ, ವಿ.ಎನ್. ಭಟ್ಟ, ವಿನಯ ಮತ್ತು ಮಾಜಿ ನಗರಸಭಾ ಸದಸ್ಯ ವಿಶ್ವಾಸ್ ಉಪಸ್ಥಿತರಿದ್ದರು.