ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಳೆದ 20 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ನಕ್ಸಲ್ ಸುರೇಶ್ ಅವರನ್ನು ಕೇರಳದ ಕಣ್ಣೂರಿನಲ್ಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ಕಣ್ಣೂರಿನ ದಟ್ಟ ಅರಣ್ಯದಲ್ಲಿ ಕಾಡಾನೆ ದಾಳಿ ಮಾಡಿದ ವೇಳೆಯಲ್ಲಿ ಅಂಗಡಿ ಸುರೇಶ್ ಗಾಯಗೊಂಡಿದ್ದ. ಆತನಿಗೆ ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಿಚಾರಣೆ ಮಾಡುವ ವೇಳೆಯಲ್ಲಿ ನಕ್ಸಲ್ ಸುರೇಶ್ ಎಂಬುದಾಗಿ ಬೆಳಕಿಗೆ ಬಂದಿದೆ.
ಸಣ್ಣಯ್ಯ, ಸಿದ್ದಮ್ಮ ದಂಪತಿಗೆ ಸುರೇಶ್ ಸೇರಿ ಒಟ್ಟು 5 ಜನ ಮಕ್ಕಳು, ಸುರೇಶ್ ವಿದ್ಯಾರ್ಥಿ ದೆಸೆಯಲ್ಲಿ ಹೋರಾಟದಲ್ಲಿ ತೊಡಗಿದ್ದರು. ಅವರು ಮೂಡಿಗೆರೆಯ ಡಿಎಸ್‌ಬಿಜಿ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದುಕೊಂಡಿದ್ದರು. ನಕ್ಸಲ್ ಸಂಘಟನೆಯಲ್ಲಿ 2004ರಲ್ಲೇ ಗುರುತಿಸಿಕೊಂಡ ಮೇಲೆ ಮನೆಯ ಸಂಪರ್ಕ ಕಳೆದುಕೊಂಡಿದ್ದರು. ತಂದೆ ಸಣ್ಣಯ್ಯ ಕಳೆದ 17 ವರ್ಷದ ಹಿಂದೆ ಮೃತಪಟ್ಟಾಗ ಅವರನ್ನು ನೋಡಲು ಸುರೇಶ್ ಬಂದಿರಲಿಲ್ಲ.ಹೋರಾಟ:
ಜಿಲ್ಲೆಯಲ್ಲಿ ಗಣಿಗಾರಿಕೆ, ಕುದುರೆಮುಖ ಮೀಸಲು ಅರಣ್ಯ ವಿರುದ್ಧ ಹಾಗೂ ತುಂಗಾ, ಭದ್ರಾ ಮೂಲ ಉಳಿಸಿ ಹೋರಾಟದ ಸಂದರ್ಭದಲ್ಲಿ ಸುರೇಶ್ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು.ಹೋರಾಟದ ಮೂಲ ಸ್ವರೂಪ ಬದಲಾಗಿ 2003ರ ವೇಳೆಗೆ ಬಂದೂಕು ಹಿಡಿದು ನಿಂತ ನಂತರ 2009 ರವರೆಗೆ ಜಿಲ್ಲೆಯಲ್ಲಿ ಸುಮಾರು 12 ಮಂದಿ ನಕ್ಸಲೀಯರು ಎನ್‌ಕೌಂಟರ್‌ಗೆ ಬಲಿಯಾದರು. ಬಿ.ಜಿ. ಕೃಷ್ಣಮೂರ್ತಿ, ಶ್ರೀಮತಿ, ಸುರೇಶ್ ಸೇರಿದಂತೆ 10 ಮಂದಿ ಭೂಗತ ಆಗಿದ್ದರು.
ಕೇರಳದ ಭವಾನಿದಳಂ ತಂಡದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದ ಶ್ರೀಮತಿ, ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಎ.ಎಸ್.ಸುರೇಶ್ ಸಕ್ರಿಯರಾಗಿದ್ದರು. ಶೃಂಗೇರಿ ತಾಲೂಕಿನಲ್ಲಿ 15 ಹಾಗೂ ಕೊಪ್ಪ ತಾಲೂಕಿನಲ್ಲಿ 2 ಪ್ರಕರಣಗಳಲ್ಲಿ ಸುರೇಶ್ ಭಾಗಿಯಾಗಿರುವುದು ಪೊಲೀಸರು ಕೇಸಲ್ಲಿ ದಾಖಲಾಗಿದೆ.ಮೃತಪಟ್ಟರೆಂಬ ಸುದ್ದಿ:
2019ರ ಅಕ್ಟೋಬರ್ 28 ರಂದು ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಗಳಿ ಗ್ರಾಮದ ಮಂಚಕಟ್ಟಿ ಅರಣ್ಯ ಪ್ರದೇಶದಲ್ಲಿ ನಕ್ಸಲರ ಗುಂಪೊಂದು ಸಭೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎಎನ್‌ಎಫ್ ನ ಥಂಡರ್‍ಬೋಲ್ಟ್ ತಂಡ ಎರಡು ಗುಂಪುಗಳಾಗಿ ಮಂಚಕಟ್ಟಿ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿದ್ದ ವೇಳೆ ನಕ್ಸಲರು ಎಎನ್‌ಎಫ್ ತಂಡದತ್ತ ಗುಂಡು ಹಾರಿಸಿದ್ದಾರೆ. ಇದಕ್ಕೆ ಎಎನ್‌ಎಫ್ ತಂಡದವರು ಪ್ರತಿದಾಳಿ ನಡೆಸಿದಾಗ ಈ ಗುಂಡಿನ ದಾಳಿಯಲ್ಲಿ ನಾಲ್ಕು ಮಂದಿ ನಕ್ಸಲರು ಹತರಾಗಿದ್ದು ಅವರಲ್ಲಿ ಶ್ರೀಮತಿ, ಸುರೇಶ್ ಸಹ ಇದ್ದರೆಂಬ ಸುದ್ದಿ ದಟ್ಟವಾಗಿ ಹರಡಿಕೊಂಡಿತ್ತು.ಆಗ ಸುರೇಶ್ ಅವರ ಅಣ್ಣ ಮಂಜುನಾಥ್ ಹಾಗೂ ಅಂಗಡಿ ಗ್ರಾಮದವರು ಕೇರಳದ ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಇರಿಸಿರುವ ನಾಲ್ಕು ಮಂದಿ ನಕ್ಸಲೀಯರ ಮೃತ ದೇಹಗಳ ಗುರುತು ಪತ್ತೆ ಹಚ್ಚಲು ತೆರಳಿದ್ದರು. ಅವುಗಳಲ್ಲಿ ಒಂದನ್ನು ತಮಿಳುನಾಡಿನ ಮಣಿ ವಸಗಂ ಎಂದು ಅವರ ಸಹೋದರಿ ಪತ್ತೆ ಹಚ್ಚಿದ್ದರು. ಸುರೇಶ್ ಹಾಗೂ ಶ್ರೀಮತಿ ಮೃತಪಟ್ಟಿಲ್ಲ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಾಪಾಸ್ ಆಗಿದ್ದರು.