ಸಾರಾಂಶ
ತಿಪ್ಪೇಶನ ತೇರು ಕಣ್ತುಂಬಿಕೊಳ್ಳಲು ಭಕ್ತ ಸಮೂಹದ ಕ್ಷಣಗಣನೆ । ನವ ವಧುವಿನಂತೆ ರಥೋತ್ಸವ ಗ್ರಾಮದ ಸಿಂಗಾರ
ಕನ್ನಡಪ್ರಭ ವಾರ್ತೆ ನಾಯಕನಹಟ್ಟಿನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯ ದೊಡ್ಡ ರಥೋತ್ಸವ ಮಾರ್ಚ್ 16 ರ ಭಾನುವಾರ ನಡೆಯಲಿದ್ದು, ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ಹಟ್ಟಿ ತಿಪ್ಪೇಶನ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.
ಮಧ್ಯ ಕರ್ನಾಟಕದ ಐತಿಹಾಸಿಕ ನಾಯಕನಹಟ್ಟಿ ಜಾತ್ರೆಗೆ ನಾಡಿನ ಹಲವು ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ. ಜಾತ್ರೆ ಪ್ರಯುಕ್ತ ನಾಯಕನಹಟ್ಟಿ ಪಟ್ಟಣ ನೂತನ ವಧುವಿನಂತೆ ಸಿಂಗಾರಗೊಂಡಿದೆ.ಪಟ್ಟಣದ ಎಲ್ಲಾ ವಾರ್ಡ್ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬಿಸಿಲು ಹೆಚ್ಚಿರುವ ಕಾರಣ ಭಕ್ತಾಧಿಗಳಿಗೆ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕಂದಾಯ ಇಲಾಖೆಯಿಂದ ಸುಮಾರು 50 ಟ್ಯಾಂಕರ್, 20 ಸಾವಿರ ಲೀಟರ್ ಸಾಮರ್ತ್ಯದ 6 ಹಾಲಿನ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರಿಗೆ ವ್ಯವಸ್ಥೆ ರೂಪಿಸಲಾಗಿದೆ.
ದೇವಾಲಯದ ರೂಢಿ ಮತ್ತು ಸಂಪ್ರದಾಯ ಧಾರ್ಮಿಕ ಪದ್ಧತಿಯಂತೆ ಮುಕ್ತಿಬಾವುಟವನ್ನು ಹರಾಜು ಮಾಡುತ್ತ ಬರಲಾಗಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖಾ ಕಾಯ್ದೆಯ ಸೆಕ್ಷನ್-58ರಂತೆ ಮುಕ್ತಿಬಾವುಟ ಹರಾಜು ನಡೆಸುವ ಮುಂಚೆ ನೂರು ರುಪಾಯಿ ಮುಖ ಬೆಲೆಯ ಛಾಪ ಕಾಗದ ತಯಾರಿಸಿಕೊಂಡು ಆಖೈರು ಹರಾಜುದಾರರನ್ನು 1ನೇ ಪಾರ್ಟಿಯಾಗಿ ಸಹಿ ಪಡೆಯಲು, ವರ್ಷದೊಳಗೆ ಹರಾಜಿನ ಮೊತ್ತವನ್ನು ಸಲ್ಲಿಸಲು ಒಂದು ಅಡ್ವಾನ್ಸ್ ದಿನಾಂಕದ ಚೆಕ್ ಪಡೆದುಕೊಳ್ಳಲು ಜಿಲ್ಲಾಧಿಕಾರಿ ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಅದರಂತೆಯೇ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಮುಕ್ತಿಬಾವುಟ ಹರಾಜಿನ ಬಾಬ್ತು ಬಾಕಿ ಇರಿಸಿಕೊಂಡಿರುವವರು ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಾತ್ರೆಗೆ ಬರುವ ಭಕ್ತರಿಗೆ ಪಟ್ಟಣದ ಹಲವು ಕಡೆಗಳಲ್ಲಿ ಶೌಚಾಲಯ ವ್ಯವಸ್ಥೆ, ಬಳಸಲು ನೀರಿನ ತೊಟ್ಟಿಗಳು, ಕೊಳವೆಬಾವಿಗಳಿಂದ ನಿರಂತರವಾಗಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ವ್ಯವಸ್ಥೆ, ಚರಂಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಫಿನಾಯಿಲ್, ಸೊಳ್ಳೆಗಳ ನಿಯಂತ್ರಣಕ್ಕೆ ಧೂಮೀಕರಣ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ.ಜಾತ್ರೆಯಲ್ಲಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಪಟ್ಟಣದ ಹಲವು ಕಡೆಗಳಲ್ಲಿ ಬಸ್‍ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ದಾವಣಗೆರೆ-ಜಗಳೂರು- ಹೊಸಪೇಟೆ ಕಡೆಯಿಂದ ಬರುವ ವಾಹನಗಳಿಗೆ ಪಟ್ಟಣದ ಗಂಗಯ್ಯನಹಟ್ಟಿ ಬಳಿ. ಬಳ್ಳಾರಿ-ಅನಂತಪುರ- ರಾಯದುರ್ಗ- ಕಲ್ಯಾಣದುರ್ಗ ಕಡೆಯಿಂದ ಬರುವ ವಾಹನಗಳಿಗೆ ತಳಕು ರಸ್ತೆಯ ಮದರಸಾದ ಬಳಿ. ಬೆಂಗಳೂರು- ತುಮಕೂರು- ಚಳ್ಳಕೆರೆ- ಚಿತ್ರದುರ್ಗ ಮಾರ್ಗದಿಂದ ಬರುವವರಿಗೆ ಮನಮೈನಹಟ್ಟಿ ಏಕಾಂತೇಶ್ವರ ದೇವಾಲಯದ ಬಳಿ ಬಸ್‍ನಿಲ್ದಾಣಗಳನ್ನು ತೆರೆಯಲಾಗಿದೆ.
200 ವಿಶೇಷ ವಾಹನಗಳ ಕಾರ್ಯಾಚರಣೆ:ಶ್ರೀ ಕ್ಷೇತ್ರ ನಾಯಕನಹಟ್ಟಿಯಲ್ಲಿ ಮಾ.15 ರಿಂದ 17ರ ವರೆಗೆ ಜರುಗಲಿರುವ ಶ್ರೀಗುರುತಿಪ್ಪೇರುದ್ರಸ್ವಾಮಿ ರಥೋತ್ಸವ ಅಂಗವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಪಾವಗಡ ಘಟಕಗಳಿಂದ ಒಟ್ಟು 200 ಜಾತ್ರಾ ವಿಶೇಷ ವಾಹನಗಳ ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಚಿತ್ರದುರ್ಗ-ನಾಯಕನಟ್ಟಿ ವಯಾ ಬೆಳಗಟ್ಟ, ಹಾಯ್ಕಲ್, ಚಳ್ಳಕೆರೆ. ಚಳ್ಳಕೆರೆ-ನಾಯಕನಹಟ್ಟಿ ವಯಾ ನೇರ್ಲಗುಂಟೆ. ಹಿರಿಯೂರು-ನಾಯಕನಹಟ್ಟಿ ವಯಾ ಸಾಣಿಕೆರೆ-ಚಳ್ಳಕೆರೆ-ನೇರ್ಲಗುಂಟೆ. ನಾಯಕನಹಟ್ಟಿ-ಪರಶುರಾಂಪು ವಯಾ ಚಳ್ಳಕೆರೆ ಮಾರ್ಗದಲ್ಲಿ ಸಂಚರಿಸಲಿವೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.